ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ: ಅತಂತ್ರವಾದ ಗೈಡ್‌ ಗಳ ಬದುಕು

1:14 PM, Tuesday, September 8th, 2020
Share
1 Star2 Stars3 Stars4 Stars5 Stars
(No Ratings Yet)
Loading...

Hampi ವಿಶೇಷ ವರದಿ : ಶಂಭು – ಹಂಪಿ : ವಿಶ್ವವ್ಯಾಪಿ ಹರಡಿರುವ ಕೊರೋನಾ ಹಿನ್ನೆಲೆಯಲ್ಲಿ ಪ್ರಖ್ಯಾತ ಪ್ರವಾಸಿ ತಾಣವಾಗಿರುವ ಹಂಪಿಗೆ ಆಗಮಿಸುವ ದೇಶ-ವಿದೇಶಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದ್ದು, ಹಂಪಿ ಇತಿಹಾಸ ವಿವರಿಸುವ ಮಾರ್ಗದರ್ಶಿಗಳ ಬದುಕು ಸಂಕಷ್ಟಕ್ಕೀಡಾಗಿದೆ.

ಹಂಪಿಗೆ ಆಗಮಿಸುವ ಪ್ರವಾಸಿಗರನ್ನು ನೆಚ್ಚಿಕೊಂಡು ಕಳೆದ 15-20  ವರ್ಷಗಳಿಂದ ಜೀವನ ನಡೆಸುತ್ತಿರುವ ಸುಮಾರು 180 ಮಾರ್ಗದರ್ಶಿಗಳ ಬದುಕು ಲಾಕ್‌ ಡೌನ್‌ ನ ಕಳೆದ 5 ತಿಂಗಳಿಂದ ಅತಂತ್ರದಲ್ಲಿದೆ.

ಕೊರೋನಾ ವೈರಸ್‌ ಹಂಪಿಯ ಮಾರ್ಗದರ್ಶಿಗಳ ಜೀವನಕ್ಕೆ ಪೆಟ್ಟು ನೀಡಿದೆ. ಜೀವನ ನಡೆಸುವುದು ಕಷ್ಟಕರವಾಗಿದೆ. ಮಾರ್ಗದರ್ಶಿಗಳ ನೂರಾರು ಕುಟುಂಬಗಳು ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಹೆಣಗಾಡುತ್ತಿವೆ. ಸರ್ಕಾರದಿಂದ ಮಾರ್ಗದರ್ಶಿಗಳಿಗೆ ಈವರೆಗೆ ಯಾವುದೇ ಸಹಾಯ ಸಿಕ್ಕಿಲ್ಲ. ಮಾರ್ಚ್‌ ಕೊನೆಯ ವಾರದಲ್ಲಿ ಅಕ್ಕಿಯನ್ನು ಮಾತ್ರ ನೀಡಲಾಗಿದೆ. ಅದನ್ನು ಹೊರತು ಪಡಿಸಿದರೆ ಇಲ್ಲಿಯವರೆಗೂ ಯಾವುದೇ ನೆರವು ದೊರೆತಿಲ್ಲ. ಇನ್ನು ಇನ್ಪೋಸಿಸ್‌ ಫೌಂಡೇಶನ್‌ ನ ಟ್ರಸ್ಟಿ ಸುಧಾ ಮೂರ್ತಿ ಅವರು ಮಾರ್ಗದರ್ಶಿಗಳಿಗೆ ಧನ ಸಹಾಯ ಮಾಡಿದ್ದರು. ಇದು ಸ್ವಲ್ಪಮಟ್ಟಿಗೆ ಮಾರ್ಗದರ್ಶಿಗಳಿಗೆ ಆಸರೆಯಾಗಿತ್ತು. ಕಷ್ಟ ಕಾಲದಲ್ಲಿ ಅವರ ಧನ ಸಹಾಯವನ್ನು ಎಂದೂ ಮರೆಯುವುದಿಲ್ಲ ಎನ್ನುತ್ತಾರೆ ಮಾರ್ಗದರ್ಶಿಗಳು.

ಜೀವನ ನಡೆಸುವುದು ಕಷ್ಟಕರವಾಗಿ ಕೊನೆಯಲ್ಲಿ ನರೇಗಾ ಕೆಲಸಕ್ಕೆ ಹೋಗಿ ತುತ್ತಿನ ಚೀಲವನ್ನು ತುಂಬಿಸಿಕೊಂಡಿದ್ದರು ದೈಹಿಕವಾಗಿ ಗಟ್ಟಿ ಆಗಿದ್ದವರು. ನರೇಗಾ ಕೆಲಸಕ್ಕೆ ಹೋಗಿದ್ದ ಮಾರ್ಗದರ್ಶಿಗಳಲ್ಲಿ ಕೆಲವರು ೫೦ ವರ್ಷ ಮೇಲ್ಟಟ್ಟವರು ಕೂಲಿ ಕೆಲಸ ಮಾಡಲು ಸಾಧ್ಯವಾಗದೆ ಸಂಕಷ್ಟ ಅನುಭವಿಸಿದ್ದಾರೆ.
ಕೊರೋನಾ ಲಾಕ್‌ ಡೌನ್‌ ಬಳಿಕ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. ಈಗ 200 ರಿಂದ 300 ಪ್ರವಾಸಿಗರು ಮಾತ್ರ ಬರುತ್ತಿದ್ದಾರೆ. ಹಂಪಿಗೆ ಈ ಮುಂಚೆ ಬರುತ್ತಿದ್ದ ಅರ್ಧದಷ್ಟು ಪ್ರವಾಸಿಗರು ಕೂಡ ಈಗ ಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ.

ಪ್ರವಾಸಿಗರಿಂದ ಹಂಪಿ ಚಿತ್ರವನ್ನು ಮಾತಿನಲ್ಲಿ ಕಟ್ಟಿ ಕೊಡಲು ಈ ಮುಂಚೆ 500 ರಿಂದ 6೦೦ ರೂ. ಪಡೆದುಕೊಳ್ಳುತ್ತಿದ್ದರು. ಆದರೆ, ಈಗ 100 ರೂ. ನಿಗದಿ ಮಾಡಿದರೂ ಪ್ರವಾಸಿಗರು ಬರಲು ಮುಂದಾಗುತ್ತಿಲ್ಲ. ಇನ್ನು ಕೆಲವರು ನೇರವಾಗಿ ಹಂಪಿಗೆ ಬಂದು, ಮಾರ್ಗದರ್ಶಿಗಳ ಸಹಾಯ ಕೇಳದೆ ಹಾಗೆಯೇ ಹೋಗುತ್ತಿರುವುದು ಪ್ರವಾಸಿ ಮಾರ್ಗದರ್ಶಿಗಳ ಬದುಕಿಗೆ ಮತ್ತಷ್ಟು ಪೆಟ್ಟು ನೀಡಿದೆ. ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ. ರವಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಅವರಲ್ಲಿ ಸಹಾಯದ ಅಳಲು ತೋಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳುವ ಮಾರ್ಗದರ್ಶಿಗಳು ನೆರವಿಗಾಗಿ ಕಾದು ಕುಳಿತಿದ್ದಾರೆ.

ಮೆಗಾಮೀಡಿಯಾ ನ್ಯೂಸ್‌ ಬ್ಯೂರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English