ಶಂಭು ಹುಬ್ಬಳ್ಳಿ – ಬೆಂಗಳೂರು : ಮಹಾಮಾರಿ ಕೋರೋನಾದಿಂದ ಈಗಾಗಲೇ ದೇಶವು ಆರ್ಥಿಕವಾಗಿ ಕಂಗೆಟ್ಟಿದೆ. ಈ ದಿಸೆಯಲ್ಲಿ ನಾವೆಲ್ಲರೂ ಒಟ್ಟಾಗಿ ಕೈ ಜೋಡಿಸಿ ಮಹಾಮಾರಿ ಮುಕ್ತವಾಗಿಸಲು ಪಣ ತೊಡಬೇಕಿದೆ. ಈಗಾಗಲೇ ಹಲವಾರು ಸಂಘಟನೆಗಳು, ಸಮಾಜ ಸೇವಕರು, ನಾನಾ ರೀತಿಯಲ್ಲಿ ಸಹಾಯ ಹಸ್ತ ನೆರವು ನೀಡುತ್ತ ಬಂದಿದ್ದಾರೆ.
ಈ ಕೋರೋನಾ ಮಹಾಮಾರಿಯಿಂದ ಕಾರ್ಮಿಕ ವರ್ಗದಿಂದ ಹಿಡಿದು ಎಲ್ಲಾ ಸ್ತರದ ಜನರಿಗೂ ಬಿಸಿ ಮುಟ್ಟಿರುವುದು ಖೇದಕರ. ಸಾಮಾನ್ಯ ಜನರು ಆರ್ಥಿಕವಾಗಿ ಬಹಳ ನೊಂದಿದ್ದಾರೆ. ಕೇಂದ್ರ ಸರಕಾರವು ಈಗಾಗಲೇ ಎಲ್ಲಾ ವರ್ಗದ ಜನರಿಗೆ ವಿಶೇಷ ಯೋಜನೆಗಳನ್ನು ರೂಪಿಸಿರುವುದು ಸತ್ಯ. ಇದು ಯಾವ ರೀತಿ ಕಾರ್ಯಗತವಾಗುವುದು ಕಾದು ನೋಡಬೇಕಿದೆ.
ಪತ್ರಕರ್ತರು ಹಾಗೂ ವಿಶೇಷವಾಗಿ ಪತ್ರಿಕಾಲಯದ ಕಾರ್ಮಿಕರಿಗೆ ಮಲ್ಲೇಶ್ವರಂ ಪತ್ರಕರ್ತರ ವೇದಿಕೆಯು ಹಲವು ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಇತ್ತೀಚಿನ ಕೋರೋನಾದಿಂದ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿರುವ ಕುಟುಂಬಗಳಿಗೆ ಮಲ್ಲೇಶ್ವರಂ ಪತ್ರಕರ್ತರ ವೇದಿಕೆಯು ಕೈಲಾದ ಸಹಾಯ ಮಾಡುತ್ತ ಬಂದಿದೆ.
ಈ ದಿಸೆಯಲ್ಲಿ ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ, ಪತ್ರಿಕಾಲಯಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಕಾರ್ಮಿಕ ವರ್ಗದವರಿಗೂ ಕಿಟ್‍ಗಳನ್ನು ನೀಡಲು ನಿರ್ಧರಿಸಿ, 300 ಕ್ಕೂ ಅಧಿಕ ಮಂದಿಗೆ ಈ ವ್ಯವಸ್ಥೆ ಮಾಡಲಾಯಿತು. ಪತ್ರಿಕಾ ರಂಗದ ಎಲ್ಲಾ ವರ್ಗದವರಿಗೆ ಈ ಸಂದರ್ಭದಲ್ಲಿ ಕಿಟ್‍ಗಳನ್ನು ನೀಡಿರುವುದು ಸಂತೋಷದ ವಿಚಾರ. ರಾಜ್ಯಾಧ್ಯಕ್ಷ ಜೆ.ಕೆ. ಮಹೇಶ್ ಅವರೇ ಹೇಳುವಂತೆ, ನಾವು ಕೇವಲ ಪತ್ರಕರ್ತರಿಗಲ್ಲದೇ ಎಲ್ಲಾ ವರ್ಗದವರಿಗೂ ಕೊಡಲು ನಿರ್ಧರಿಸಿದ್ದೆವು, ಮುಂದೆಯೂ ನಿರಂತರವಾಗಿ ನೀಡುವ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿಗಳು ಹಾಗೂ ಮಲ್ಲೇಶ್ವರದ ಬಿ.ಜೆ.ಪಿ ಖಜಾಂಚಿ ಡಾ. ಜಿ.ಎಸ್. ಚೌಧರಿನಾಯ್ಡು ಅವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ದತ್ತಿ ದೇವಾಲಯಗಳ ಸಂಘದ ರಾಜ್ಯಾಧ್ಯಕ್ಷ ಡಾ. ಜಾನಕೀರಾಮ್, ಮಲ್ಲೇಶ್ವರಂ ಪತ್ರಿಕೋದ್ಯಮಿ ಬಿ.ಕೆ. ಪ್ರಸನ್ನ, ಹಿರಿಯ ಬರಹಗಾರ ನರಸಿಂಹಮೂರ್ತಿ, ಕರ್ನಾಟಕ ಕಾರ್ಮಿಕ ಕಲ್ಯಾಣ ಪ್ರತಿಷ್ಠಾನದ ಮಲ್ಲಿಕಾರ್ಜುನ ರಾಜು, ಲೇಖಕ ಡಾ. ಕೆ.ಎಸ್.ವಿಜಯಕುಮಾರ್ ಸೇರಿದಂತೆ ನೂರಾರು ಪತ್ರಕರ್ತರು, ಪತ್ರಿಕಾ ಮಿತ್ರರು ಭಾಗವಹಿಸಿದ್ದರು.
Click this button or press Ctrl+G to toggle between Kannada and English