ಪಿಲಿಕುಳ : ದ.ಕ. ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆ

5:10 PM, Thursday, November 29th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Science Model contestಮಂಗಳೂರು :ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿ ಮಂಗಳೂರು, ದ.ಕ. ಜಿಲ್ಲಾ ಪಂಚಾಯತ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ ಪಿಲಿಕುಳದಲ್ಲಿ ಹಮ್ಮಿಕೊಂಡ ದ.ಕ. ಜಿಲ್ಲಾ ಮಟ್ಟದ ಪ್ರೌಢಶಾಲಾ ಮಕ್ಕಳ ವಿಜ್ಞಾನ ವಸ್ತುಪ್ರದರ್ಶನದ ಉದ್ಘಾಟನಾ ಸಮಾರಂಭವು ಬುಧವಾರ ನಡೆಯಿತು.

ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ಎನ್. ವಿಜಯಪ್ರಕಾಶ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಸಲುವಾಗಿ ಹಾಗೂ ಪಠ್ಯೇತರ ಮಾಹಿತಿಗಳು ದೊರೆಯುವಂತಾಗಲು ವಿನೂತನ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ನಗರ ಪ್ರದೇಶದ ಮಕ್ಕಳಿಗೆ ಕೃಷಿಯ ಬಗ್ಗೆ ಅರಿವು ಮೂಡಿಸಲು ಕೃಷಿ ದರ್ಶನ ಕಾರ್ಯಕ್ರಮ ನಡೆಸಿದ್ದು, 7,600ರಷ್ಟು ಮಕ್ಕಳು ಇದರ ಲಾಭ ಪಡೆದಿದ್ದಾರೆ. ಚಿಣ್ಣರ ದರ್ಶನ ಕಾರ್ಯಕ್ರಮದ ಮೂಲಕ ಸುಮಾರು 12,000 ಮಕ್ಕಳು ಲಾಭ ಪಡೆದಿದ್ದಾರೆ ಎಂದು ಅವರು ಹೇಳಿದರು.

ಅಲ್ಲದೆ ಡಿಸೆಂಬರ್‌ನಲ್ಲಿ ಸುಮಾರು 350 ಮಕ್ಕಳಿಗೆ ಉಡುಪಿಯಲ್ಲಿ ಸಾಹಸ ಕ್ರೀಡೆಗಳ ಕುರಿತಂತೆ ಮಾಹಿತಿ ನೀಡುವ ಯೋಚನೆ ಇದೆ. ಜಿಲ್ಲೆಯ ಒಟ್ಟು ಶಾಲೆಯಲ್ಲಿ 33,200ಮೀಟರ್‌ನಷ್ಟು ಕಂಪೌಂಡ್‌ ಗೋಡೆ ನಿರ್ಮಾಣ ಮಾಡಲಾಗಿದೆ. ಶಾಲಾ ಕೈ ತೋಟ ಸೇರಿದಂತೆ ಪಠ್ಯೇತರ ಅನುಭವ ವಿದ್ಯಾರ್ಥಿಗಳಿಗೆ ನೀಡುವ ಸಂಬಂಧ ಹೊಸ ಹೊಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು. ವಿದ್ಯಾರ್ಥಿಗಳು ವಿಜ್ಞಾನದ ಹೊಸ ಹೊಸ ಅವಿಷ್ಕಾರಗಳನ್ನು ಹೊರತರುವಲ್ಲಿ ಆಸಕ್ತಿ ವಹಿಸಬೇಕು. ಪ್ರತಿಯೊಂದು ಮಗುವಿನ ಅಂತರಾಳದಲ್ಲಿ ವಿಜ್ಞಾನಿಯಾಗಬೇಕೆನ್ನುವ ಆಸೆ ಇರುತ್ತದೆ. ಮಕ್ಕಳ ಆಸೆ ಪೂರೈಸಬೇಕಾದರೆ ಅದರ ಹಿಂದೆ ಪೋಷಕರ ಹಾಗೂ ಶಿಕ್ಷಕರ ಪ್ರೋತ್ಸಾಹ ಅಗತ್ಯ. ಅವರ ಆಸಕ್ತಿಯನ್ನು ಚಿವುಟಿ ಹಾಕುವ ಕೆಲಸ ಮಾಡಬಾರದು ಎಂದವರು ಹೇಳಿದರು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ದ.ಕ. ಜಿಲ್ಲಾ ಪಂಚಾಯತ್‌ನ ಉಪಾಧ್ಯಕ್ಷ ರಿತೇಶ್‌ ಶೆಟ್ಟಿ ದೇಶದಲ್ಲಿ ವಿಜ್ಞಾನಿಗಳ ಕೊರತೆ ಕಾಣಿಸುತ್ತಿದೆ. ನಮ್ಮಲ್ಲಿರುವ ವಿಜ್ಞಾನಿಗಳು ಹಣ ಗಳಿಸುವ ಉದ್ಧೇಶದಿಂದ ವಿದೇಶಕ್ಕೆ ಪಲಾಯನ ಮಾಡುತ್ತಿದ್ದಾರೆ. ಇದರಿಂದ ನಮ್ಮ ದೇಶದಲ್ಲಿ ವಿಜ್ಞಾನಗಳ ಸಂಖ್ಯೆ ಕಡಿಮೆಯಾಗುತ್ತಿದೆ. ವಿಜ್ಞಾನ, ವೈದ್ಯಕೀಯ ಹಾಗೂ ತಾಂತ್ರಿಕ ಕ್ಷೇತ್ರದಲ್ಲಿ ಭಾರತೀಯರ ಸೇವೆ ನಮ್ಮ ದೇಶಕ್ಕೆ ಲಭಿಸಿದಾಗ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಪಿಲಿಕುಲ ನಿಸರ್ಗಧಾಮದ ವಾತಾವರಣದಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಿಂದ ತಲಾ 12 ಶಾಲೆಯ ವಿದ್ಯಾರ್ಥಿಗಳಿಗೆ ಮಾದರಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕೈಗಾರಿಕೆ, ತಂತ್ರಜ್ಞಾನ, ಆಹಾರ, ಸಾರಿಗೆ ಸಂಪರ್ಕ, ಗಣಿತ ಮೊದಲಾದ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. 100ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ತಮ್ಮ ಆವಿಷ್ಕಾರವನ್ನು ಪ್ರದರ್ಶನಕ್ಕಿಟ್ಟು ಅದನ್ನು ವಿವರಿಸಿದರು.

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿಯ ಸದಸ್ಯ ಕಾರ್ಯದರ್ಶಿ ಅಜಿತ್‌ ಕುಮಾರ್‌ ಹೆಗ್ಡೆ ಶಾನಾಡಿ, ಮಂಗಳೂರು ತಾಲ್ಲೂಕು ಪಂಚಾಯತ್‌ ಅಧ್ಯಕ್ಷ ಹರೀಶ್‌ ಕೆ., ದ.ಕ. ಜಿಲ್ಲಾ ಪಂಚಾಯತ್‌ ಸದಸ್ಯರಾದ ಯಶವಂತಿ ಆಳ್ವ, ಮೂಡುಶೆಡ್ಡೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಉಮೇಶ್‌ ಜೆ., ಶಿಕ್ಷಕ – ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಫಿಲೋಮಿನಾ ಲೋಬೋ, ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್‌ ಭಂಡಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೊಸೆಸ್‌ ಜಯಶೇಖರ್‌ ಮುಂತಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English