ಸ್ಕೋರರ್‌, ಸಂಖ್ಯಾಶಾಸ್ತ್ರಜ್ಞ ಎಚ್. ಆರ್. ಗೋಪಾಲಕೃಷ್ಣ ಐದು ದಶಕಗಳ ಸಾಧನೆಯ ಪರಿಚಯ

8:51 PM, Tuesday, September 22nd, 2020
Share
1 Star2 Stars3 Stars4 Stars5 Stars
(4 rating, 1 votes)
Loading...

hr Gopalakrishnanಲೇಖನ : ತಿರು ಶ್ರೀಧರ – ದುಬೈ – ಭಾರತೀಯರಿಗೆ ಕ್ರಿಕೆಟ್ ಅಂದರೆ ಪ್ರೇಮ. ಈ ಕ್ರಿಕೆಟ್ ಪ್ರೇಮವನ್ನ ಪೋಷಿಸುವವರಲ್ಲಿ ನಮ್ಮ ಕಾಣಿಗೆ ಕಾಣದ ಅನೇಕರ ಕೊಡುಗೆ ಇದೆ. ಅಂತಹ ಕೊಡುಗೆಗಳಲ್ಲಿ ನಾವು ರೇಡಿಯೋ ಕಾಮೆಂಟರಿ ಕೇಳುವಾಗ ಮತ್ತು ಪತ್ರಿಕೆಗಳಲ್ಲಿ ಸಾಧನೆಗಳನ್ನು ಅಂಕಿ ಅಂಶಗಳ ಸಾಧನೆಗಳ ಜೊತೆಗೆ ಓದುತ್ತಿದ್ದಾಗ ಪ್ರಕಾಶಿಸಿತ್ತಿದ್ದ ಪ್ರಮುಖ ಹೆಸರು ನಮ್ಮ ಕನ್ನಡಿಗರೇ ಆದ ಎಚ್. ಆರ್. ಗೋಪಾಲಕೃಷ್ಣ ಅವರದು. ಗೋಪಾಲಕೃಷ್ಣ ಅವರು 1946ರ ಆಗಸ್ಟ್ 12ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಜನಿಸಿದರು. ಅವರ ಕುಟುಂಬದವರು ಹಿರೇಸಾವೆ ಗ್ರಾಮಸ್ಥರು.

ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್‌ನತ್ತ ಆಕರ್ಷಿತರಾದ ಗೋಪಾಲಕೃಷ್ಣ ಅವರು ಶಾಲಾ, ಕಾಲೇಜು ದಿನಗಳಲ್ಲಿ ಒಬ್ಬ ಕ್ರಿಕೆಟಿಗನಾಗಿ, ಬಳಿಕ ಅಂಪೈರ್‌ ಆಗಿ ನಂತರ ಸ್ಕೋರರ್‌ ವೃತ್ತಿ ಆಯ್ದುಕೊಂಡು, ಸಂಖ್ಯಾಶಾಸ್ತ್ರಜ್ಞರಾಗಿ, ವೀಕ್ಷಕ ವಿವರಣೆಗಾರರಾಗಿ, ಕ್ರಿಕೆಟ್‌ ತಜ್ಞರಾಗಿ ಕ್ರಿಕೆಟ್‌ನಲ್ಲಿ ಎಲ್ಲಾ ರೀತಿಯ ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಗೋಪಾಲಕೃಷ್ಣ ಅವರು 2018 ವರ್ಷದಲ್ಲಿ ಕ್ರಿಕೆಟ್ ಸಂಖ್ಯಾ ಶಾಸ್ತ್ರಜ್ಞರಾಗಿ 50 ವರ್ಷಗಳ ಸೇವೆಯನ್ನು ಪೂರೈಸಿದರು. 2018ರಲ್ಲಿ ಬೆಂಗಳೂರಿನಲ್ಲಿ ನಡೆದ ಭಾರತ ಮತ್ತು ಆಫ್ಘಾನಿಸ್ಥಾನದ ನಡುವೆ ನಡೆದ ಟೆಸ್ಟ್ ಪಂದ್ಯವು ಗೋಪಾಲಕೃಷ್ಣ ಅವರು ಆಕಾಶವಾಣಿ / ದೂರದರ್ಶನ / ಮೀಡಿಯಾ ಬಾಕ್ಸ್ ಸಮೂಹಕ್ಕೆ ಸಹಕಾರಿಯಾಗಿ ಕ್ರಿಕೆಟ್ ಅಂಕಿಅಂಶ ತಜ್ಞರಾಗಿ ಕಾರ್ಯನಿರ್ವಹಿಸಿದ 100ನೇ ಅಧಿಕೃತ ಅಂತರರಾಷ್ಟ್ರೀಯ ಮಟ್ಟದ ಪಂದ್ಯವೆನಿಸಿತು.

ಹೀಗೆ 50ವರ್ಷಗಳ ಸೇವೆ ಮತ್ತು 100 ಅಂತರರಾಷ್ಟ್ರೀಯ ಮಟ್ಟದ ಪಂದ್ಯಗಳ ಡಬಲ್ ಸಾಧನೆಯನ್ನು ಸಾಧಿಸಿದವರು ಗೋಪಾಲಕೃಷ್ಣರು ಮತ್ತು ಮತ್ತೊಬ್ಬರು ಮಾತ್ರವೇ ಎಂಬುದು ಗೊಪಾಲಕೃಷ್ಣರ ಸೇವೆಯಮಹತ್ವವನ್ನು ಸಾರಿ ಹೇಳುತ್ತದೆ. ಗೋಪಾಲಕೃಷ್ಣರು ಒಟ್ಟಾರೆ ಇದುವರೆವಿಗೆ 38 ಟೆಸ್ಟ್‌, 61 ಏಕದಿನ ಪಂದ್ಯಗಳಿಗೆ ಹಾಗೂ 6 ಇಪ್ಪತ್ತು ಓವರ್ ಪಂದ್ಯಗಳು ಸೇರಿದಂತೆ 105 ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಅಂಕಿ ಅಂಶ ತಜ್ಞರಾಗಿ ಕೆಲಸ ಮಾಡಿದ್ದಾರೆ. ಭಾರತದ ನೆಲದಲ್ಲಿ ಇದುವರೆಗೆ ನಡೆದಿರುವ ಮೂರೂ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳಿಗೆ ಗೋಪಾಲಕೃಷ್ಣ ರಿಂದ ಆಕಾಶವಾಣಿ ರೇಡಿಯೋ ವೀಕ್ಷಕ ವಿವರಣೆಗೆ ಅಂಕಿ ಅಂಶ ಸಹಕಾರ ಸಂದಿದೆ. ಇದರಲ್ಲಿ ಎರಡು 2019 ರ ವಿಶ್ವಕಪ್ ಸೆಮಿಫೈನಲ್ ಪಂದ್ಯಗಳೂ ಒಳಗೊಂಡಿವೆ. ಇಪ್ಪತ್ತು ಓವರುಗಳ ವಿಶ್ವಕಪ್ ಪಂದ್ಯಾವಳಿಯಲ್ಲೂ ಅವರ ಅಂಕಿ ಅಂಶ ಸೇವೆ ಆಕಾಶವಾಣಿಗೆ ಸಂದಿದೆ. ಕ್ರಿಕೆಟ್ ಲೋಕದಲ್ಲಿ ಆಟಗಾರನಾಗಿ, ವೀಕ್ಷಕ ವಿವಣೆಕಾರನಾಗಿ, ವರದಿಗಾರನಾಗಿ, ಅಂಪೈರ್ ಆಗಿ ಹೀಗೆ ಹಲವು ಪಾತ್ರಗಳಲ್ಲಿ ಕಾಣಿಸಿಕೊಂಡರೂ, ಗೋಪಾಲಕೃಷ್ಣರು ಒಬ್ಬ ಸ್ಕೋರರ್‌ ಹಾಗೂ ಸಂಖ್ಯಾಶಾಸ್ತ್ರಜ್ಞರಾಗಿ ಹೆಚ್ಚು ಜನಪ್ರಿಯರಾಗಿದ್ದಾರೆ.

1972ರ ವರ್ಷದಲ್ಲಿ ಮೈಸರು ಕ್ರಿಕೆಟ್ ಅಸೋಸಿಯೇಷನ್ ನಡೆಸಿದ ಅಂಪೈರಿಂಗ್ ಪರೀಕ್ಷೆಗಳಲ್ಲಿ ಗೋಪಾಲಕೃಷ್ಣ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರಲ್ಲದೆ, ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾದ ಏಕ್ಕೈಕ ಅಭ್ಯರ್ಥಿಯಾದ ಕೀರ್ತಿಗೆ ಪಾತ್ರರಾದರು. ಗೋಪಾಲಕೃಷ್ಣ ಆರ್.ವಿ. ಇಂಜಿನಿಯರಿಂಗ್ ಕಾಲೇಜು, ಬೆಂಗಳೂರು ಕ್ರಿಕೆಟರ್ಸ್ ಮತ್ತು ಪ್ತತಿಷ್ಠಿತ ನ್ಯಾಷನಲ್ ಯುನೈಟೆಡ್ ಕ್ರಿಕೆಟ್ ಕ್ಲಬ್ ಪರ ಲೀಗ್ ಕ್ರಿಕೆಟ್ನಲ್ಲಿ ಎಡಗೈ ಸ್ಪಿನ್ ಬೌಲರ್ ಆಗಿ ಗಣನೀಯ ಯಶ್ಸಸ್ಸು ಸಾಧಿಸಿದ್ದರು.

1975-76ರ ಸಮಯದಲ್ಲಿ ಕರ್ನಾಟಕದ ಮಾಜಿ ಆಟಗಾರ, ಬಿ.ರಘುನಾಥ್‌ ಅವರ ಸಲಹೆಯಂತೆ ಕ್ರಿಕೆಟ್‌ ಸಂಖ್ಯಾಶಾಸ್ತ್ರಜ್ಞರಾದ ಗೋಪಾಲಕೃಷ್ಣ, ಅನೇಕ ವಿಶ್ವ ದಾಖಲೆಗಳನ್ನು ಹುಡುಕಿ, ಕ್ರಿಕೆಟ್‌ ಜಗತ್ತಿನ ಮುಂದಿಟ್ಟಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ವಲಯದಲ್ಲಿ ಇವರನ್ನು ಬಲ್ಲದವರೇ ಇಲ್ಲ. ಕ್ರಿಕೆಟ್‌ ಲೋಕಕ್ಕೆ ಇವರು ಸಲ್ಲಿಸಿರುವ ಪಾತ್ರದ ಕುರಿತು ದಿಗ್ಗಜ ಕ್ರಿಕೆಟಿಗರಾದ ಜಿ.ಆರ್‌.ವಿಶ್ವನಾಥ್‌, ಸುನಿಲ್‌ ಗವಾಸ್ಕರ್‌, ಇಎಎಸ್‌ ಪ್ರಸನ್ನ, ಬಿ.ಎಸ್‌.ಚಂದ್ರಶೇಖರ್‌, ಅನಿಲ್‌ ಕುಂಬ್ಳೆ, ಜಾವಗಲ್‌ ಶ್ರೀನಾಥ್‌ ಸೇರಿದಂತೆ ಇಂದಿನ ಯುವ ಕ್ರಿಕೆಟಿಗರವರೆಗೂ ಪ್ರತಿಯೊಬ್ಬರೂ ಮೆಚ್ಚುಗೆಯ ಮಾತನಾಡುತ್ತಾರೆ. ಕ್ರಿಕೆಟ್ ಶಾಸ್ತ್ರಜ್ಞರಾಗಿ ಗೋಪಾಲಕೃಷ್ಣ ಅವರ ಸಾಧನೆ ಹಲವು ಬಗೆಯದು.

ಸ್ಕೋರರ್‌, ಸಂಖ್ಯಾಶಾಸ್ತ್ರಜ್ಞರಾಗಿ 105 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೆಲಸ; ಹಲವು ವರ್ಷಗಳ ಕಾಲ ಆಕಾಶವಾಣಿ/ದೂರದರ್ಶನದಲ್ಲಿ ಸ್ಕೋರರ್‌, ಸಂಖ್ಯಾಶಾಸ್ತ್ರಜ್ಞರಾಗಿ ಕಾರ್ಯನಿರ್ವಹಣೆ; ಬಿಸಿಸಿಐ ಸಂಖ್ಯಾಶಾಸ್ತ್ರ ಜ್ಞರ ಸಮಿತಿಯಲ್ಲಿ ಕಾರ್ಯನಿರ್ವಹಣೆ; 1979-80ರಲ್ಲಿ ಪಾಕಿಸ್ಥಾನವು ಬಿಡುಗಡೆ ಮಾಡಿದ ಡಾ. ಅಜೀಜ್ ರೆಹಮತುಲ್ಲಾ ಅವರ 26 ವರ್ಷಗಳ ಪಾಕಿಸ್ಥಾನ್ ಟೆಸ್ಟ್ ಕ್ರಿಕೆಟ್ ಕೃತಿಗೆ ಅಂಕಿ ಅಂಶಗಳ ವ್ಯವಸ್ಥಾಪನೆ; 1986-87ರಲ್ಲಿ ಹೊರಬಂದ ಡಾಮ್ ಮೊರೇಸ್ ರಚಿತ ಸುನಿಲ್ ಗವಾಸ್ಕರ್‌ರ ಆತ್ಮಕಥೆಗೆ ಅಂಕಿ-ಅಂಶಗಳ ನೆರವು ಹೀಗೆ ಹಲವು ಬಗೆಯ ಅವರ ಸೇವೆಗಳಿವೆ. ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಸಮೂಹದ ಪತ್ರಿಕೆಗಳಲ್ಲಿ ನಿರಂತರ ಗೋಪಾಲಕೃಷ್ಣ ಅವರ ಪಂದ್ಯಾವಳಿಗಳ ಅಂಕಿ ಅಂಶಗಳಿರುತ್ತಿತ್ತು. ಯಾವುದೇ ಮಹತ್ವದ ಕ್ರಿಕೆಟ್ ಪಂದ್ಯಾವಳಿಗಳಾದಾಗ ಗೋಪಾಲಕೃಷ್ಣ ಅವರ ಅಂಕಿ ಅಂಶಗಳನ್ನೊಳಗೊಂಡ ಜನಮನ ಸೆಳೆಯುವ ಬೃಹತ್ ಲೇಖನಗಳು ಎಲ್ಲ ಪತ್ರಿಕೆಗಳಲ್ಲಿ ಮೂಡುತ್ತಿರುವುದು ಸಾಮಾನ್ಯ. ವಿಸ್ಡನ್ ಕ್ರಿಕೆಟ್ ಪತ್ರಿಕೆ, ಹಿಂದೂ ಪತ್ರಿಕೆಯ ಶನಿವಾರದ ಕ್ರೀಡಾ ವಿಶೇಷ, ಸ್ಪೋರ್ಟ್ಸ್ ಸ್ಟಾರ್, ಆಸ್ಟ್ರೇಲಿಯಾದ ವರ್ಲ್ಡ್ ಆಫ್ ಕ್ರಿಕೆಟ್ ಮಾಸಿಕ, ಪಾಕಿಸ್ಥಾನದ ಕ್ರಿಕೆಟ್ ವರ್ಲ್ಡ್ ತ್ರೈಮಾಸಿಕ, Stumpvision.com, thirdslip.com, howstat.com, bcci.tv, iplt20.com, cricinfo.com, yahoo.com, espncricinfo.com ಮುಂತಾದ ಪ್ರಸಿದ್ಧ ಸುದ್ಧಿ ಮಾಧ್ಯಮ ಮತ್ತು ಕ್ರೀಡಾಜಾಲ ತಾಣಗಳೊಂದಿಗೆ ಗೋಪಾಲಕೃಷ್ಣ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ.

ಗೋಪಾಲಕೃಷ್ಣರು ಅನೇಕ ಪ್ರಸಿದ್ಧ ಅಪೂರ್ವ ದಾಖಲೆಗಳನ್ನು ಕ್ರಿಕೆಟ್ ಲೋಕದ ಮುಂದೆ ತೆರೆದಿರಿಸಿದ್ದಾರೆ. ಸ್ಪಿನ್ ಚತುಷ್ಟಯರ ಸಮಾಗಮ, 1983ರ ವಿಶ್ವಕಪ್ ಗೆಲುವಿನ ಸಂಭ್ರಮದ ವಿಶೇಷ ಚಿತ್ರಗಳು, ಡಾನ್ ಬ್ರಾಡ್ಮನ್ ಅವರ ವಿಶೇಷ ಚಿತ್ರಗಳು ಸಹಾ ಅವರ ಬಳಿ ಇದೆ. ಅದನ್ನು ಸಂಗ್ರಹ ಯೋಗ್ಯವಾಗಿ ಕ್ರಿಕೆಟ್ ಮಂಡಳಿ ತನ್ನ ಕಚೇರಿಗಳಲ್ಲಿ ಪ್ರದರ್ಶಿಸಿದೆ. ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪಂದ್ಯಾವಳಿಗಳ ಕುರಿತಾದ ವಾರ್ಷಿಕ ವರದಿಗಳು ಮತ್ತು ವಿಶಿಷ್ಟ ಸಂಚಿಕೆಗಳಿಗೆಲ್ಲ ಗೋಪಾಲಕೃಷ್ಣ ಅನಿವಾರ್ಯವ್ಯಕ್ತಿ ಎನಿಸಿದವರು. ಹಲವು ಬಾರಿ ಅವರು ರಾಷ್ಟ್ರೀಯ ಮಟ್ಟದ ಕ್ರೀಡಾ ಸಂಖ್ಯಾಶಾಸ್ತ್ರ ತಜ್ಞರ ಸಮಿತಿಯ ಸದಸ್ಯತ್ವ ಗೌರವ ಗಳಿಸಿದವರು. ಆಕಾಶವಾಣಿ ದೂರದರ್ಶನ ವೀಕ್ಷಕ ವಿವರಣಾ ತಂಡಗಳೊಂದಿಗಿರಲು ಬಹು ಅಪೇಕ್ಷಿತರಾಗಿದ್ದ ಕ್ರೀಡಾತಜ್ಞರು. ಗೋಪಾಲಕೃಷ್ಣ ಅವರಿಗೆ 1989ರಲ್ಲಿ ಕರ್ನಾಟಕ ಸರ್ಕಾರದಿಂದ ದಸರಾ ಕ್ರೀಡಾ ಪ್ರಶಸ್ತಿಗೆ ಸಂದಿತ್ತು. 2010 ವರ್ಷದಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English