ಕೋವಿಡ್-19 ನಿಂದ ನಂದಿನಿ ಹಾಲಿನ ವ್ಯವಹಾರ ರೂ.30.00 ಕೋಟಿ ಕುಸಿತ, ಹಾಲಿನ ಹುಡಿ ದರ ರೂ.160ಕ್ಕೆ ಇಳಿಕೆ

6:42 PM, Saturday, June 20th, 2020
Share
1 Star2 Stars3 Stars4 Stars5 Stars
(No Ratings Yet)
Loading...

nandini Milkಮಂಗಳೂರು  : ಒಕ್ಕೂಟದಲ್ಲಿ ಹಾಲು ಶೇಖರಣೆ ಏರಿಕೆಯಾಗಿ, ದಿನವಹಿ 5.0 ಲಕ್ಷ ಕೆಜಿಗೂ ಮೀರಿ ಹಾಲು ಸಂಗ್ರಹಣೆಯಾಗುತ್ತಿದೆ. ಕೋವಿಡ್-19ರ ಸಮಸ್ಯೆಯಿಂದಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.

ಕರ್ನಾಟಕ  ಹಾಲು ಮಹಾಮಂಡಳಿಗೆ ದಿನವಹಿ 86.73 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದ್ದು, ರಾಜ್ಯದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಸುಮಾರು ಶೇ.25ರಷ್ಟು ಕುಸಿತವಾಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕೆ 39.54 ಲಕ್ಷ ಲೀಟರ್ ಬಳಕೆಯಾಗಿ, ದಿನವಹಿ 47.19 ಲಕ್ಷ ಲೀಟರ್ ಹಾಲು ಹಾಲಿನ ಪುಡಿಯಾಗಿ ಪರಿವರ್ತನೆಯಾಗುತ್ತಿದೆ. 2020ನೇ ಮಾರ್ಚ  ತಿಂಗಳಲ್ಲಿ ಪ್ರತೀ ಕೆಜಿ ಕೆನೆರಹಿತ ಹಾಲಿನ ಪುಡಿಗೆ ರೂ.340/- ಮಾರುಕಟ್ಟೆ ದರ ಇದ್ದು, ಪ್ರಸ್ತುತ ದೇಶದಾದ್ಯಂತ ಹಾಲಿನ ಹುಡಿ ದಾಸ್ತಾನು ಹೆಚ್ಚಳದಿಂದ ಪ್ರತಿ ಕೆಜಿಗೆ ರೂ.160/- ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಕಡಿಮೆಯಾಗುವ ನಿರೀಕ್ಷೆಯಿದೆ. ಮಾರುಕಟ್ಟೆಯಲ್ಲಿ ಬೆಣ್ಣೆಯ ದರ ಗಣನೀಯ ಇಳಿಕೆಯಾಗಿದ್ದು, ಸಪ್ಟೆಂಬರ್ ಅಂತ್ಯಕ್ಕೆ ಒಕ್ಕೂಟದಲ್ಲಿ 9.5 ಲಕ್ಷ ಕೆಜಿ ಹೆಚ್ಚುವರಿ ಬೆಣ್ಣೆ ದಾಸ್ತಾನು ಉಳಿಕೆಯಾಗಲಿದೆ.

ಕೋವಿಡ್-19ರ ಪರಿಣಾಮದಿಂದ 2020-21ನೇ ಸಾಲಿನ ಪ್ರಥಮ ಮೂರು ತಿಂಗಳಲ್ಲಿ ಒಕ್ಕೂಟದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಸುಮಾರು ಶೇ.25ರಷ್ಟು ಕುಸಿತವಾಗಿ, ವಹಿವಾಟು ರೂ.30.00 ಕೋಟಿ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಹೋಟೆಲ್, ರೆಸ್ಟೊರೆಂಟ್, ಕ್ಯಾಂಟಿನ್ ಮತ್ತು ವಿದ್ಯಾ-ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ವ್ಯವಹರಿಸದಿರುವುದರಿಂದ ಹಾಗೂ ಶುಭ-ಸಮಾರಂಭಗಳು, ಧಾರ್ಮಿಕ  ಕಾರ್ಯಕ್ರಮಗಳು, ಪ್ರವಾಸೋದ್ಯಮ ಸ್ಥಗಿತಗೊಂಡಿರುವುದರಿಂದ ಮಾರುಕಟ್ಟೆ ಏಳು ವರ್ಷಗಳ ಹಿಂದಿನ ಮಾರಾಟಕ್ಕಿಂತಲೂ ಕಡಿಮೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ವಾರ್ಷಿಕ ಅಂದಾಜು ರೂ.120.00 ಕೋಟಿ ವಹಿವಾಟು ಕಡಿಮೆಯಾಗಿ, ಒಕ್ಕೂಟಕ್ಕೆ ಅಂದಾಜು ರೂ.20.00 ಕೋಟಿ ನಷ್ಟವಾಗುವ ಸಾಧ್ಯತೆಯಿದೆ.

2020ರ ಜೂನ್ ಮಾಹೆಯಲ್ಲಿ ದಿನವಹಿ 1.22 ಲಕ್ಷ ಕೆಜಿ ಹಾಲನ್ನು ಹಾಲಿನ ಹುಡಿ ಪರಿವರ್ತನೆಗೆ ಕಳುಹಿಸಲಾಗುತ್ತಿದ್ದು, ಪ್ರತಿ ಕೆಜಿ ಹಾಲಿನ ಹುಡಿ ಪರಿವರ್ತನೆಗೆ ರೂ.11.35ರಂತೆ ನಷ್ಟವಾಗಲಿದೆ. 2020ನೇ ಸಪ್ಟೆಂಬರ್ ಅಂತ್ಯಕ್ಕೆ ಅಂದಾಜು 150.0 ಲಕ್ಷ ಕೆಜಿ ಹಾಲಿನ ಹುಡಿ ಒಕ್ಕೂಟದಲ್ಲಿ ಉತ್ಪಾದನೆಯಾಗಿ ದಾಸ್ತಾನು ಉಳಿಯಲಿದೆ. ಕಹಾಮದ ದಾಸ್ತಾನು ಮಳಿಗೆಗಳಲ್ಲಿ ಪರಿವರ್ತಿತ ಹಾಲಿನ ಪುಡಿ ಮತ್ತು ಬೆಣ್ಣೆ ದಾಸ್ತಾನು ಹೆಚ್ಚಾಗಿದ್ದು, ಶೇಖರಿಸಲು ಸಾಧ್ಯವಾಗದೆ, ಖಾಸಗಿ ದಾಸ್ತಾನು ಮಳಿಗೆಗಳಿಗೆ ದುಬಾರಿ ಬಾಡಿಗೆ ನೀಡಿ ದಾಸ್ತಾನು ಮಾಡಬೇಕಾಗಿದೆ. ಹಾಲಿನ ಹುಡಿ ಮತ್ತು ಬೆಣ್ಣೆ ದಾಸ್ತಾನು ಮಾಡುವುದರಿಂದ ಒಕ್ಕೂಟದ ರೂ.30.00 ಕೋಟಿ ನಗದು ಹರಿವಿಗೆ ತಡೆಯುಂಟಾಗಿ, ದುಡಿಯುವ ಬಂಡವಾಳದ ಕೊರತೆಯಾಗಲಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಶಾಲೆಗಳ ಪ್ರಾರಂಭ ವಿಳಂಬವಾಗುತ್ತಿರುವುದರಿಂದ, ಕೆನೆಭರಿತ ಹಾಲಿನ ಪುಡಿ ಮಾರಾಟವೂ ಕೂಡಾ ಸಾಧ್ಯವಾಗದೆ, ಹಾಲಿನ ಹುಡಿ ದಾಸ್ತಾನು ಉಳಿಯುತ್ತಿದೆ.

ಈ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರ ಹಾಲಿಗೆ ನಿರಂತರ ಮಾರುಕಟ್ಟೆ ಕಾಯ್ದುಕೊಂಡು ಬರಲು, ಹಾಲು ಉತ್ಪಾದಕರ ಸಹಕಾರದಿಂದ ಒಕ್ಕೂಟಕ್ಕೆ ಉಂಟಾಗುವ ಆರ್ಥಿಕ  ನಷ್ಟವನ್ನು ಅಮೂಲ್ ಸಂಸ್ಥೆ ಅನುಸರಿಸುವ ಮಾರ್ಗದಲ್ಲಿ ಸರಿದೂಗಿಸಿಕೊಳ್ಳುವ ಅನಿವಾರ್ಯತೆಯಿದೆ. ಪ್ರಸ್ತುತ ಕೋವಿಡ್-19 ಸಮಸ್ಯೆಯನ್ನು ನಿರ್ವಹಿಸಲು ಕರ್ನಾಟಕ  ರಾಜ್ಯದ ಹಾಲು ಒಕ್ಕೂಟಗಳಲ್ಲಿ ಪ್ರತೀ ಲೀಟರಿಗೆ ಕನಿಷ್ಟ ರೂ.2.20 ರಿಂದ ರೂ.4.70ರವರೆಗೆ ಖರೀದಿ ದರವನ್ನು ಕಡಿಮೆ ಮಾಡಲಾಗಿದೆ. ನಮ್ಮ ಒಕ್ಕೂಟದ ಆರ್ಥಿಕ   ಪರಿಸ್ಥಿತಿಯನ್ನು ಪರಾಮರ್ಶಿಸಿ, ಕರ್ನಾಟಕ  ರಾಜ್ಯದಲ್ಲಿ ಒಕ್ಕೂಟವು ಹಾಲು ಉತ್ಪಾದಕರಿಗೆ ಗರಿಷ್ಟ ದರವನ್ನು ಪಾವತಿಸುವ ಹೆಗ್ಗಳಿಕೆಯನ್ನು ಕಾಯ್ದುಕೊಂಡಿದ್ದು, ಪ್ರಸ್ತುತ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ದಿನಾಂಕ 21.06.2020ರಿಂದ ಹಾಲು ಉತ್ಪಾದಕರಿಂದ ಖರೀದಿಸುವ ಪ್ರತೀ ಲೀಟರ್ ಹಾಲಿಗೆ ರೂ.1/-ನ್ನು ಕಡಿಮೆ ಮಾಡಲಾಗಿದೆ. ಮಾನ್ಯ ಹಾಲು ಉತ್ಪಾದಕರು ಎಂದಿನಂತೆ ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡಿ, ಸಹಕರಿಸಲು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆಯವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English