ದಾವಣಗೆರೆ: ಈ ಹಿಂದೆ ಮುಸ್ಲಿಂ ಹುಡುಗಿಯೊಬ್ಬಳು ಹಿಂದೂ ಕೋಮಿನ ಹುಡುಗನ ಜೊತೆಗೆ ಓಡಾಡುತ್ತಿದ್ದಾಳೆ ಎಂದು ಆರೋಪಿಸಿ ಆ ಹುಡುಗನ ಮೇಲೆ ಸ್ನೇಹಿತರ ಜೊತೆ ಸೇರಿ ಅಮಾನತಾಗಿದ್ದ ಪೇದೆ, ಈಗ ‘ಪವರ್ ಆಫ್ ಪಾಕಿಸ್ತಾನ್’ ಎಂಬ ಸಂದೇಶವಿದ್ದ ಫೇಸ್‌ಬುಕ್ ಪೇಜ್ ಅನ್ನು ಲೈಕ್ ಮಾಡಿ, ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಅದನ್ನು ಶೇರ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕಾನ್‌ಸ್ಟೆಬಲ್ ಸನಾವುಲ್ಲಾ ಅವರನ್ನು ಅಮಾನತುಗೊಳಿಸಲಾಗಿದೆ.
2008ನೇ ಸಾಲಿನಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗೆ ಸನಾವುಲ್ಲಾ ಆಯ್ಕೆಯಾಗಿದ್ದರು.
ಈ ಮೊದಲು ಬಸವನಗರ ಪೊಲೀಸ್ ಠಾಣೆಯ ವಾಹನ ಚಾಲಕರಾಗಿದ್ದರು. ಸನಾವುಲ್ಲಾ ಸದ್ಯ ವಿನೋಬನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಪಾಕಿಸ್ತಾನ ಪರ ಸಂದೇಶವನ್ನು ಹಂಚಿಕೊಂಡ ಪ್ರಕರಣ ವಿವಾದ ಪಡೆಯುತ್ತಿದ್ದಂತೆ ಅವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘2014ರಲ್ಲಿ ಹುಡುಗ–ಹುಡುಗಿ ಜೊತೆಯಲ್ಲಿ ಓಡಾಡುತ್ತಿದ್ದ ವಿಚಾರಕ್ಕೆ ಗಲಾಟೆ ಮಾಡಿದ್ದಾಗಲೂ ಸನಾವುಲ್ಲಾನನ್ನು ಅಮಾನತುಗೊಳಿಸಲಾಗಿತ್ತು. ಈಗ ಪಾಕಿಸ್ತಾನ ಪರ ಸಂದೇಶವನ್ನು ಶೇರ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಶೀಘ್ರವೇ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.
Click this button or press Ctrl+G to toggle between Kannada and English