ಮಂಗಳೂರು : ನಿರಂತರವಾಗಿ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನೇತ್ರಾವತಿ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು ಎಕ್ಕೂರು, ಜಪ್ಪಿನಮೊಗರು, ಕಲ್ಲಾಪು ಸೇರಿದಂತೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಇದರಿಂದಾಗಿ ಶುಕ್ರವಾರ ಮುಂಜಾನೆಯ ವೇಳೆ ಜಪ್ಪಿನಮೊಗರು ಸುತ್ತಮುತ್ತ ಹಲವು ಮನೆಗಳು, ಫ್ಲ್ಯಾಟ್‌ಗಳ ಒಳಗೆ ನೆರೆ ನೀರು ನುಗ್ಗಿದೆ.
ಗುರುವಾರ ತಡರಾತ್ರಿಯಿಂದ ಮಳೆ ಮತ್ತಷ್ಟು ಬಿರುಸುಗೊಂಡಿದ್ದರಿಂದ ‘‘ಜಪ್ಪಿನಮೊಗರು ಆಸುಪಾಸಿನ ಸುಮಾರು 50 ಮನೆಗಳಿಗೆ ಮಳೆ ನೀರು ನುಗ್ಗಿದೆ. ಮನೆಯಲ್ಲಿರುವ ಸಾಮಗ್ರಿಗಳು ಮಳೆ ನೀರಿನಿಂದಾಗಿ ಸಂಪೂರ್ಣವಾಗಿ ನಿರುಪಯುಕ್ತವಾಗಿದೆ.
ಶುಕ್ರವಾರ ಬೆಳಗ್ಗೆ ಅಗ್ನಿಶಾಮಕ ದಳದ ತಂಡ ದೋಣಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದು, ಈಗಾಗಲೇ ವೃದ್ಧರು, ಮಕ್ಕಳು ಸೇರಿ 10ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿ ಸುರಕ್ಷಿತ ತಾಣಗಳಿಗೆ ಕಳುಹಿಸಿದ್ದಾರೆ. ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ., ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಉಪ ಆಯುಕ್ತರಾದ ಡಾ. ಸಂತೋಷ್ ಕುಮಾರ್, ಮಂಗಳೂರು ಸಹಾಯಕ ಆಯುಕ್ತ ಮದನ್, ತಹಶೀಲ್ದಾರ್ ಗುರುಪ್ರಸಾದ್, ಮೇಯರ್ ದಿವಾಕರ ಪಾಂಡೇಶ್ವರ, ಸ್ಥಳೀಯ ಕಾರ್ಪೊರೇಟರ್ ವೀಣಾ ಮಂಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿರುವುದರಿಂದ ರಕ್ಷಣಾ ತಂಡ ಸನ್ನದ್ಧವಾಗಿದೆ’’ ಎಂದು ಮೇಯರ್ ದಿವಾಕರ ಪಾಂಡೇಶ್ವರ ತಿಳಿಸಿದ್ದಾರೆ.
ಎಕ್ಕೂರಿನಿಂದ ಜಪ್ಪಿನಮೊಗರು ಹೋಗುವ ರಾಷ್ಟ್ರೀಯ ಹೆದ್ದಾರಿ ಬದಿಯ ರಾಜಕಾಲುವೆಗಳು ಹಾಗೂ ಚರಂಡಿಗಳು ತುಂಬಿ ಹರಿಯುತ್ತಿವೆ. ಇಲ್ಲಿನ ಕಾಲುವೆ ನೀರು ತುಂಬಿ ಮಧ್ಯದಲ್ಲಿ ಒಡೆದು ಹೋಗಿರುವ ಕಾರಣ ಗದ್ದೆ, ಮನೆಗಳು ಸೇರಿದಂತೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಜಪ್ಪಿನಮೊಗರುವಿನಿಂದ ಕಲ್ಲಾಪುವರೆಗಿನ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯ ಪ್ರದೇಶಗಳು ಜಲಾವೃತಗೊಂಡಿವೆ. ಹಲವಾರು ಮನೆಗಳು ಅಪಾಯದಲ್ಲಿವೆ. ಜಪ್ಪಿನಮೊಗರು ಕ್ರಾಸ್‌ನಿಂದ ಮಂಗಳೂರು ಕಡೆಗೆ ಬರುವ ದಾರಿಯಲ್ಲಿ (ಜಪ್ಪಿನಮೊಗರು ಬಸ್ಸು ನಿಲ್ದಾಣದ ಬಳಿ) ಮನೆಗಳು, ಫ್ಲಾಟ್‌ಗಳ ಒಳಗೆ ನೀರು ತುಂಬಿದೆ. ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಸೇರಿದಂತೆ ರಕ್ಷಣಾ ತಂಡ ಸ್ಥಳದಲ್ಲಿದ್ದು, ದೋಣಿಯ ಮೂಲಕ ಜನರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಬಹುಮಹಡಿ ಫ್ಲಾಟ್‌ಗಳಲ್ಲಿನ ತಳಭಾಗದ ಮನೆಗಳಿಗೆ ನೀರು ನುಗ್ಗಿದ್ದು, ಕೆಲವು ಮನೆಗಳವರು ಮೇಲಿನ ಮಹಡಿಗಳಲ್ಲಿ ಆಶ್ರಯ ಪಡೆದಿದ್ದಾರೆ.
ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಳಗ್ಗೆ 8 ಗಂಟೆಯ ಸುಮಾರಿಗೆ ಈ ಪ್ರದೇಶಕ್ಕೆ ದೋಣಿಗಳೊಂದಿಗೆ ಆಗಮಿಸಿ . ಸುಮಾರು 12 ಮಂದಿಯನ್ನು ರಕ್ಷಿಸಿ ಸುರಕ್ಷಿತ ತಾಣಗಳಿಗೆ ತಲುಪಿಸಿದ್ದಾರೆ. ಬೆಳಗ್ಗೆ ಸುಮಾರು 6 ಅಡಿಗಳಷ್ಟು ನೀರು ಮನೆಯೊಳಗೆ ನುಗ್ಗಿದ್ದರೆ, ರಸ್ತೆಯಲ್ಲಿ ಸುಮಾರು 8 ಅಡಿಗಳಷ್ಟು ನೀರಿತ್ತು.
ಈ ಬಾರಿ ಇಲ್ಲಿನ ರಾಜಕಾಲುವೆಗಳ ಅಕ್ರಮವನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿತ್ತು. ಹಾಗಿದ್ದರೂ ಇದು ತಗ್ಗು ಪ್ರದೇಶವಾಗಿದ್ದರಿಂದ ಮಳೆ ನೀರು ತುಂಬಿ ಮನೆಗಳಿಗೆ ನುಗ್ಗಿದೆ. ರಾತ್ರಿಯಿಂದ ಇಲ್ಲಿನ ಕುಟುಂಬಗಳು ಆತಂಕದಿಂದಲೇ ಪರಿಸ್ಥಿತಿಯನ್ನು ಎದುರು ನೋಡುವಂತಾಗಿದೆ. ಸದ್ಯ ರಕ್ಷಣಾ ತಂಡ ತೆರಳಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.
Click this button or press Ctrl+G to toggle between Kannada and English