ಆಟಿ ಅಮಾವಾಸ್ಯೆ ದೇವಸ್ಥಾನಗಳಲ್ಲಿ ತೀರ್ಥಸ್ನಾನ ಇಲ್ಲ, ಕೊರೊನಾ ಸೋಂಕಿನ ಹಿನ್ನೆಲೆ ಪಾಲೆ ಕಷಾಯಕ್ಕೆ ಬೇಡಿಕೆ

8:17 PM, Monday, July 20th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

palekashayaಬಂಟ್ವಾಳ: ಆಟಿ ಅಮಾವಾಸ್ಯೆಯ ದಿನ ಪಾಲೆ (ಹಾಲೆ) ಮರದಲ್ಲಿ ವಿಶೇಷ ರೋಗ ನಿರೋಧಕ ಶಕ್ತಿ ಇದೆ ಎಂಬ ನಂಬಿಕೆ ತಲತಲಾಂತರ ದಿಂದ ಬಂದಿದೆ. ಸೂರ್ಯೋದಯದ ಮೊದಲು ಅಂದರೆ ನಸುಕಿನಲ್ಲೇ ಕಲ್ಲಿನಿಂದ ಜಜ್ಜಿ ತಂದು ಕಷಾಯ ಮಾಡಿ ಸೇವಿಸುವುದು ರೂಢಿ.

ಆಷಾಢ ತಿಂಗಳಲ್ಲಿ ಭಾರಿ ಮಳೆ. ಕ್ರಿಮಿ- ಕೀಟಬಾಧೆಯಿಂದ ಆರೋಗ್ಯದ ರಕ್ಷಣೆ, ರೋಗ ನಿರೋಧಕತೆಗಾಗಿ ಪಾಲೆ (ಹಾಲೆ) ಮರದ ತೊಗಟೆಯ ಕಷಾಯ ಮಾಡಿ ಕುಡಿದರೆ ಒಳ್ಳೆಯದಂತೆ. ಔಷಧೀಯವಾಗಿ ಈ ಕಷಾಯಕ್ಕೆ ಬಹಳಷ್ಟು ಮಹತ್ವವಿರುವುದರಿಂದ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಬೇಡಿಕೆ ವ್ಯಕ್ತವಾಯಿತು.

ಈ ಬಾರಿ ಲಾಕ್ ಡೌನ್ ಪರಿಣಾಮ ಸಾಮೂಹಿಕ ಸೇವನೆ-ವಿತರಣೆ ಕಾರ್ಯಗಳು ನಡೆಯದಿದ್ದರೂ, ಮನೆಗಳಲ್ಲಿಯೇ ಕಷಾಯ ತಯಾರಿಸಿ ಸೇವಿಸಿದರು. ಕಹಿಯಾಗಿರುವ ಪಾಲೆ ಮರದ ಕಷಾಯ ರೋಗ ನಿರೋಧಕ ಶಕ್ತಿ ಹೊಂದಿದೆ ಎಂಬ ಕಾರಣಕ್ಕೆ ಈ ಬಾರಿ ಹೆಚ್ಚಿನ ಬೇಡಿಕೆ ಬಂದಿತ್ತು.

ಪಾಲೆ ಮರ ಕಷಾಯ ಮಾತ್ರವಲ್ಲದೇ ಪ್ರಕೃತಿದತ್ತವಾಗಿ ಸಿಗುವ, ಹಿತ್ತಲಲ್ಲಿ ಬೆಳೆಯುವ ವಿವಿಧ ಸಸ್ಯ, ಗೆಡ್ಡೆ, ಮೊಗ್ಗು, ಚಿಗುರು, ಕಾಯಿ, ಬೇರುಗಳ ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಮಾಡಿ ಸೇವಿಸುತ್ತಾರೆ. ಇದು ಆಷಾಢದ ಕಷ್ಟ ಸಂದರ್ಭಗಳ ಹಾಗೂ ಆರೋಗ್ಯ ರಕ್ಷಣೆಯ ಸಂಕೇತವೂ ಆಗಿದೆ.

ಆಟಿ ಅಮಾವಾಸ್ಯೆಯ ದಿನದಂದು ದ.ಕ. ಜಿಲ್ಲೆಯ ಬಂಟ್ವಾಳದ ಕಾರಿಂಜ, ಪಾಣೆಮಂಗಳೂರು ಸಮೀಪದ ನರಹರಿ ಪರ್ವತ, ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ಸೇರಿದಂತೆ ಪುಣ್ಯ ಸ್ಥಳಗಳಲ್ಲಿ ತೀರ್ಥಸ್ನಾನ ಮಾಡುವ ಸಂಪ್ರದಾಯವಿದ್ದರೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಈ ಬಾರಿ ನಡೆಯಲಿಲ್ಲ. ದೇಗುಲಗಳ ಸುತ್ತ ಬಿಕೋ ಎನ್ನುತ್ತಿತ್ತು.

palekashaya ಪ್ರತಿ ವರ್ಷ ಆಟಿ ಅಮಾವಾಸ್ಯೆಯ ದಿನ ಸಾವಿರಾರು ಭಕ್ತರಿಂದ ತುಂಬಿರುತ್ತಿದ್ದ ಈ ಎರಡು ಪುಣ್ಯ ಕ್ಷೇತ್ರಗಳು, ಸಮುದ್ರ ಮಟ್ಟದಿಂದ ಸಾವಿರ ಅಡಿಗಳ ಎತ್ತರದಲ್ಲಿರುವ ಈ ಕ್ಷೇತ್ರಗಳಲ್ಲಿ ತೀರ್ಥ ಸ್ನಾನಕ್ಕೆ ಜಿಲ್ಲೆಯ ಮೂಲೆ ಮೂಲೆಗಳಿಂದಲೂ ಭಕ್ತರು ಆಗಮಿಸುತ್ತಿದ್ದರು. ಈ ಬಾರಿ ಕೊರೊನಾ ಹಿನ್ನೆಲೆ ಭಕ್ತರಿಗೆ ಪ್ರವೇಶವಿಲ್ಲ ಎಂದು ಎರಡು ಕ್ಷೇತ್ರಗಳ ಆಡಳಿತ ಮಂಡಳಿಗಳು ಸ್ಪಷ್ಟಪಡಿಸಿವೆ. ಕೇವಲ ಪುರೋಹಿತರು ಸರಳ ರೀತಿಯಲ್ಲಿ ಆಟಿ ಅಮಾವಾಸ್ಯೆ ಆಚರಣೆ ನಡೆಸಿದರು.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English