ನವದೆಹಲಿ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸ್ವಾವಲಂಬಿ ಭಾರತ ಪರಿಕಲ್ಪನೆಯೊಂದಿಗೆ ನಮ್ಮ ಇಲಾಖೆಯು ಹೆಜ್ಜೆಹಾಕುತ್ತಿದೆ. ಮುಂಬರುವ ದಿನಗಳಲ್ಲಿ ಔಷಧ, ರಸಗೊಬ್ಬರ ಹಾಗೂ ರಾಸಾಯನಿಕ ವಲಯದಲ್ಲಿ ದೇಶವನ್ನು ಸಂಪೂರ್ಣ ಸ್ವಾವಲಂಬಿ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಹೇಳಿದ್ದಾರೆ.
ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು ಔಷಧ ಮುಂತಾದ ಪ್ರಮುಖ ವಲಯಗಳಲ್ಲಿ ತೀವ್ರಗತಿಯಲ್ಲಿ ಸುಧಾರಣಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ, ಇನ್ನು ಆರೇಳು ವರ್ಷಗಳಲ್ಲಿ ಭಾರತವು ಬಹುತೇಕ ವಲಯಗಳಲ್ಲಿ ಸ್ವಾವಲಂಬಿಯಾಗುವ ವಿಶ್ವಾಸ ತಮ್ಮದು ಎಂದಿದ್ದಾರೆ.
ಭಾರತದ ಔಷಧೋದ್ಯಮವು ಮುಂಚಿನಿಂದಲೂ ಮುಂಚೂಣಿಯಲ್ಲಿದೆ. ಹೈಡ್ರೊಕ್ಸಿಕ್ಲೋರೋಕ್ವಿನ್, ಪೆರಾಸೆಟಾಮೋಲ್, ಅಜಿತ್ರೋಮೈಸಿನ್ ಮುಂತಾದ ಹಲವು ಔಷಧಗಳನ್ನು ನಾವು ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುತ್ತೇವೆ. ಆದರೆ ಅನೇಕ ಮೂಲ ರಾಸಾಯನಿಕಗಳಿಗಾಗಿ ನಾವಿನ್ನೂ ಚೈನಾದಂತಹ ದೇಶಗಳ ಮೇಲೆ ಅವಲಂಬಿತರಾಗಿದ್ದೇವೆ. ಉದಾಹರಣೆಗೆ ಎಪಿಐ (API – Active Pharmaceutical Ingredients), ಡಿಐ (Drug Intermidiates) ಹಾಗೂ ಕೆಎಸ್ಸೆಮ್ (KSMs – Key Starting Materials) ವರ್ಗಕ್ಕೆ ಸೇರಿದ ಹಲವು ಮಾದರಿಯ ರಾಸಾಯನಿಕಗನ್ನು ಶೇಕಡಾ 60ರಿಂದ ಶೇಕಡಾ 90ರವರೆಗೆ ನಾವು ಆಮದು ಮಾಡಿಕೊಳ್ಳುತ್ತಿದ್ದೇವೆ.
ಈ ಮೂಲ ರಾಸಾಯನಿಕಗಳನ್ನು ಆಮದುಮಾಡಿಕೊಳ್ಳುವುದೇ ಆರ್ಥಿಕವಾಗಿ ಲಾಭ ಎಂಬ ದೃಷ್ಟಿಯಿಂದ ನಮ್ಮ ಸ್ವದೇಶಿ ಕಂಪನಿಗಳು ಕೂಡಾ ಆಮದು ಮಾಡಿಕೊಳ್ಳುವ ಬಗ್ಗೆಯೇ ಹೆಚ್ಚು ಒಲವು ತೋರಿಸುತ್ತಿದ್ದವು. ಇನ್ನುಮೇಲೆ ಈ ಮೂಲ ರಸಾಯನಿಕಗಳನ್ನು ನಮ್ಮಲ್ಲಿಯೇ ಉತ್ಪಾದನೆ ಮಾಡಲು ಉತ್ತೇಜನ ನೀಡಲಿದ್ದೇವೆ. ಇದಕ್ಕಾಗಿ 6940 ಕೋಟಿ ರೂಪಾಯಿಯ ಉತ್ಪಾದನಾ ಆಧಾರಿತ ಪ್ರೋತ್ಸಾಹಧನ ಯೋಜನೆಯನ್ನು ರೂಪಿಸಿದ್ದೇವೆ. ಪ್ರೋತ್ಸಾಹಧನ 2027-28ರವರೆಗೆ ಮುಂದುವರಿಯಲಿದೆ.
ರಾಯಚೂರಿನಲ್ಲಿ ಫಾರ್ಮಾ ಪಾರ್ಕ್: ಇದರ ಜತೆಗೇ ದೇಶದ ಹಲವು ಕಡೆಗಳಲ್ಲಿ ಹೊಸದಾಗಿ “ಬಲ್ಕ್ ಡ್ರಗ್ ಪಾರ್ಕ್”ಗಳನ್ನು ಅಭಿವೃದ್ಧಿಪಡಿಸಲು ಯೋಜಿಸಿದ್ದೇವೆ. ಇದಕ್ಕಾಗಿ 3 ಸಾವಿರ ಕೋಟಿ ರೂಪಾಯಿ ಮೊತ್ತವನ್ನು ತೆಗೆದಿರಿಸಿದ್ದೇವೆ. ಕರ್ನಾಟಕದ ರಾಯಚೂರಿನಲ್ಲಿಯೂ ಇಂತಹದೊಂದು ಪಾರ್ಕ್‌ನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ರಾಜ್ಯ ಸರ್ಕಾರವು ಅಗತ್ಯ ಭೂಮಿಯನ್ನು ಒದಗಿಸಿದ ಕೂಡಲೇ ನಿರ್ಮಾಣ ಕಾರ್ಯ ಆರಂಭವಾಗಲಿದೆ.
ಹಾಗೆಯೇ ದೇಶದ ಬೇರೆಬೇರೆ ಭಾಗಗಳಲ್ಲಿ ನಾಲ್ಕು ಕಡೆ ವೈದ್ಯಕೀಯೋಪಕರಣ ಕೈಗಾರಿಕಾ ವಲಯವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು ಆರಂಭಿಕವಾಗಿ 400 ಕೋಟಿ ರೂಪಾಯಿ ಅನುಧಾನ ತೆಗೆದಿರಿಸಲಾಗಿದೆ. ಅದೇರೀತಿ ಈಗಾಗಲೇ ಅಸ್ತಿತ್ವದಲ್ಲಿರುವ ಸ್ವದೇಶಿ ಕಂಪನಿಗಳು ಹೆಚ್ಚೆಚ್ಚು ಗುಣಮಟ್ಟದ ವೈದ್ಯಕೀಯ ಉಪಕರಣಗಣಗಳನ್ನು ತಯಾರಿಸುವಂತೆ ಪ್ರೋತ್ಸಾಹ ನೀಡಲು ಯೋಜನೆ ರೋಪಿಸಲಾಗಿದೆ. ಇದಕ್ಕಾಗಿ 3420 ಕೋಟಿ ರೂಪಾಯಿ ಒದಗಿಸಲು ಈಚೆಗೆ ಕೇಂದ್ರ ಸಂಪುಟವು ಒಪ್ಪಿಗೆ ನೀಡಿದೆ. ಇದು ಉತ್ಪಾದನೆ ಆಧಾರಿತ ಪ್ರೋತ್ಸಾಹಧನವಾಗಿದ್ದು 2025-26ರವರೆಗೆ ಮುಂದುವರಿಯಲಿದೆ.
ಕಳೆದ ಮಾರ್ಚ್ 5ರಿಂದ 7ರವರೆಗೆ ಗಾಂಧಿನಗರದಲ್ಲಿ ಅಂತಾರಾಷ್ಟ್ರೀಯ “India Pharma 2020 & India Medical Device 2020” ಮೇಳವನ್ನು ನಡೆಸಲಾಯಿತು. ಇದರಲ್ಲಿ ಪಾಲ್ಗೊಂಡ ಹಲವು ಬಹುರಾಷ್ಟ್ರೀಯ ಔಷಧ ಕಂಪನಿಗಳು ಭಾರತದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿವೆ.
ಜನೌಷಧ: ಜನಸಾಮಾನ್ಯರಿಗೆ ಅತ್ಯಂತ ಕಡಿಮೆ ದರದಲ್ಲಿ ಗುಣಮಟ್ಟದ ಅಲೊಪತಿ ಔಷಧ ಒದಗಿಸುವ ನಮ್ಮ ಇಲಾಖೆಯ ಜನೌಷಧಿ ಕೇಂದ್ರಗಳು ದಿನದಿಂದ-ದಿನಕ್ಕೆ ಜನಪ್ರಿಯಗೊಳ್ಳುತ್ತಿವೆ. ಕಳೆದ ವರ್ಷ (2019-20) ಒಂದರಲ್ಲೇ ಹೊಸದಾಗಿ 1250 ಜನೌಷಧ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ದೇಶದ ಬಹುತೇಕ ಜಿಲ್ಲೆಗಳಿಗೆ ಜನೌಷಧದ ಸೌಲಭ್ಯಗಳನ್ನು ವಿಸ್ತರಿಸಲಾಗಿದ್ದು ಸದ್ಯ ಒಟ್ಟು 6331 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 2018-19ರ ವರ್ಷಕ್ಕೆ ಹೋಲಿಸಿದರೆ ಕಳೆದ ವರ್ಷ ಜನೌಷಧ ಕೇಂದ್ರಗಳ ವಹಿವಾಟು ಶೇಕಡಾ 25ರಷ್ಟು ಹೆಚ್ಚಾಗಿದೆ. ವಿಶೇಷವೇನಂದರೆ ಲಾಕ್ಡೌನ್ ಅವಧಿಯಲ್ಲೂ ವಹಿವಾಟು ಜಾಸ್ತಿಯಾಗಿದೆ.
ಇನ್ನೊಂದು ವಿಚಾರವನ್ನು ನಾನಿಲ್ಲಿ ಹೇಳಲೇಬೇಕು. ಸಾಮಾನ್ಯ ಔಷಧ ಅಂಗಡಿಗಳಲ್ಲಿ ಸಿಗುವ ಔಷಧಕ್ಕೂ ನಮ್ಮ ಜನೌಷಧಿ ಅಂಗಡಿಗಳಲ್ಲಿ ಸಿಗುವ ಔಷಧಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಅವರೆಡೂ ಒಂದೇ. ಆದರೆ ನಾವು ಅದನ್ನು ಯಾವುದೇ ಕಂಪನಿಗಳ ಬ್ರಾಂಡ್‌ಗಳಲ್ಲಿ ಮಾರುವುದಿಲ್ಲ. ಮೂಲ ರಾಸಾಯನಿಕದ ಹೆಸರಿನಲ್ಲಿಯೇ ಮಾರುತ್ತೇವೆ. ನಮ್ಮ ಜನೌಷಧಗಳ ದರ ಶೇಕಡಾ 10ರಿಂದ ಶೇಕಡಾ 90ರಷ್ಟು ಕಡಿಮೆ ಇರುತ್ತದೆ. ದರ ಕಡಿಮೆ ಇದೆ ಅಂದಾಕ್ಷಣ ಗುಣಮಟ್ಟದ ಬಗ್ಗೆ ಸಂಶಯ ಬೇಡ. ಅತ್ಯಂತ ಕಟ್ಟುನಿಟ್ಟಿನ ಮಾನದಂಡ ಬಳಸಿ ಜನೌಷಧಗಳ ಗುಣಮಟ್ಟ ತಪಾಸಣೆ ಮಾಡಲಾಗುತ್ತದೆ. ಸಾಮಾನ್ಯ ಜನರ ಹಿತಕಾಯಲು ಕೇಂದ್ರವು ರಿಯಾಯಿತಿ ದರದಲ್ಲಿ ಅಗತ್ಯ ಔಷಧಗಳನ್ನು ಪೂರೈಸುತ್ತಿದೆ ಅಷ್ಟೆ. ಜನೌಷಧಿ ಮೂಲಕ ಕಳೆದ ವರ್ಷವೊಂದರಲ್ಲೇ ಜನಸಾಮಾನ್ಯರ ಅಂದಾಜು 3000 ಕೋಟಿ ರೂಪಾಯಿಯಷ್ಟು ಹಣ ಉಳಿತಾಯ ಮಾಡಿಕೊಟ್ಟಿದ್ದೇವೆ.
ಜನೌಷಧಿ ಆಪ್ : ಇದೇ ವರ್ಷ ಅತ್ಯಂತ ಜನೋಪಯೋಗಿ “ಜನೌಷಧಿ ಆಪ್” ಅಭಿವೃದ್ಧಿಪಡಿಸಿದ್ದೇವೆ. ಸಾರ್ವಜನಿಕರು ಇದನ್ನು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬಹುದು. ಈ ಆಪ್ ಮೂಲಕ ತಮ್ಮ ಹತ್ತಿರದಲ್ಲಿ ಜನೌಷಧಿ ಕೇಂದ್ರ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಬಹುದು. ಹಾಗೆಯೇ, ಆ ಜನೌಷಧಿ ಕೇಂದ್ರದಲ್ಲಿ ತಮಗೆ ಅಗತ್ಯವಿರುವ ಮಾತ್ರೆಗಳು ಲಭ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು. ವಯಸ್ಸಾದವರಿಗೆ ಮನೆಮನೆಗೇ ಔಷಧ ಒದಗಿಸುವ ಸೌಲಭ್ಯ ಕೂಡಾ ಆರಂಭಿಸಲಾಗಿದೆ. ಹೆಚ್ಚೆಚ್ಚು ಜನ ಇದರ ಸದುಪಯೋಗ ಪಡೆದುಕೊಳ್ಳಬೇಕೆಂಬುದು ನಮ್ಮ ಆಶಯ ಎಂದು ಸಚಿವರು ಹೇಳಿದರು.
ಪೆಟ್ರೋಕೆಮಿಲ್ಸ್ : ಪೆಟ್ರೋಕೆಮಿಲ್ಸ್ ವಿಭಾಗದಲ್ಲಿಯೂ ಭಾರತವು ಆದಷ್ಟು ಬೇಗ ಸ್ವಾವಲಂಬನೆ ಗಳಿಸಬೇಕು ಎಂಬುದು ನಮ್ಮ ಉದ್ದೇಶ. ಈಗಿರುವ ಕಂಪನಿಗಳಲ್ಲಿ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಕ್ಷಮತೆ ಹೆಚ್ಚಿಸಲು ಅನೇಕ ಕ್ರಮ ಕೈಗೊಂಡಿದ್ದೇವೆ. ಬಂಡವಾಳ ಆಕರ್ಷಿಸಲೂ ವಿಶೇಷ ಪ್ರಯತ್ನ ನಡೆಸಲಾಗುತ್ತಿದೆ. ಪರಿಣಾಮವಾಗಿ ಜರ್ಮನಿ ಮೂಲದ ಬಾಸ್ಫ್ (BASF) ಕಂಪನಿಯು ಅಬುದಾಬಿ ನ್ಯಾಶನಲ್ ಆಯಿಲ್ ಕಂಪನಿ (ANDOC), ಆದಾನಿ ಸಮೂಹ ಕಂಪನಿ (ADANI) ಮತ್ತು ಬೋರಿಯಲಿಸ್ ಎಜಿ (Borealis AG) ಕಂಪನಿ ಜತೆ ಜಂಟಿಯಾಗಿ ಗುಜರಾತಿನ ಮುಂದ್ರಾದಲ್ಲಿ ಪುನರರ್ಬಳಕೆ ಇಂಧನ ಆಧಾರಿತ “ಗ್ರೀನ್ ಕೆಮಿಕಲ್ ಕಾಂಪ್ಲೆಕ್ಷ್” ಸ್ಥಾಪಿಸುತ್ತಿದೆ. ಇವು ಒಟ್ಟಾರೆ 30 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡುತ್ತಿವೆ. ಇದು ಕೆಲಸ ಆರಂಭಿಸಿದಾಗ ಆರು ಸಾವಿರ ನೇರ ಉದ್ಯೋಗ ಸೃಷ್ಟಿಯಾಗಲಿದೆ. ಇದರ ಎರಡುಪಟ್ಟು ಅಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ವರ್ಷಕ್ಕೆ ಸುಮಾರು 10500 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ ಎಂದು ಅವರು ತಿಳಿಸಿದರು.
ಸಿಪೆಟ್ : ಇಲಾಖೆಯ ಅಧೀನದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ & ಟೆಕ್ನೊಲೊಜಿ – ಸಿಪೆಟ್ (Institute of Petrochemicals Engineering & Technology – CIPET) ಮುಂತಾದ ಸಂಸ್ಥೆಗಳು ಹೊಸ ಹೊಸ ಸಂಶೋಧನೆ ಮೂಲಕ ವಲಯದ ತಂತ್ರಜ್ಞಾನ ಉನ್ನತೀಕರಣಕ್ಕೆ ಮಹತ್ವದ ಕೊಡುಗೆ ನೀಡುತ್ತಿವೆ. ಕೈಗಾರಿಕೆಗಳಿಗೆ ಅಗತ್ಯವಾದ ನುರಿತ ಮಾನವ ಸಂಪನ್ಮೂಲವನ್ನು ಒದಗಿಸುತ್ತಿದೆ. ಬೆಂಗಳೂರು ಸೇರಿದಂತೆ ದೇಶದ ಮೂರು ಕಡೆ ಈ ವರ್ಷ ಸಿಪೆಟ್‌ನ ಸಂಶೋಧನಾ ಕೇಂದ್ರಗಳನ್ನು ಆರಂಭಿಸಿದ್ದೇವೆ ಎಂದರು.
ರಸಗೊಬ್ಬರ : ರಸಗೊಬ್ಬರ ಇಲಾಖೆ ಕೂಡಾ ಕಳೆದ ಸಾಲಿನಲ್ಲಿ (2019-20) ಅದಕ್ಕೂ ಹಿಂದಿನ ವರ್ಷಕ್ಕೆ (2018-19) ಹೋಲಿಸಿದರೆ ಗಣನೀಯ ಸಾಧನೆ ಮಾಡಿದೆ. 2018-19ರ ಹೀಂಗಾರು ಹಂಗಾಮಿನಲ್ಲಿ ಇಲಾಖೆಯು ಯೂರಿಯಾ, ಡಿಎಪಿ, ಎಂಓಪಿ ಹಾಗೂ ಎನ್.ಪಿ.ಕೆ.ಎಸ್ ಮಾದರಿಯ ಗೊಬ್ಬರಗಳೆಲ್ಲ ಸೇರಿ ಒಟ್ಟು 273.62 ಲಕ್ಷ ಟನ್ ರಸಗೊಬ್ಬರ ಪೂರೈಸಿತ್ತು. ಕಳೆದ ಹಿಂಗಾರು ಹಂಗಾಮಿನಲ್ಲಿ (2019-20) 323.27 ಲಕ್ಷ ಟನ್ ರಸಗೊಬ್ಬರ ಪೂರೈಸಿತು.
ರಸಗೊಬ್ಬರ ಸಬ್ಸಿಡಿ: ನಮ್ಮ ಇಲಾಖೆಯು 2018-19ರಲ್ಲಿ ರೈತರು ಕೊಳ್ಳುವ ರಸಗೊಬ್ಬರದ ಮೇಲೆ ಒಟ್ಟು 73,435.21 ಕೋಟಿ ರೂಪಾಯಿ ಸಬ್ಸಿಡಿ ನೀಡಿತ್ತು. ಕಳೆದ ವರ್ಷ ಅಂದರೆ 2019-20ರಲ್ಲಿ 83467.84 ಕೋಟಿ ರೂಪಾಯಿ ರಸಗೊಬ್ಬರ ಸಬ್ಸಿಡಿ ನೀಡಿದೆ. ಈ ಹಣಕಾಸು ವರ್ಷದಲ್ಲಿ ಇದುವರೆಗೆ (ಏಪ್ರಿಲ್, ಮೇ) 20974.06 ಕೋಟಿ ರೂಪಾಯಿ ರಸಗೊಬ್ಬರ ಸಬ್ಸಿಡಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಸದಾನಂದ ಗೌಡ ಹೇಳಿದರು.
ಲಾಕ್ಡೌನ್ : ಲಾಕ್ಡೌನ್‌ನಂಥ ಸಂಕಷ್ಟದ ಸಮಯದಲ್ಲಿಯೂ ಇಲಾಖೆ ಅತ್ಯಂತ ಕ್ಷಮತೆಯಿಂದ ಕೆಲಸಮಾಡಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಸಾರಿಗೆ, ಕೊರಿಯರ್ ಬಂದಾದಾಗ ಮೂರ್ನಾಲ್ಕು ದಿನದಲ್ಲಿಯೇ ಬದಲಿ ವ್ಯವಸ್ಥೆ ಮಾಡಿದೆವು. ಆ ಮೂಲಕ ಎಲ್ಲಿಯೂ ಔಷಧಗಳ ಕೊರತೆಯಾಗದಂತೆ ನೋಡಿಕೊಂಡೆವು.
ಹಾಗೇಯೇ ರಸಗೊಬ್ಬರ ಸಾಗಣೆಯನ್ನು ಯಶಸ್ವಿಯಾಗಿ ನಿಭಾಯಿಸಿದೆವು. ಪ್ರತಿದಿನ 50ಕ್ಕಿಂತ ಹೆಚ್ಚು ಗೂಡ್ಸ್‌ಟ್ರೇನುಗಳು ದೇಶದ ಬೇರೆ ಬೇರೆ ಭಾಗಗಗಲ್ಲಿ ರಸಗೊಬ್ಬರ ಸಾಗಣೆಯಲ್ಲಿ ತೊಡಗಿರಬೇಕು. ಅಂದಾಗ ಮಾತ್ರ ಬೇರೆಬೇರೆ ರಾಜ್ಯಗಳಲ್ಲಿ ರಸಗೊಬ್ಬರ ಪೂರೈಕೆ ಸಮರ್ಪಕವಾಗಿರಲು ಸಾಧ್ಯ. ಮೇ ತಿಂಗಳಲ್ಲಿ ದೇಶದ ರೈತರಿಗೆ ವಿವಿಧ ಮಾದರಿಯ 42.24 ಲಕ್ಷ ಟನ್ ರಸಗೊಬ್ಬರ ಸಾಕು. ಆದರೆ ವಿವಿಧ ರಾಜ್ಯಗಳಲ್ಲಿ ನಿನ್ನೆಯ (ಮೇ 29) ಲೆಕ್ಕದ ಪ್ರಕಾರ 193.79 ಲಕ್ಷ ಟನ್ ರಸಗೊಬ್ಬರ ದಾಸ್ತಾನಿದೆ. 2019ರ ಏಪ್ರಿಲ್, ಮೇ ತಿಂಗಳಿಗೆ ಹೋಲಿಸಿದರೆ 2020ರ ಏಪ್ರಿಲ್, ಮೇ ತಿಂಗಳಲ್ಲಿ ನಮ್ಮಿಂದಾದ ಪೂರೈಕೆ ಮತ್ತು ರೈತರು ಮಾಡಿದ ಖರೀದಿ ಪ್ರಮಾಣದಲ್ಲಿ ಶೇಕಡಾ 30ರಿಂದ 49ರ ತನಕ ಹೆಚ್ಚಳವಾಗಿದೆ. ಇದು ರೈತರು ಮುಂಗಾರು ಬಿತ್ತನೆಗೆ ಭರ್ಜರಿ ತಯಾರಿ ನಡೆಸಿರುವುದರ ಸೂಚನೆಯಾಗಿದೆ ಎಂದು ಸಚಿವರು ತಿಳಿಸಿದರು.
ದೇಶದಲ್ಲಿ ವರ್ಷದಿಂದ ವರ್ಷಕ್ಕೆ ರಸಗೊಬ್ಬರ, ಕೀಟನಾಶಕ ಬಳಕೆ ಪ್ರಮಾಣ ಹೆಚ್ಚಾಗುತ್ತಿದೆ. ಮುಂಬರುವ ದಿನಗಳಲ್ಲಿ ದೇಶವು ಈ ವಲಯದಲ್ಲಿ ಸ್ವಾವಲಂಬಿಯೂ ಆಗುತ್ತದೆ. ಆದರೆ ತಾತ್ವಿಕವಾಗಿ ಹೇಳಬೇಕೆಂದರೆ ಕೃಷಿಯಲ್ಲಿ ಅತಿಯಾಗಿ ರಸಗೊಬ್ಬರ, ಕೀಟನಾಶಕ ಬಳಕೆಯನ್ನು ನಾನು ವಿರೋಧಿಸುತ್ತೇನೆ. ರೈತರು ಆದಷ್ಟು ನೈಸರ್ಗಿಕ, ಸಾವಯವ ಕೃಷಿಗೇ ಒತ್ತುಕೊಡಬೇಕು ಎಂಬುದು ನನ್ನ ಇಚ್ಛೆ. ಪರಿಸರ ರಕ್ಷಣೆ, ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಲು ಇದು ಅಗತ್ಯ ಎಂದು ಸದಾನಂದ ಗೌಡ ಅವರು ಪ್ರತಿಪಾದಿಸಿದರು.
Click this button or press Ctrl+G to toggle between Kannada and English