ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಕೃಷ್ಣೈಕ್ಯ

1:46 PM, Sunday, September 6th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

keshavananda Bharatiಕಾಸರಗೋಡು: ಎಡನೀರು ಮಠಾಧೀಶ ಜಗದ್ಗುರು ಶಂಕರಾಚಾರ್ಯ ಸಂಸ್ಥಾನಂ  ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು (79) ರಾತ್ರಿ 12.45ರ ಸುಮಾರಿಗೆ ಕೃಷ್ಣೈಕ್ಯರಾದರು..

ಸೆ.2ರಂದು ಚಾತುರ್ಮಾಸ್ಯವನ್ನು ಪೂರೈಸಿದ್ದ ಶ್ರೀಗಳು ಕಳೆದ ಕೆಲವು ದಿನಗಳಿಂದ ಅಲ್ಪ ಅಸೌಖ್ಯದಲ್ಲಿದ್ದರು. ಶನಿವಾರ ರಾತ್ರಿ ಪೂಜೆ ಮುಗಿಸಿ ಫಲಾಹಾರ ಸ್ವೀಕರಿಸಿದ್ದ ಶ್ರೀಗಳು ಮಧ್ಯರಾತ್ರಿಯ ವೇಳೆ ಅಸ್ತಂಗತರಾಗಿದ್ದಾರೆ.

1960, ನ.14ರಿಂದ ಎಡನೀರು ಮಠಾಧಿಶರಾಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದ ಶ್ರೀಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ, ಸಂಗೀತ, ಯಕ್ಷಗಾನ, ಶಿಕ್ಷಣ, ಪ್ರವಾಸೋದ್ಯಮ ಸಹಿತ ಧಾರ್ಮಿಕ ಕ್ಷೇತ್ರಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ  ಅಪಾರ ಕೊಡುಗೆಗಳನ್ನು ನೀಡಿದ್ದರು.

ಧಾರ್ಮಿಕವಾಗಿ ಸಾಂಸ್ಕೃತಿಕವಾಗಿಯೂ ಸಕ್ರಿಯರಾಗಿದ್ದ ಶ್ರೀಗಳು ಗಡಿನಾಡಿನ ಸಂಸ್ಥಾನದಲ್ಲಿ ಯಕ್ಷಗಾನ, ಸಂಗೀತದ ಕೇಂದ್ರವನ್ನಾಗಿಸಿದ್ದರು. ಯಕ್ಷಗಾನ ಕಲೆಯ ಮೇಲೆ ಅತೀವ ಪ್ರೇಮ ಹೊಂದಿದ್ದ ಸ್ವಾಮೀಜಿ ಮೇಳವನ್ನು ಮುನ್ನಡೆಸುತ್ತಾ ಸ್ವತಃ ಭಾಗವತಿಕೆಯನ್ನೂ ನಡೆಸುತ್ತಿದ್ದರು.

ಮಠದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ ಶ್ರೀಗಳು ಹರಿಕಥೆಯನ್ನೂ ಮಾಡುತ್ತಿದ್ದರು. ಕರಾವಳಿಯ ಪ್ರಸಿದ್ದ ಯಕ್ಷಗಾನದ ಮೇಲೆ ವಿಶೇಷ ಒಲವಿದ್ದ ಶ್ರೀಗಳು, ಪ್ರತೀ ವರ್ಷ ಯಕ್ಷಗಾನ ಸಪ್ತಾಹ, ತಾಳಮದ್ದಳೆ ಕೂಟಗಳನ್ನು ನಡೆಸುತ್ತಿದ್ದರು.

ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೇಶವಾನಂದ ಸ್ವಾಮೀಜಿಯವರ ಹೆಸರು ಚಿರಸ್ಥಾಯಿಯಾಗಿದೆ. ಕೇಶವಾನಂದ ಭಾರತಿ ವರ್ಸಸ್ ಕೇರಳ ಸರ್ಕಾರ ಪ್ರಕರಣ ಭಾರಿ ಪ್ರಸಿದ್ಧಿ ಪಡೆದಿತ್ತು. ದೇಶದಲ್ಲಿ ಸಂಚಲನ ಉಂಟು ಮಾಡಿದ್ದ ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅತೀ ಅಪರೂಪ ಎಂಬಂತೆ 13 ಮಂದಿ ನ್ಯಾಯಾಧೀಶರ ಪೀಠ ರಚಿಸಿ ಕೈಗೊಂಡಿತ್ತು.

ಸ್ವಾತಂತ್ರ್ಯ ಭಾರತದ ಒಂದು ಪ್ರಧಾನ ಸಾಂವಿಧಾನಿಕ ಪ್ರಕರಣ ಕೇಶವಾನಂದ ಭಾರತಿ ವರ್ಸಸ್ ಕೇರಳ ರಾಜ್ಯ ಪ್ರಕರಣ. ಕಾಸರಗೋಡು ಜಿಲ್ಲೆಯ ಎಡನೀರು ಮಠಾದೀಶ ಶ್ರೀಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು 1971ರಲ್ಲಿ ಕೇರಳ ಸರ್ಕಾರದ ಭೂ ಸುಧಾರಣಾ ಕಾಯ್ದೆ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದರು.

ಆಸ್ತಿ ಮೂಲಭೂತವಾದುದೋ ಅಥವಾ ಇಲ್ಲವೋ ಎಂಬುದು ಈ ಪ್ರಕರಣದ ಪ್ರಧಾನ ಅಂಶವಾಗಿತ್ತು. ಆ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ಸಂವಿಧಾನದ ತಿದ್ದುಪಡಿಗಳು ಸಂವಿಧಾನದ ಮೂಲ ನಿರ್ಮಾಣವನ್ನು ಕಡ್ಡಾಯವಾಗಿ ಗೌರವಿಸಬೇಕೆಂದು ಸಾರಿತು.

ನ್ಯಾಯಾಲಯದ ಆದೇಶ ಸಂವಿಧಾನದ ಕೆಲವು ಮೂಲ ವಿಷಯಗಳನ್ನು ತಿದ್ದುಪಡಿ ಮೂಲಕ ಬಲಾಯಿಸುವುದು ಸಾಧ್ಯವಿಲ್ಲ ಎಂಬುದಾಗಿ ತಿಳಿಸಿತ್ತು. ಅಂದರೆ ಭಾರತದ ಸಂಸತ್ತಿನ ಸಾಂವಿಧಾನಿಕ ತಿದ್ದುಪಡಿಯಾಗಬಹುದು, ಆದರೆ ಅದು ಸಂವಿಧಾನದ ಮೂಲಭೂತ ಸ್ವಭಾವವನ್ನು ಬದಲಾಯಿಸಬಾರದು ಎಂಬುದು ಈ ತೀರ್ಪಿನ ವಿಶೇಷತೆಯಾಗಿತ್ತು.

ಕೇರಳ ಸರ್ಕಾರದ ಭೂಪರಿಷ್ಕರಣೆ ಪ್ರಕಾರ ಕಾಸರಗೋಡು ಸಮೀಪದ ಎಡನೀರು ಮಠದ ಆಸ್ತಿಯನ್ನು ಕೇರಳ ಸರ್ಕಾರ ಸ್ವಾಧೀನಪಡಿಸುವುದಕ್ಕೆ ಸಂಬಂಧಿಸಿದ ಪ್ರಕರಣವಾಗಿತ್ತು.

ಎಡನೀರು ಮಠಾಧೀಶ ಶ್ರೀಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಇದರ ವಿರುದ್ಧ ಸುಪ್ರೀಂಕೋರ್ಟ್‌ಗೆ ದಾವೆ ಹೂಡಿ ಭೂಪರಿಷ್ಕರಣೆ ಕಾಯ್ದೆ ಮಾನ್ಯತೆಯನ್ನು ಪ್ರಶ್ನಿಸಿದ್ದರು. ಇದರೊಂದಿಗೆ ಧಾರ್ಮಿಕ ಹಕ್ಕು, ಮಠಗಳನ್ನು ನಡೆಸಲು ಇರುವ ಹಕ್ಕು, ಸಮಾನತೆಯ ಹಕ್ಕು, ಆಸ್ತಿ ಹಕ್ಕು ಮುಂತಾದ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವ ಕುರಿತು ಉಲ್ಲೇಖಿಸಲಾಗಿತ್ತು. ಸುಮಾರು 68 ದಿನಗಳ ಕಾಲ ನಡೆದ ವಾದ ಪ್ರತಿವಾದ ನಡೆಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English