ಬೆಂಗಳೂರು: ಮಾರಕ ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಚಿಕಿತ್ಸೆಗಾಗಿ ಅಗತ್ಯವಿರುವ ಆರೋಗ್ಯ ಸಂಬಂಧಿತ ಉಪಕರಣಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿದೆ ಎನ್ನುವ ಪ್ರತಿಪಕ್ಷಗಳ ಆರೋಪ ನಿರಾಧಾರವಾಗಿದ್ದು, ಇಂತಹ ಯಾವುದೇ ಪ್ರಕರಣಗಳು ನಡೆದಿರುವುದಿಲ್ಲ, ಅವ್ಯವಹಾರ ಸಾಭೀತದಾದಲ್ಲಿ ತಕ್ಷಣವೇ ರಾಜಿನಾಮೆ ನೀಡಲು ಸಿದ್ಧ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರತಿಪಕ್ಷಗಳ ಆರೋಪ ಕುರಿತು ಇಂದು ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿಪಕ್ಷಗಳು ಕಳೆದ ಮಾರ್ಚ್‍ನಲ್ಲಿ ಇದ್ದ ರಾಜ್ಯದ ಪರಿಸ್ಥಿತಿಯನ್ನು ಅರಿತುಕೊಂಡು ಆರೋಪ ಮಾಡಬೇಕು, 2020 ರ ಮಾರ್ಚ್‍ನಲ್ಲಿ ಕೋವಿಡ್ ರಾಜ್ಯಕ್ಕೆ ಕಾಲಿಟ್ಟಾಗ ಇಡಿ ದೇಶದಲ್ಲಿ ಪ್ರಪ್ರಥಮ ಸಾವು ನಮ್ಮ ರಾಜ್ಯದ ಕಲಬುರಗಿಯಲ್ಲಿ ಜರುಗಿತು, ಆ ಸಮಯದಲ್ಲಿ ಈ ರೋಗಕ್ಕೆ ತುತ್ತಾದವರಿಗೆ ಚಿಕೆತ್ಸೆ ನೀಡಲು ಅವಶ್ಯವಿರುವ ಸಾಮಾಗ್ರಿಗಳು ಮಾರುಕಟ್ಟೆಯಲ್ಲಿ ಹೇರಳವಾಗಿ ಲಭ್ಯವಿರಲಿಲ್ಲ ಹಾಗೂ ಅವುಗಳ ಬೆಲೆ ಸಹ ಇಂದಿಗಿಂತ ಹೆಚ್ಚಿತ್ತು ಎನ್ನುವುದನ್ನು ಅರಿತುಕೊಂಡು ಮಾತನಾಡಬೇಕು ಎಂದು ಹೇಳಿದರು.
ಕಳೆದ ಮೂರು ತಿಂಗಳ ಹಿಂದೆ ಕೋವಿಡ್ ಸೋಂಕು ತೀವ್ರವಾಗಿ ಹರಡುತ್ತಿರುವಾಗ ಮಾರುಕಟ್ಟೆಯಲ್ಲಿ ಲಭ್ಯವಿದ್ದ ಉತ್ಪನ್ನಗಳನ್ನು ಅಂದಿನ ಬೆಲೆಯಲ್ಲಿ ಖರೀದಿಸಲಾಗಿದೆ. ಅಂದಿನ ಮಾರುಕಟ್ಟೆಯ ಬೆಲೆಗಿಂತ ಇಂದು ಕಡಿಮೆ ಬೆಲೆಯಲ್ಲಿ ಆರೋಗ್ಯ ಸಂಬಂಧಿತ ಸಲಕರಣೆ ಹಾಗೂ ಉತ್ಪನ್ನಗಳನ್ನು ಖರೀದಿಸಬಹುದಾಗಿದ್ದು, ನಮ್ಮ ರಾಜ್ಯ ಸೇರಿದಂತೆ ದೇಶದಲ್ಲಿ ಪ್ರಸ್ತುತ ಎನ್95 ಮಾಸ್ಕ್ ಹಾಗೂ ಪಿಪಿಇ ಕಿಟ್‍ಗಳನ್ನು ಉತ್ಪಾದಿಸಲಾಗುತ್ತಿದೆ. ಹಾಗಾಗಿ, ಈ ಹಿಂದಿಗಿಂತ ಈಗ ಕಡಿಮೆ ಬೆಲೆಯಲ್ಲಿ ದೊರಕುತ್ತಿವೆ.
ಪ್ರತಿಪಕ್ಷ ಆರೋಪಿಸಿರುವಂತೆ ಆರೋಗ್ಯ ಇಲಾಖೆಯಲ್ಲಿ ಸಾವಿರಾರು ಕೋಟಿ ರೂ.ಗಳ ಅವ್ಯವಹಾರ ಸಾಧ್ಯವೇ ಇಲ್ಲ, ಇಲ್ಲಿಯವರೆಗೆಆರೋಗ್ಯ ಇಲಾಖೆ ಔಷಧ ನಿಯಂತ್ರಣ ಇಲಾಖೆ ಮೂಲಕವೇ ಖರೀದಿಸಿರುವ ಕೋವಿಡ್ ಚಿಕಿತ್ಸೆ ಸಂಬಂಧಿತ ಉತ್ಪನ್ನಗಳ ಒಟ್ಟು ಬೆಲೆ 290 ಕೋಟಿ 60 ಲಕ್ಷದ 12 ಸಾವಿರದ 597 ರೂ.ಗಳು ಮಾತ್ರವಾಗಿದೆ ಎಂದು ಸ್ಪಷ್ಟಪಡಿಸಿದರು.
ವೆಂಟಿಲೆಟರ್ ಗಳಲ್ಲಿ ವಿವಿಧ ರೀತಿಯ ಮಾದರಿಗಳಿದ್ದು, ಪ್ರತಿ ಮಾದರಿಗೂ ಪ್ರತ್ಯೇಕ ದರವಿದೆ. ಈಗಾಗಲೇ ಕೇಂದ್ರ ಸರ್ಕಾರಿ ಸ್ವಾಮ್ಯದ ಹೆಚ್.ಎ.ಎಲ್ ವೆಂಟಿಲೆಟರ್‍ಗಳನ್ನು ಉತ್ಪಾದಿಸಲು ಆರಂಭಿಸಿದ್ದು, ಕೇಂದ್ರ ಸರ್ಕಾರ ರಾಜ್ಯಕ್ಕೆ ಒಟ್ಟು 2145 ವೆಂಟಿಲೆಟರ್‍ಗಳನ್ನು ನೀಡಲು ಸಮ್ಮತಿಸಿದ್ದು ಈಗಾಗಲೇ 640 ವೆಂಟಿಲೆಟರ್‍ಗಳನ್ನು ಉಚಿತವಾಗಿ ಪೂರೈಸಿದೆ.
ವಿವಿಧ ರೀತಿಯ ಗುಣಮಟ್ಟದ ಹಾಗೂ ನಾವೀನ್ಯತೆ ಹೊಂದಿರುವ ವೆಂಟಿಲೆಟರ್‍ಗಳನ್ನು ಖರೀದಿಸುವ ಉದ್ದೇಶದಿಂದ ಈಗಾಗಲೇ ಕೇಂದ್ರ ಸರ್ಕಾರ ಗುರುತಿಸಿರುವ ಸರಬರಾಜುದಾರರಿಂದ ಮಾತ್ರ ಖರೀದಿಸಲಾಗಿದ್ದು, ಹೆಚ್ಚಿನ ಮಟ್ಟದಲ್ಲಿ ಖರೀದಿಸಿದ್ದರಿಂದ ಮಾರುಕಟ್ಟೆಯ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸಲಾಗಿದೆ ಎಂದು ಹೇಳಿದರು.
ಈ ಹಿಂದೆ ಸ್ಯಾನಿಟೈಸರ್ ನ್ನು ಅತ್ಯಂತ ಕಡಿಮೆ ಮಟ್ಟದಲ್ಲಿ ಉತ್ಪಾದಿಸಲಾಗುತ್ತಿತ್ತು, ಕೋವಿಡ್ ಹಿನ್ನಲೆಯಲ್ಲಿ ಬೇಡಿಕೆ ಹೆಚ್ಚಾದ ಕಾರಣ ಮುಖ್ಯಮಂತ್ರಿಗಳು ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ತಮ್ಮಲ್ಲಿರುವ ಕಚ್ಚಾವಸ್ತುವನ್ನು ಬಳಸಿಕೊಂಡು ಸ್ಯಾನಿಟೈಸರ್ ಉತ್ಪಾದಿಸುವಂತೆ ಕರೆ ನೀಡಿದಾಗ ರಾಜ್ಯದಲ್ಲಿ ಸಹ ಸ್ಯಾನಿಟೈಸರ್ ಉತ್ಪಾದನೆ ಜಾಸ್ತಿಯಾಗಿ ಪ್ರಸ್ತುತ ಅದರ ಬೆಲೆ ಕುಸಿದಿದೆ.
ಪ್ರಸ್ತುತ ರಾಜ್ಯದಲ್ಲಿ ಕಾರ್ಪೊರೇಟ್ ಕಂಪನಿಗಳು ತಮ್ಮ ಸಿ.ಎಸ್.ಆರ್ ಯೋಜನೆಯಡಿಯಲ್ಲಿ ನೀಡಿರುವ 2 ಲಕ್ಷ ಲೀಟರ್ ಸ್ಯಾನಿಟೈಜರ್ ಬಳಸಲಾಗುತ್ತಿದೆ. ಕೋವಿಡ್ ಆರಂಭದ ದಿನಗಳಲ್ಲಿ ಮಾತ್ರ ಸ್ಯಾನಿಟೈಸರ್ ಖರೀದಿಸಲಾಗಿತ್ತು.
ಪಿಪಿಇ ಕಿಟ್‍ಗಳು ಸಹ ಅಷ್ಟೇ, ಕೋವಿಡ್ ಆರಂಭದ ಕಾಲದಲ್ಲಿ ಅಷ್ಟೇನು ಬಳಕೆಯಲ್ಲಿರದಿದ್ದ ಪಿಪಿಇ ಕಿಟ್‍ಗಳ ಬೆಲೆ ಹೆಚ್ಚಾಗಿತ್ತು. ಕೋವಿಡ್ ಬಂದಾದ ಮೇಲೆ ಸರ್ಕಾರ ಪ್ರತಿ ಕಿಟ್‍ಗೂ 1444 ರೂ.ಗಳನ್ನು ನೀಡಿತ್ತು, ಇತ್ತೀಚಿಗೆ ನಮ್ಮ ದೇಶದಲ್ಲಿಯೇ ಉತ್ಪಾದನೆ ಆರಂಭವಾದ ಕಾರಣಕ್ಕೆ ಇಂದು ಪ್ರತಿ ಪಿಪಿಇ ಕಿಟ್‍ಗೆ ಕೇವಲ 540 ರೂ.ಗಳಿಗೆ ಒಂದರಂತೆ ಖರೀದಿಸಲಾಗಿದೆ ಎಂದು ಹೇಳಿದರು.
ಉಪಮುಖ್ಯ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಮಾತನಾಡಿ ಪ್ರಸ್ತುತ ರಾಜ್ಯ ಸರ್ಕಾರದಲ್ಲಿರುವ ಸಚಿವರುಗಳಲ್ಲಿ ಅನೇಕರು ವೈದ್ಯರಿದ್ದು, ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಉತ್ಪನ್ನಗಳನ್ನು ಖರೀದಿಸುವಾಗ ಗುಣಮಟ್ಟ ಕುರಿತು ಅತ್ಯಂತ ಹೆಚ್ಚು ಕಾಳಜಿವಹಿಸಲಾಗಿದೆ. ಪ್ರತಿಪಕ್ಷಗಳು ಆರೋಪಿಸಿರುವಂತೆ ಯಾವುದೇ ಅವ್ಯವಹಾರಗಳು ನಡೆದಿಲ್ಲ, ಅವರು ನಮ್ಮ ಸರ್ಕಾರ ಖರೀದಿಸಿರುವ ಉತ್ಪನ್ನಗಳ ನಾವೀನ್ಯತೆಯನ್ನು ಅರಿತು ಇತರ ರಾಜ್ಯಗಳು ಖರೀದಿಸಿರುವ ಬೆಲೆಗಳನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿ ನೋಡಲಿ ಎಂದು ಹೇಳಿದರು.
ಇಂತಹ ಕಠಿಣ ಪರಿಸ್ಥಿಯಲ್ಲಿ ಸರ್ಕಾರದೊಂದಿಗೆ ಬೆಂಬಲ ನೀಡಿ ಸಾರ್ವಜನಿಕರನ್ನು ರಕ್ಷಿಸುವುದನ್ನು ಬಿಟ್ಟು ಹೀಗೆ ನಿರಾದಾರ ಆರೋಪಗಳನ್ನು ಮಾಡುವುದನ್ನು ನಿಲ್ಲಿಸಬೇಕು. ಇಂದು ದೇಶದಲ್ಲಿ ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ತನ್ನದೇ ಆದ ಸ್ಥಾನವನ್ನು ಉಳಸಿಕೊಂಡಿದೆ. ಇತರೆ ರಾಜ್ಯಗಳಿಗೆ ಹೋಲಿಸದಲ್ಲಿ ನಮ್ಮ ರಾಜ್ಯ ಉತ್ತಮವಾಗಿದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಕ್ತರ್ ಅವರು ಮಾತನಾಡಿ ಕೋವಿಡ್ ಚಿಕಿತ್ಸಗೆ ಸಂಬಂಧಿಸಿದಂತೆ ಯಾವುದೇ ವಸ್ತುಗಳನ್ನು ಖರೀದಿಸಲು ಸರ್ಕಾರ ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಿದೆ. ಅಗತ್ಯವಿರುವ ವಸ್ತುಗಳನ್ನು ಗುರುತಿಸುವ ಹಾಗೂ ತಾಂತ್ರಿಕ ವಿಶ್ಲೇಷಕರ ಸಮಿತಿಗಳಿದ್ದು, ಯಾವುದೇ ಖರೀದಿ ಈ ಎರಡು ಸಮಿತಿಗಳ ಮೂಲಕವೆ ಆಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಔಷಧ ನಿಯಂತ್ರಣ ಇಲಾಖೆ ಆಯುಕ್ತರಾದ ಶ್ರೀಮತಿ ಮಂಜುಳ ಅವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English