ಬೆಂಗಳೂರು : ಈ ವರ್ಷದ ವಿಶ್ವ ತಂಬಾಕು ರಹಿತ ದಿನದ ಧ್ಯೇಯ ವಾಕ್ಯವೆಂದರೆ, “ತಂಬಾಕು ಉದ್ಯಮಗಳ ಕುತಂತ್ರ ಹಾಗೂ ತಂಬಾಕು ಮತ್ತು ನಿಕೋಟಿನ್ ಬಳಕೆಯಿಂದ ಯುವ-ಪೀಳಿಗೆಗಳ ರಕ್ಷಣೆ ಮಾಡುವುದು” ಎಂದಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ತಿಳಿಸಿದರು.
ಇಂದು ಅವರು ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಶ್ವ ತಂಬಾಕು ರಹಿತ ದಿನದ ಮುಖ್ಯ ಉದ್ದೇಶ ತಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ದುಷ್ಪರಿಣಾಮಗಳು, ಸಾವು-ನೋವುಗಳು ವಿವಿಧ ಅಸಾಂಕ್ರಮಿಕ ಕಾಯಿಲೆಗಳಿಗೆ ತುತ್ತಾಗುವುದರ ಕುರಿತು ಸಾರ್ವಜನಿಕರಿಗೆ ಅರಿವನ್ನುಂಟು ಮಾಡುವುದಾಗಿದೆ.
ಪ್ರತಿ ವರ್ಷ 10 ಲಕ್ಷ ಜನರು ತಂಬಾಕು ಉತ್ಪನ್ನಗಳ ಬಳಕೆಯಿಂದಾಗಿ ಸಾವನ್ನಪ್ಪುತ್ತಾರೆ. ತಂಬಾಕು ಉದ್ಯಮಕ್ಕೆ ಮಕ್ಕಳು ಮತ್ತು ಯುವ-ಪೀಳಿಗೆಯನ್ನು ಗುರಿಯಾಗಿಸಿಕೊಂಡಿದೆ. ಮಕ್ಕಳು ಮತ್ತು ಯುವ ಪೀಳಿಗೆಯನ್ನು ಉತ್ಪನ್ನಗಳನ್ನು ಬಳಸಲು ಅಥವಾ ಆಕರ್ಷಿತರಾಗಲು ತಂಬಾಕು ಉದ್ಯಮವು ವಿವಿಧ ವಿನ್ಯಾಸ, ಉತ್ತಮ ಪ್ರಚಾರ ಮತ್ತು ಲೆಕ್ಕಾಚಾರದ ಜಾಹೀರಾತುಗಳ ಮೂಲಕ ತಂಬಾಕು ಉತ್ಪನ್ನಗಳಿಗೆ ಆಕರ್ಷಿತವಾಗುವಂತೆ ಮಾಡುತ್ತಿದೆ ಎಂದರು.
ವಿಶ್ವ ಆರೋಗ್ಯ ಸಂಸ್ಥೆ ನಡೆಸಿರುವ ಗ್ಲೋಬಲ್ ಅಡಲ್ಟ್ ಟೊಬ್ಯಾಕೋ ಸರ್ವೇ-2016-17 ರಂತೆ, ರಾಜ್ಯದಲ್ಲಿ ತಂಬಾಕು ಉತ್ಪನ್ನಗಳ ಸೇವನೆ ಮಾಡುವವರ ಸಂಖ್ಯೆ 28.2 % ರಿಂದ 22.8 % ರಷ್ಟು ಇಳಿಕೆಯಾಗಿರುತ್ತದೆ ಎಂದು ತಿಳಿಸಿದೆ. ಅದರಲ್ಲಿ 8.8 % ಧೂಮಪಾನಿಗಳು ಮತ್ತು 16.3% ಜಗಿಯುವ ತಂಬಾಕು ಉತ್ಪನ್ನಗಳ ಸೇವನೆ ಮಾಡುವವರಾಗಿದ್ದಾರೆ ಹಾಗೂ 23.93 ರಷ್ಟು ಸಾರ್ವಜನಿಕ ಸ್ಥಳಗಳಲ್ಲಿ ಪರೋಕ್ಷವಾಗಿ ಧೂಮಪಾನಕ್ಕೆ ಒಳಗಾಗುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ. ಇನ್ನೊಂದು ಆಘಾತಕಾರಿ ವಿಷಯವೇನೆಂದರೇ ರಾಜ್ಯದಲ್ಲಿ ಸುಮಾರು 19 ವರ್ಷಕ್ಕೆ ಯುವಕ/ಯುವತಿಯರು ತಂಬಾಕು ಉತ್ಪನ್ನಗಳ ಸೇವನೆಯನ್ನು ಪ್ರಾರಂಭಿಸಿರುತ್ತಾರೆಂದು ವರದಿಯಲ್ಲಿ ಉಲ್ಲೇಖಿಸಿಸಲಾಗಿದೆ.
ಜಗಿಯುವ ತಂಬಾಕು ಮತ್ತು ಪಾನ್ ಮಸಾಲ ಸೇವನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದರಿಂದ ಕೋವಿಡ್ ಸೋಂಕು ತಗಲುವ ಸಾಧ್ಯತೆ ಇದ್ದು, ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೋವಿಡ್ ಸೋಂಕನ್ನು ತಡೆಗಟ್ಟಲು ಆದೇಶ ಹೊರಡಿಸಿದ್ದು, ಸದರಿ ಆದೇಶವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಇದೇ ಸಮಯದಲ್ಲಿ ಬಿಡುಗಡೆಗೊಳಿಸಿದರು.
ತಂಬಾಕು ಹಾಗೂ ಪಾನ್ ಮಸಾಲ ಉತ್ಪನ್ನಗಳ ಸೇವನೆ ಮಾಡುವುದರಿಂದ ಮನುಷ್ಯರ ರೋಗನಿರೋಧಕ ಶಕ್ತಿಯು ಕಡಿಮೆಯಾಗಿ ಕೋವಿಡ್ -19 ಸೋಂಕಿಗೆ ತುತ್ತಾಗುವ ಅಪಾಯ ಅಧಿಕವಾಗಿರುತ್ತದೆ. ಸಾರ್ವಜನಿಕ ಪ್ರದೇಶಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಮತ್ತು ಉಗುಳುವಿಕೆಯಿಂದಾಗಿ ಕೋವಿಡ್ -19 ಹರಡುವ ಸಾಧ್ಯತೆಯು ಅಧಿಕವಾಗಿರುತ್ತದೆ.
ರಾಜ್ಯ ತಂಬಾಕು ನಿಯಂತ್ರಣ ಘಟಕವು ಎಲ್ಲಾ 30 ಜಿಲ್ಲೆಗಳಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರಗಳನ್ನು ಜಿಲ್ಲಾ ಆಸ್ಪತ್ರೆಗಳಲ್ಲಿ ಸ್ಥಾಪಿಸಿದ್ದು, ತಂಬಾಕು ತ್ಯಜಿಸಲು ಇಚ್ಚಿಸುವವರು ಉಚಿತವಾಗಿ ಇದರ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ ಎಂದು ಸಚಿವರು ತಿಳಿಸಿದರು.
Click this button or press Ctrl+G to toggle between Kannada and English