ಮಂಗಳೂರು :ಅನ್ನನಾಳದಲ್ಲಿ ಕಂಡುಬರುವ ಫೈಬ್ರೋವ್ಯಾಸ್ಕಾಲರ್ ಪೊಲಿಪ್ (ಗಡ್ಡೆ) ಎಂಬ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ನಗರದ ಎ.ಜೆ. ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ಮಾಡಿ ಗುಣಮುಖರನ್ನಾಗಿಸಲಾಗಿದೆ. 32ರ ವಯಸ್ಸಿನ ಮಹಿಳೆಯೊಬ್ಬರು ಕಳೆದ ಮೂರು ವರ್ಷಗಳಿಂದ ಆಹಾರ ನುಂಗಲಾರದೆ ತೊಂದರೆಯಿಂದ ಬಳಲುತ್ತಿದ್ದರು. ಪರಿಣಾಮ ರಕ್ತ ಹೀನತೆಯಿಂದ ಬಳಲಿ ಕಳೆದ 6 ತಿಂಗಳಲ್ಲಿ 10 ಕೆ.ಜಿ. ತೂಕ ಕಳೆದುಕೊಂಡಿದ್ದರು. ಈ ಸಂದರ್ಭ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯದ ಜನರಲ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ| ಅಶೋಕ್ ಹೆಗ್ಡೆ ಅವರನ್ನು ಸಂಪರ್ಕಿಸಲಾಗಿತ್ತು.
ಪರೀಕ್ಷೆಯ ಅನಂತರ ಮಹಿಳೆಗೆ ಅನ್ನನಾಳದ ಮೇಲ್ಭಾಗದಿಂದ ಪ್ರಾರಂಭವಾದ ಫೈಬ್ರೋವ್ಯಾಸ್ಕಾಲರ್ ಪೊಲಿಪ್(ಗಡ್ಡೆ) ಸಮಸ್ಯೆ ಇರುವುದು ತಿಳಿಯಿತು. ಹೃದ್ರೋಗ ಮತ್ತು ಎದೆ ಶಸ್ತ್ರ ಚಿಕಿತ್ಸಾ ತಜ್ಞ ಡಾ| ಜಯಶಂಕರ್ ಮಾರ್ಲ ಅವರ ನೇತೃತ್ವದಲ್ಲಿ ಹೃದ್ರೋಗ ಮತ್ತು ಎದೆ ಶಸ್ತ್ರ ಚಿಕಿತ್ಸಾ ತಜ್ಞ ಡಾ| ಮಾಧವ ಕಾಮತ್, ಹೃದ್ರೋಗ ಮತ್ತು ಎದೆ ಅರಿವಳಿಕೆ ತಜ್ಞರಾದ ಡಾ| ಗುರುರಾಜ್ ತಂತ್ರಿ ಮತ್ತು ಡಾ| ನಾಗಾನಂದ ಮೊದಲಾದ ತಜ್ಞರ ತಂಡವು ಕೇವಲ ಕುತ್ತಿಗೆ ಭಾಗದಲ್ಲಿ ಕಿರಿದಾಗಿ ಕತ್ತರಿಸಿ, ಅನ್ನನಾಳವನ್ನು ಸಣ್ಣದಾಗಿ ತೆರೆದು ಟ್ಯೂಮರ್ ಅನ್ನು ಹೊರತೆಗೆದು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಪರಿಣಾಮ ಮಹಿಳೆ ಸಂಪೂರ್ಣ ಗುಣಮುಖರಾಗಿದ್ದಾರೆ.
ಅನ್ನನಾಳದಲ್ಲಿ ಕಂಡುಬರುವ ಗಡ್ಡೆಗಳಲ್ಲಿ ಫೈಬ್ರೋವ್ಯಾಸ್ಕಾಲರ್ ಪೊಲಿಪ್ (ಗಡ್ಡೆ) ತೀರಾ ಅಪರೂಪದ ಪ್ರಕರಣವಾಗಿದ್ದು, ಇದುವರೆಗೆ ವರದಿಯಾದ ವಿಶ್ವದಲ್ಲೇ ಅಪರೂಪದ ಮತ್ತು ಅನ್ನನಾಳದ ಅತೀ ದೊಡ್ಡ ಟ್ಯೂಮರ್ ಇದಾಗಿದೆ ಎಂದು ಎ.ಜೆ. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಪ್ರಶಾಂತ್ ಮಾರ್ಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English