ಹೊಸದಿಲ್ಲಿ: ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ 1993ರ ಮುಂಬಯಿ ಸ್ಫೋಟದ ರೂವಾರಿ, ದಾವೂದ್ ಇಬ್ರಾಹಿಂ ಮತ್ತು ಆತನ ಪತ್ನಿ ಜುಬಿನಾ ಜೈರಿನ್‌ರನ್ನೂ ಕೋವಿಡ್ ಸೋಂಕು ತಗುಲಿದೆ ಎಂದು ಗುಪ್ತಚರ ಮೂಲ ಮತ್ತು ಮಾಧ್ಯಮಗಳು ವರದಿ ಮಾಡಿವೆ.
ದಾವೂದ್ ತನ್ನಲ್ಲಿಲ್ಲ ಎಂದು ಹೇಳುತ್ತಲೇ ಬಂದಿದ್ದ ಪಾಕಿಸ್ಥಾನವು ಈಗ ಕೋವಿಡ್ ಪೀಡಿತ ಪಾತಕಿ ಮತ್ತು ಆತನ ಪತ್ನಿಗೆ ಕದ್ದುಮುಚ್ಚಿ ಚಿಕಿತ್ಸೆ ನೀಡುತ್ತಿದೆ. ಕರಾಚಿಯ ಮಿಲಿಟರಿ ಆಸ್ಪತ್ರೆಯಲ್ಲಿ ಆತ ಇದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ.
ಐಷಾರಾಮಿ ಭದ್ರ ಕೋಟೆಯೊಳಗಿರುವ ದಾವೂದ್ ದಂಪತಿಗೆ ಸೋಂಕು ತಗುಲಿದ್ದು ಹೇಗೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಆತನಿಗೆ ಕೋವಿಡ್ ದೃಢಪಡುತ್ತಿದ್ದಂತೆಯೇ ಅಂಗರಕ್ಷಕರಿಗೆ ಆತಂಕ ಆರಂಭವಾಗಿದೆ. ಮಕ್ಕಳು, ಅಂಗರಕ್ಷಕರು, ಇತರ ಸಿಬಂದಿ, ಕೆಲಸದಾಳುಗಳಿಗೂ ಕೋವಿಡ್ ಪರೀಕ್ಷೆ ನಡೆಸಲಾಗಿದೆ ಎನ್ನಲಾಗಿದೆ.
ದಾವೂದ್‌ಗೆ ಕೋವಿಡ್ ತಗುಲಿದೆ ಎನ್ನಲಾದ ಸುದ್ದಿಯನ್ನು ಆತನ ಸೋದರ, ಕರಾಚಿಯಲ್ಲಿ ಡಿ ಕಂಪೆನಿಯನ್ನು ಮುನ್ನಡೆಸುತ್ತಿರುವ ಅನೀಸ್ ಇಬ್ರಾಹಿಂ ಅಲ್ಲಗಳೆದಿದ್ದಾನೆ.
‘ಭಾಯ್ (ದಾವೂದ್) ಚೆನ್ನಾಗಿದ್ದಾನೆ. ಛೋಟಾ ಶಕೀಲ್ ಕೂಡ ಆರಾಮವಾಗಿದ್ದಾನೆ. ಯಾರಿಗೂ ಕೋವಿಡ್ ತಗುಲಿಲ್ಲ. ಭಾಯ್ ಕುಟುಂಬದಲ್ಲಿ ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ’ ಎಂದು ಅನೀಸ್ ಹೇಳಿದ್ದಾನೆ.
ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವ ದಾವೂದ್‌ಗೆ ಸೋಂಕು ತಗುಲಿರುವ ವಿಚಾರ ಗುಪ್ತಚರ ಮೂಲಗಳಿಂದ ಬಹಿರಂಗವಾದರೂ ಪಾಕ್ ಮಾತ್ರ ಈ ಬಗ್ಗೆ ತುಟಿ ಬಿಚ್ಚಿಲ್ಲ. 30 ವರ್ಷಗಳಿಂದ ದಾವೂದ್‌ನನ್ನು ರಹಸ್ಯವಾಗಿ ಕಾಪಾಡಿಕೊಂಡು ಬಂದಿರುವ ಅದು ಕೋವಿಡ್ ವಿಚಾರದಲ್ಲೂ ಬಾಯಿ ಬಿಟ್ಟಿಲ್ಲ.
ಪಾಕಿಸ್ಥಾನದಲ್ಲಿ ಈಗಾಗಲೇ 90 ಸಾವಿರ ಮಂದಿಗೆ ಸೋಂಕು ದೃಢಪಟ್ಟಿದ್ದು, 1,850ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
Click this button or press Ctrl+G to toggle between Kannada and English