ಬೆಂಗಳೂರು: ಕರ್ನಾಟಕ ಎಸ್ಎಸ್ಎಲ್ ಸಿ ಫಲಿತಾಂಶಗಳು ಪ್ರಕಟವಾಗಿದ್ದು, ಈ ಬಾರಿ ಶೇ.71.80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ರಾಜ್ಯಾದ್ಯಂತ 8, 48, 203 ವಿದ್ಯಾರ್ಥಿಗಳು ಪರೀಕ್ಷೆ ನೋಂದಾಯಿಸಿಕೊಂಡಿದ್ದು, ಈ ಪೈಕಿ 8,11,050 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 19, 086 ವಿದ್ಯಾರ್ಥಿಗಳ ಕೊರತೆಯುಂಟಾಗಿತ್ತು. ರಾಜ್ಯಾದ್ಯಂತ 34 ಶೈಕ್ಷಣಿಕ ಜಿಲ್ಲೆಗಳ 22 ಕೇಂದ್ರಗಳಲ್ಲಿ ಮೌಲ್ಯಮಾಪನ ಮಾಡಲಾಗಿತ್ತು ಎಂದು ಹೇಳಿದರು. ಕೊರೊನಾ ಸೋಂಕಿನ ಭೀತಿಯಿಂದ 18,067 ವಿದ್ಯಾರ್ಥಿಗಳು ಮೊದಲು ಪರೀಕ್ಷೆ ಬರೆಯದೆ, ಪೂರಕ ಪರೀಕ್ಷೆಗೆ ಹಾಜರಾಗಿದ್ದರು. 227 ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಿತು. 52,219 ಮೌಲ್ಯಮಾಪಕರು ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಈ ವರ್ಷ ಶೇ.71.80 ಮಂದಿ ಅಂದರೆ 5, 82, 314 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷ 73.70 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದ್ದು, ಬೆಂಗಳೂರು ಗ್ರಾಮಾಂತರ ದ್ವಿತೀಯ ಮಧುಗಿರಿ ತೃತೀಯ, ಮಂಡ್ಯ ಜಿಲ್ಲೆಗೆ ನಾಲ್ಕನೇ ಸ್ಥಾನ ಲಭಿಸಿದೆ. ಯಾದಗಿರಿ ಕೊನೆಯ ಸ್ಥಾನ ಲಭಿಸಿದೆ. 2, 28, 734 ವಿದ್ಯಾರ್ಥಿಗಳು ಅನುತೀರ್ಣರಾಗಿದ್ದಾರೆ.
ಈ ಪೈಕಿ ಸರ್ಕಾರಿ ಶಾಲೆಗಳ ಶೇ.72.79 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅನುದಾನಿತ ಶಾಲೆಗಳ ಶೇ. 70.60 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅನುದಾನ ರಹಿತ ಶಾಲೆಗಳ ಶೇ.83.12ಮಂದಿ ವಿದ್ಯಾರ್ಥಿಗಲು ಉತ್ತೀರ್ಣರಾಗಿದ್ದಾರೆ.
ಪ್ರತೀ ಬಾರಿಯಂತೆಯೂ ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಶೇ.66.41 ಬಾಲಕರು ಉತ್ತೀರ್ಣರಾಗಿದ್ದು, ಶೇ.77.74ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. 6 ಮಂದಿ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿದ್ದು, ಕಳೆದ ಬಾರಿ ಇಬ್ಬರು ಮಾತ್ರ ಈ ಸಾಧನೆ ಗೈದಿದ್ದರು.
ಅಂತೆಯೇ ಈ ಬಾರಿ 11 ಮಂದಿ 625ಕ್ಕೆ 624 ಅಂಕಗಳನ್ನು ಪಡೆದಿದ್ದು, ಕಳೆದ ಬಾರಿ 11 ಮಂದಿ ಇಷ್ಚು ಅಂಕಗಳಿಸಿದ್ದರು. ಒಟ್ಟು 6 ವಿದ್ಯಾರ್ಥಿಗಳು ಈ ವರ್ಷ 625 ರಲ್ಲಿ 625 ರಲ್ಲಿ 100% ಅಂಕಗಳನ್ನು ಗಳಿಸಿದ್ದಾರೆ.
ಇನ್ನು ನಗರ ಪ್ರದೇಶದಲ್ಲಿ ಶೇ.73.41 ರಷ್ಟು ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಗ್ರಾಮೀಣ ಭಾಗದ ಶೇ.77.18 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಂತೆಯೇ ಕನ್ನಡ ಮಾಧ್ಯಮದ ಶೇ. 70.49 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು. ಆಂಗ್ಲ ಮಾಧ್ಯಮದ ಶೇ.84.98 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಎಸ್ಎಂಎಸ್ ಮೂಲಕ ಫಲಿತಾಂಶದ ಸಂದೇಶ ಕಳುಹಿಸಲಾಗುತ್ತದೆ, ಮಂಗಳವಾರ ಬೆಳಿಗ್ಗೆ ಆಯಾ ಶಾಲೆಗಳಲ್ಲಿ ಫಲಿತಾಂಶ ನೋಡಬಹುದು.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2020 ಪರಿಶೀಲಿಸಲು ಈ ಹಂತಗಳನ್ನು ಅನುಸರಿಸಿ
ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – karresults.nic.in.
ಹಂತ 2: ಎಸ್‌ಎಸ್‌ಎಲ್‌ಸಿ ಫಲಿತಾಂಶ 2020 ಕರ್ನಾಟಕ ಮಂಡಳಿಗೆ ನೇರ ಲಿಂಕ್ ಹುಡುಕಿ.
ಹಂತ 3: ನಿಮ್ಮ ರೋಲ್ ಸಂಖ್ಯೆ ಮತ್ತು ಇತರ ಅಗತ್ಯ ವಿವರಗಳನ್ನು ಸಲ್ಲಿಸಿ
ಹಂತ 4: ವಿವರಗಳನ್ನು ಪರಿಶೀಲಿಸಿ
ಹಂತ 5: ನಿಮ್ಮ ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2020 ಅನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
ಹಂತ 6: ಪಿಡಿಎಫ್ ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯದ ಬಳಕೆಗಾಗಿ ಅದನ್ನು ಉಳಿಸಿ.
Click this button or press Ctrl+G to toggle between Kannada and English