ಮಂಗಳೂರು: ‘ತುಳುವರ ಮನಸ್ಸು ವಿಶಾಲ’ ಎಲ್ಲರನ್ನೂ ತನ್ನವರನ್ನಾಗಿ ಮಾಡಿಕೊಳ್ಳುವುದು ನಮ್ಮ ಸ್ವಭಾವ. ಆದ್ದರಿಂದಲ್ಲೇ ರಾಮಾಯಣದ ಘಟನಾವಳಿಗಳು ತುಳು ನೆಲದಲ್ಲಿ ನಡೆದಂತೆ ಮಂದಾರ ಕೇಶವ ಭಟ್ಟರು ತಮ್ಮ ಮಹಾಕಾವ್ಯವನ್ನು ಹೆಣೆದಿದ್ದಾರೆ. ತುಳುನಾಡೆಂಬುದು ಒಂದು ‘ಪರಬೂಡು’ (ಹಳೇಮನೆ) ಮಂದಾರ ರಾಮಾಯಣ ಅದಕ್ಕೆ ‘ಪೊಸ ಬೊಳ್ಪು’ (ಹೊಸ ಬೆಳಕು) ನೀಡಿದೆ. ಸೂರ್ಯ ಜಗತ್ತಿಗೆ ದೀಪವಾದಂತೆ ಮಂದಾರದವರು ತುಳು ಭಾಷೆಗೆ ಬೆಳಕು ತೋರಿದ್ದಾರೆ’ ಎಂದು ಮೂಡಬಿದಿರೆ ಜೈನಮಠದ ಸ್ವಸ್ತಿ ಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುವರ್ಲ್ಡ್(ರಿ) ಕುಡ್ಲ ಇವರ ಸಹಯೋಗದೊಂದಿಗೆ ಉರ್ವಾ ತುಳು ಭವನದ ಸಿರಿ ಚಾವಡಿಯಲ್ಲಿ ಗುರುವಾರ ಆರಂಭಗೊಂಡ ‘ಏಳದೆ ಮಂದಾರ ರಾಮಾಯಣ: ಸುಗಿಪು -ದುನಿಪು’ ಪ್ರವಚನ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮಲ್ಲಿ ವಿವಿಧ ಜನ-ಜಾತಿ ಮತ್ತು ಭಾಷಾ ವರ್ಗಗಳು ಇದ್ದಂತೆ ಆಯಾಯ ವೃತ್ತಿ ಧರ್ಮದೊಂದಿಗೆ ಸಾಮರಸ್ಯದಿಂದ ಬದುಕುವ ಮನೋಧರ್ಮವೂ ಇದೆ’ ಎಂದ ಅವರು ‘ಕುಪ್ಪಳ್ಳಿಯಲ್ಲಿ ಕುವೆಂಪು ಅವರ ಮನೆಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿಸಿದಂತೆ, ಮಂದಾರರ ಮನೆ ಪರಿಸರವನ್ನೂ ತ್ಯಾಜ್ಯ ಮುಕ್ತಗೊಳಿಸಿ ಸರಕಾರ ಕೇಶವ ಭಟ್ಟರ ಸ್ಮಾರಕವನ್ನು ತುರ್ತಾಗಿ ರಚಿಸಬೇಕಾಗಿದೆ. ಅದಕ್ಕಾಗಿ ನಡೆಯುವ ಹೋರಾಟಕ್ಕೆ ಜಿಲ್ಲೆಯ ಪ್ರಮುಖರು ಬೆಂಬಲ ನೀಡಬೇಕು’ ಎಂದು ಕರೆಯಿತ್ತರು.
ಮಂದಾರರ ನೆನಪು :
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಗೂ ತುಳುಕಾವ್ಯಯಾನದ ಅಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂಸ್ಮರಣಾ ಭಾಷಣ ಮಾಡಿ ‘ಮಂದಾರ ರಾಮಾಯಣ ನಮ್ಮ ನೆಲದ ಮಹಾಕಾವ್ಯ ಅದು ಇರುವಲ್ಲಿವರೆಗೆ ಮಂದಾರ ಕೇಶವ ಭಟ್ಟರ ನೆನಪು ನಮ್ಮಲ್ಲಿ ಶಾಶ್ವತವಾಗಿರುತ್ತದೆ. ೨೦೧೮ರಲ್ಲಿ ಅವರ ಶತಮಾನೋತ್ಸವ ಸಂದರ್ಭ ವಿವಿಧ ಮಾಧ್ಯಮಗಳಲ್ಲಿ ಈ ಮಹಾಕಾವ್ಯದ ವಾಚನ-ಪ್ರವಚನಗಳನ್ನು ಮಾಡುತ್ತಾ ಬಂದಿದ್ದು ತುಳು ವರ್ಲ್ಡ್‌ನ ಮುಖಾಂತರ ಕಳೆದ ವರ್ಷ ಶಕ್ತಿನಗರದಲ್ಲಿ ಏಳದೆ ಮಂದಾರ ರಾಮಾಯಣ : ಸುಗಿಪು-ದುನಿಪು ಸಪ್ತಾಹ ಕಾರ್ಯಕ್ರಮ ಆಷಾಢ ಮಾಸದಲ್ಲಿ ಆರಂಭವಾಗಿದೆ. ಅದರ ಮುಂದುವರಿದ ಅಧ್ಯಾಯಗಳನ್ನು ಪ್ರಸಕ್ತ ಸಪ್ತಾಹದಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದರು. ಇದೇ ಸಂಧರ್ಭದಲ್ಲಿ ಸ್ವಾಮೀಜಿಯವರು ಪ್ರವಚನಕಾರರಿಗೆ ‘ಮಂದಾರ ರಾಮಾಯಣ’ ಗ್ರಂಥವನ್ನು ಹಸ್ತಾಂತರಿಸುವ ಮೂಲಕ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.
ಧಾರ್ಮಿಕ ಸಾಮರಸ್ಯ ಸಾರಿದ ವೇದಿಕೆ:
ಸಮಾರಂಭದಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರೊಂದಿಗೆ, ಸಂದೇಶ ಪ್ರತಿಷ್ಠಾನದ ನಿರ್ದೇಶಕರಾದ ಫಾ.ಫ್ರಾನ್ಸಿಸ್ ಅಲ್ಮೆಡಾ, ವಿಶ್ವಾಸ್ ಎಸ್ಟೇಟ್ಸ್ ಪಾಲುದಾರ ಸುಲೇಮಾನ್ ಶೇಖ್ ಬೆಳುವಾಯಿ, ಕರ್ನಾಟಕ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅತಿಥಿಗಳಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು.
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲ ಎಸ್.ಕುಂದರ್ ಹಾಗೂ ಮಂದಾರರ ಪುತ್ರಿ ಶಾರದಾಮಣಿ ಮುಖ್ಯ ಅತಿಥಿಗಳಾಗಿದ್ದರು.
ಸಮಾರಂಭದಲ್ಲಿ ‘ಮಂದಾರ ಉಳಿಸಿ’ ಅಭಿಯಾನದ ಮಂದಾರ ರಾಜೇಶ್ ಭಟ್ ಅವರಿಗೆ ‘ಮಂದಾರ ಸಮ್ಮಾನ್’ ನೀಡಿ ಗೌರವಿಸಲಾಯಿತು.
ಜಾನಪದ ಮಹಾಕಾವ್ಯ : ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್ ಅವರು ‘ತುಳು ವಾಲ್ಮೀಕಿ ಮಂದಾರ ಕೇಶವ ಭಟ್ಟರು ರಚಿಸಿದ ಮಂದಾರ ರಾಮಾಯಣ ಒಂದು ಜನಪದ ಮಹಾಕಾವ್ಯ. ಇದರಲ್ಲಿ ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಬಹಳ ಸೊಗಸಾಗಿ ನಿರೂಪಿಸಿದ್ದಾರೆ. ಕಾವ್ಯಯಾನ ಕಾರ್ಯಕ್ರಮದ ಮೂಲಕ ಈ ಮೇರುಕೃತಿಯಲ್ಲಿರುವ ತುಳು ಭಾಷಾ ಸೌಂದರ್ಯವನ್ನು ಎಲ್ಲರೂ ಸವಿಯುವಂತಾಗಲಿ ‘ಎಂದು ಹಾರೈಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ರಾಜೇಶ್.ಜಿ. ಸ್ವಾಗತಿಸಿದರು. ತುಳುವರ್ಲ್ಡ್(ರಿ) ಮಂಗಳೂರು ಅಧ್ಯಕ್ಷ ಡಾ.ರಾಜೇಶ್ ಆಳ್ವ ಬದಿಯಡ್ಕ ಅತಿಥಿಗಳನ್ನು ಗೌರವಿಸಿದರು. ಅಕಾಡೆಮಿ ಸದಸ್ಯ ನಿಟ್ಟೆ ಶಶಿಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿ ಸದಸ್ಯ ಚೇತಕ್ ಪೂಜಾರಿ ಉಪಸ್ಥಿತರಿದ್ದರು.ತುಳುವರ್ಲ್ಡ್ ಸಂಚಾಲಕ ಮಾಧವ ಭಂಡಾರಿ ವಂದಿಸಿದರು.
ಇರೆತ್ತ ಪುರೆ- ಪರಬುನ ವರಸಾರಿ:
ಏಳದೆ ಮಂದಾರ ರಾಮಾಯಣದ ‘ ತುಳು ಕಾವ್ಯಯಾನ -4 ‘ ಇದರ ಅಂಗವಾಗಿ ‘ಇರೆತ್ತಪುರೆ – ಪರಬುನ ವರಸಾರಿ’ ಕಾವ್ಯಭಾಗವನ್ನು ಗಾಯಕ ತೋನ್ಸೆ ಪುಷ್ಕಳ ಕುಮಾರ್ ಮತ್ತು ವಿದುಷಿ ಶೀಲಾ ದಿವಾಕರ್ ವಾಚಿಸಿದರು. ಪ್ರವಚನಕಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನಿಸಿದರು. ಕೋವಿಡ್ -19 ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.
Click this button or press Ctrl+G to toggle between Kannada and English