ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಬೆಳ್ಳಿ ಪರದೆ ಮತ್ತು ಕಿರುತೆರೆ ಲೋಕಕ್ಕೆ ಅಪಾರ ಸೇವೆ ಸಲ್ಲಿಸಿದ ಹಿರಿಯ ನಟಿ ವೈಶಾಲಿ ಕಾಸರವಳ್ಳಿ ಅವರ ಅಂತ್ಯಸಂಸ್ಕಾರ ಇಂದು ಸಂಜೆ ನಾಲ್ಕು ಗಂಟೆಗೆ ಬನಶಂಕರಿಯ ಚಿತಾಗಾರದಲ್ಲಿ ನಡೆಯಲಿದೆ. ವೈಶಾಲಿ ಕಾಸರವಳ್ಳಿ ದೀರ್ಘ ಕಾಲದ ಅನಾರೋಗ್ಯದಿಂದ ಚೇತರಿಸದೆ ಸೋಮವಾರ ನಿಧನರಾಗಿದ್ದಾರೆ.
ರಂಗಭೂಮಿಯಲ್ಲಿ ಬಹಳಷ್ಟು ಸಾಧನೆ ಮಾಡಿದ್ದ ವೈಶಾಲಿ ಕಾಸರವಳ್ಳಿ ನಿರ್ದೇಶಕಿ, ವಸ್ತ್ರವಿನ್ಯಾಸಕಿ ನಟಿಯೂ ಆಗಿದ್ದರು, ಪತಿ, ಖ್ಯಾತ ನಿರ್ದೇಶಕ ಗಿರೀಶ ಕಾಸರವಳ್ಳಿ, ಪುತ್ರಿ ಅನನ್ಯ ಹಾಗೂ ಪುತ್ರ ಅಪೂರ್ವ ಅವರನ್ನು ಅಗಲಿದ್ದಾರೆ.
ವೈಶಾಲಿ ಕಾಸರವಳ್ಳಿ ಅವರ ಪಾರ್ಥಿವ ಶರೀರವನ್ನು ಜೆಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಬಯಲು ರಂಗ ಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ, ಅಭಿಮಾನಿಗಳು, ಬಂಧು ಮಿತ್ರರು, ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಮಾಡುತ್ತಿದ್ದಾರೆ.
ನಿರ್ದೇಶನ ಮಾಡುವ ಕನಸು ಹೊತ್ತಿದ್ದ ಕಾಸರವಳ್ಳಿಯವರಿಗೆ ಅನಾರೋಗ್ಯ ಕಾಡಿತ್ತು, ತಾನು ಶೀಘ್ರ ಗುಣಮುಖ ಹೊಂದಿ ಕನ್ನಡ ಚಿತ್ರವೊಂದನ್ನು ನಿರ್ದೇಶಿಸಬೇಕೆಂಬ ಕನಸನ್ನು ಕಂಡಿದ್ದರು. ಕಿರುತೆರೆಗೆ ಧಾರಾವಾಹಿಗಳನ್ನು ನಿರ್ದೇಶಿಸಿ ಧಾರಾವಾಹಿ ಲೋಕಕ್ಕೆ ಹೊಸ ಮೆರುಗನ್ನೂ ತಂದುಕೊಟ್ಟಿದ್ದರು. ತನ್ನ ಮಕ್ಕಳಾದ ಅನನ್ಯಾ ಕಾಸರವಳ್ಳಿ ಹಾಗೂ ಅಪೂರ್ವ ಕಾಸರವಳ್ಳಿ ಅವರಿಗೆ ಮದುವೆ ಮಾಡಿಸಲು ಬಯಸಿದ್ದರು.
Click this button or press Ctrl+G to toggle between Kannada and English