ವೇತನ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುವಂತೆ ಕೋರಿ ನಗರದಲ್ಲಿ ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ

3:05 PM, Thursday, December 6th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Asha Workersಮಂಗಳೂರು :ಭಾರತೀಯ ಮಜ್ದೂರ್ ಸಂಘದ ಸಂಯೋಜನೆಗೆ ಒಳಪಟ್ಟ ಭಾರತೀಯ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೂ ಮೊದಲು ನಗರದ ಭಾರತೀಯ ಮಜ್ದೂರ್ ಸಂಘದ ಕಚೇರಿಯಿಂದ ಜಿಲ್ಲಾಧಿಕಾರಿ ಕಛೇರಿ ವರೆಗೆ ಆಶಾ ಕಾರ್ಯಕರ್ತೆಯರು
ಕಾಲ್ನಡಿಗೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ತೆರಳಿದರು.

Asha Workersಭಾರತೀಯ ಮಜ್ದೂರ್ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸೂರ್ಯ ನಾರಾಯಣರಾವ್ ಮಾತನಾಡಿ ಸ್ವಾತಂತ್ರ್ಯ ಹೋರಾಟದ ಸಂದರ್ಭ ಮಹಾತ್ಮ ಗಾಂಧಿಯವರು ಪ್ರತಿ ಕಾರ್ಮಿಕರಿಗೆ ಗರಿಷ್ಟ ಸೌಲಭ್ಯ ನೀಡಬೇಕು ಆಗ ಮಾತ್ರ ನಮ್ಮ ದೇಶವು ಅಭಿವೃದ್ದಿ ಹೊಂದುವುದು ಎಂದಿದ್ದರು. ಆದರೆ ಸ್ವಾತಂತ್ರ್ಯ ಬಂದ ನಂತರ ನಮ್ಮ ಸರಕಾರಗಳು ಈ ವಿಷಯವನ್ನು ಮರೆತು ಕಾರ್ಮಿಕರನ್ನು ತುಚ್ಚ ರೀತಿಯಲ್ಲಿ ಕಾಣುತ್ತಿವೆ. ಸರಕಾರ ನಡೆಸುವ ನಮ್ಮ ನಾಯಕರು ಕಾರ್ಮಿಕರಿಗೆ ಸೌಲಭ್ಯ ನೀಡುವ ಬದಲು ತಮ್ಮ ಸ್ವಂತ ಆಸ್ತಿ ಪಾಸ್ತಿಯನ್ನು ಲಂಚಗುಳಿತನದಿಂದ ಹೆಚ್ಚಿಸಿಕೊಂಡಿದ್ದಾರೆ.ವಿದೇಶಿ ಬಂಡವಾಳ ಹೂಡಿಕೆಯಂತಹ ಯೋಜನೆಗಳನ್ನು ಜಾರಿಗೊಳಿಸಿ ನಮ್ಮನ್ನು ಪರೋಕ್ಷವಾಗಿ ಜೀತದ ಕೆಲಸಕ್ಕೆ ತಳ್ಳುತ್ತಿದ್ದಾರೆ ಈ ಮೂಲಕ ದೇಶವನ್ನು ವಿದೇಶಿ ಕಂಪನಿಗಳಿಗೆ ಮಾರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ರಾಜ್ಯ ಹಾಗೂ ಕೇಂದ್ರ ಸರಕಾರಗಳನ್ನು ತರಾಟೆಗೆ ತೆಗೆದುಕೊಂಡರು.

Asha Workersಇಂದಿನ ದಿನಗಳಲ್ಲಿ ದಿನಬಳಕೆ ವಸ್ತುಗಳ ಬೆಲೆಯು ನಿಯಂತ್ರಣವಿಲ್ಲದೆ ಜಾಸ್ತಿಯಾಗುತ್ತಿದೆ. ಆದರೆ ಸರಕಾರವು ಆಶಾ ಕಾರ್ಯಕರ್ತೆಯರಿಗೆ ಕನಿಷ್ಟ ವೇತನವನ್ನು ಕೂಡ ನೀಡದೆ ನಿರ್ಲಕ್ಷ್ಯ ತೋರುತ್ತಿದೆ. ಜನರ ಸೇವೆ ಮಾಡುವಂತಹ ಮಹತ್ತರವಾದ ಕೆಲಸವನ್ನು ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಜೀವನ ನಿರಾಶಾದಾಯಕವಾಗಿದೆ ಎಂದರು. ಇಂದಿನ ನಮ್ಮ ನಾಯಕರು ಅಧಿವೇಶನದ ಸಂದರ್ಭದಲ್ಲಿ ಊಟಕ್ಕೆ ಬೇಕಾಬಿಟ್ಟಿಯಾಗಿ ಖರ್ಚು ಮಾಡುವಾಗ ಕಷ್ಟದಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡುವ ಆಶಾ ಕಾರ್ಯಕರ್ತೆಯರ ವೇತನವನ್ನು ಹಾಗೂ ಅವರಿಗೆ ಇನ್ನಿತರ ಸೌಲಭ್ಯಗಳನ್ನು ನೀಡಲು ಏಕಾಗಿ ಸರಕಾರ ಹಿಂದುಮುಂದು ನೋಡುತ್ತಿದೆ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಬಿ.ಎಂ.ಎಸ್.ಜಿಲ್ಲಾಧ್ಯಕ್ಷ ವಿಶ್ವನಾಥ ಶೆಟ್ಟಿ, ಭಾರತೀಯ ಆಶಾ ಕಾರ್ಯಕರ್ತೆಯರ ಸಂಘದ ಗೌರವಾಧ್ಯಕ್ಷೆ ಪುಷ್ಪಲತ, ಅಧ್ಯಕ್ಷೆ ವಿಜಯಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಪಾರ್ವತಿ, ಮುಂತಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English