ಬೆಳ್ತಂಗಡಿ :ಚಾರ್ಮಾಡಿಯಲ್ಲಿ ಎಎನ್‌ಎಫ್ ಪೊಲೀಸರ ಕೂಂಬಿಂಗ್ ಕಾರ್ಯಾಚರಣೆ ಸಂದರ್ಭ ಬಾಲಕರಿಬ್ಬರು ಕಾಡಿನಲ್ಲಿ ಪತ್ತೆಯಾಗುವ ಮೂಲಕ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಘಟನೆ ಬುಧವಾರ ಚಾರ್ಮಾಡಿಯ ಪೇಟೆಯ ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು ಎರಡು ಕಿ. ಮೀ. ದೂರದಲ್ಲಿ ನಡೆದಿದೆ. ನಕ್ಸಲ್ ನಿಗ್ರಹ ದಳದ ಪೊಲೀಸರಿಗೆ ಮಂಗಳವಾರ ರಾತ್ರಿ ಚಾರ್ಮಾಡಿಯಲ್ಲಿ ನಕ್ಸಲ್ ತಂಡವಿದೆ ಎಂಬ ಮಾಹಿತಿ ಬಂದಿತ್ತು. ಅದರಂತೆ ಬುಧವಾರ ಬೆಳಗ್ಗೆ ತಂಡವೊಂದು ಚಾರ್ಮಾಡಿ ಪೇಟೆ ಬಳಿಯ ಕಾಡಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿತ್ತು. ಚಾರ್ಮಾಡಿ ಪೇಟೆಯಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿ ಉರ್ಬಿಲ್ ಗುಂಡಿ ಎಂಬಲ್ಲಿ ಓಟೆ ಬಿದಿರಿನ ಕಾಡಿನಲ್ಲಿ ಕಲ್ಲಿನ ಮೇಲೆ ಟರ್ಪಾಲ್ ಹಾಸಿದ್ದು ಕಂಡು ಬಂದಾಗ ಪೊಲೀಸರು ಅಲ್ಲಿಗೆ ತೆರಳಿದರು. ಈ ಸಂದರ್ಭ ಬಾಲಕರಿಬ್ಬರು ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದರು.
ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಗೋಣಿಯಲ್ಲಿ ಅಕ್ಕಿ, ಗರಗಸ, ಉಪ್ಪು, ಟರ್ಪಾಲ್, ಬೆಂಕಿಪೆಟ್ಟಿಗೆ, ಊಟದ ಪೈಬರ್ ತಟ್ಟೆಗಳು, ಪ್ಲಾಸ್ಟಿಕ್ ಲೋಟ, ಕತ್ತರಿ, ಟಾರ್ಚ್, ಟೇಪ್ ರೆಕಾರ್ಡರ್, ಕ್ಯಾನ್, ಒಂದು ಕೋಳಿ, ಸಕ್ಕರೆ, ಚಾಹುಡಿ, ಬಟ್ಟೆ ತೊಳೆಯುವ ಸೋಪು, ಸೇರಿದಂತೆ ಅನೇಕ ವಸ್ತುಗಳು ಪತ್ತೆಯಾದವು. ವಿಷಯ ತಿಳಿದ ನಕ್ಸಲ್ ಐಜಿ ಅಲೋಕ್ ಮೋಹನ್, ಎಸ್‌ಪಿ ಅಭಿಷೇಕ್ ಗೋಯೆಲ್, ಪುತ್ತೂರು ಎಎಸ್‌ಪಿ ಅನುಚೇತ್, ಬೆಳ್ತಂಗಡಿ ಎಸ್‌ಐ ಯೋಗೀಶ್ ಕುಮಾರ್, ವೇಣೂರು ಎಸ್‌ಐ ಉಮೇಶ್ ಉಪ್ಪಳಿಕೆ ಸ್ಥಳಕ್ಕೆ ಆಗಮಿಸಿದರು. ಸ್ಥಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಲೋಕ್ ಮೋಹನ್, ಇದು ನಕ್ಸಲರಿಗೆ ಆಹಾರ ಸಾಮಗ್ರಿ ಸರಬರಾಜು ಮಾಡಲು ಇಟ್ಟಿರುವ ಶಂಕೆಯಿದೆ. ಸ್ಥಳದಲ್ಲಿ ಬಾಲಕರಿಬ್ಬರು ಪರಾರಿಯಾಗಿದ್ದಾರೆ. ಹಾಗಾಗಿ ಅವರು ನಕ್ಸಲ್ ತಂಡಕ್ಕೆ ಸರಬರಾಜು ಮಾಡಲು ತಂದಿಟ್ಟಿರಬಹುದು ಎಂದು ಹೇಳಿದರು.
ಆದರೆ ಪೊಲೀಸರು ಚಾರ್ಮಾಡಿ ಪೇಟೆಗೆ ಬಂದಾಗ ಅಲ್ಲಿ ಸ್ಥಳೀಯ ಬಾಲಕರಿಬ್ಬರು ಪರಾರಿಯಾಗಿದ್ದು, ಅವರು ಕಾಡಿನಲ್ಲಿದ್ದರು ಎಂಬ ಮಾಹಿತಿ ಬಹಿರಂಗವಾಯಿತು. ಅಲ್ಲದೆ ಸ್ಥಳೀಯ ಕೆಲವು ಮನೆಯಿಂದ ಟೇಪ್ ರೆಕಾರ್ಡರ್, ಟರ್ಪಾಲ್ ಕದ್ದು ಕೊಂಡೋಗಿದ್ದಾರೆ ಎಂಬ ಮಾಹಿತಿಯೂ ಸಿಕ್ಕಿತು. ಆಗ ಅದು ಬಾಲಕರ ಕೃತ್ಯ ಎಂಬ ವಿಷಯ ಬಹಿರಂಗವಾಯಿತು.
ಚಾರ್ಮಾಡಿಯ ಕುಂಡುಟ್ಟು ಮನೆ ನಿವಾಸಿ ಜೋಹಾರ ಮತ್ತು ಸಿ.ಕೆ. ಅಬ್ದುಲ್ ಮುನಾಪ್ ಎಂಬವರ ಪುತ್ರ, ಚಾರ್ಮಾಡಿ ಸರ್ಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಮುಸ್ತಾಪ (14) ಹಾಗೂ ಉಜಿರೆ ಟಿಬಿ ಕ್ರಾಸ್ ಬಳಿಯ ನಿವಾಸಿ ರಾಬಿಯಾ ಹಾಗೂ ಅಬ್ದುಲ್ ಜಬ್ಬಾರ್ ಪುತ್ರ, ಉಜಿರೆ ಜನಾರ್ದನ ಶಾಲೆಯ 4ನೇ ತರಗತಿ ವಿದ್ಯಾರ್ಥಿ ಅಬ್ದುಲ್ ಸಲಾಂ (10) ನವೆಂಬರ್ 25ರಂದು ಮನೆಯಲ್ಲಿ ಯಾರೂ ಇಲ್ಲದಾಗ ಇವರು ನಾಪತ್ತೆಯಾಗಿದ್ದರು. ಶಾಲೆಗೆ ಹೋಗಲು ಇಷ್ಟವಿಲ್ಲದೇ, ಮನೆಯಲ್ಲೂ ಇರಲಾರದೇ ಇವರು ಮನೆ ಬಿಟ್ಟು ಹೋಗುವ ಅಭ್ಯಾಸ ಬೆಳೆಸಿಕೊಂಡಿದ್ದರು.
ಬುಧವಾರ ಮುಂಜಾನೆಯೇ ಕೂಂಬಿಂಗ್ ನಡೆಸಿದ ತಂಡ ಈ ಭಾಗದಲ್ಲಿ ಬಂದಾಗ ಕಲ್ಲಂಗಡಿ ತಿನ್ನಲು ತುಂಡು ಮಾಡುತ್ತಿದ್ದ ಬಾಲಕರು ಪೊಲೀಸರನ್ನು ಕಂಡು ಪರಾರಿಯಾದರು. ಮತ್ತೆ ಉಜಿರೆಗೆ ಬಂದ ಅವರು ವಾಪಸು ಚಾರ್ಮಾಡಿಗೆ ಹೋದಾಗ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದರು.ಅಲ್ಲಿಂದ ಬೆಳ್ತಂಗಡಿ ಠಾಣೆಗೆ ಕರೆತಂದಾಗ ತಮ್ಮ ಕತ್ಯಗಳನ್ನು ಒಪ್ಪಿಕೊಂಡರು.
ಮಕ್ಕಳ ಮೇಲೆ ನಕ್ಸಲ್ ಸಂಬಂಧಿ ಯಾವುದೇ ಪ್ರಕರಣ ದಾಖಲಿಸಲಾಗುವುದಿಲ್ಲ. ಮಕ್ಕಳು ಕಾಣೆಯಾದ ಕುರಿತು ಪ್ರಕರಣ ದಾಖಲಿಸಿ ಅವರನ್ನು ಪೋಷಕರಿಗೆ ಹಸ್ತಾಂತರಿಸಲಾಗುವುದು ಎಂದು ಎಸ್‌ಪಿ ಅಭಿಷೇಕ್ ಗೋಯೆಲ್ ತಿಳಿಸಿದರು. ಈ ಪರಿಸರದಲ್ಲಿ ನಕ್ಸಲರು ಇರುವ ಸಾಧ್ಯತೆ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆಸಲಾಗುವುದು. ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಐಜಿ ಆಲೋಕ್ ಕುಮಾರ್ ತಿಳಿಸಿದರು.
Click this button or press Ctrl+G to toggle between Kannada and English