ಬೆಂಗಳೂರು: ನೂತನ 2020-25 ರ ಪ್ರವಾಸೋದ್ಯಮ ನೀತಿಯು ಇಂದಿನಿಂದ ಮುಂದಿನ 5 ವರ್ಷಗಳವರೆಗೆ ಜಾರಿಯಲ್ಲಿರುತ್ತದೆ. ಈ ನೀತಿ ಅವಧಿಯಲ್ಲಿ ರೂ. 500 ಕೋಟಿ ಗಳ ಸಹಾಯಧನ, ಪ್ರೋತ್ಸಾಹ ಹಾಗೂ ರಿಯಾಯಿತಿಗಳನ್ನು ನೀಡುವ ಮೂಲಕ ರೂ. 5 ಸಾವಿರ ಕೋಟಿಗಳ ನೇರ ಬಂಡವಾಳ ಆಕರ್ಷಣೆಗೆ ಒತ್ತು ನೀಡಲಾಗುತ್ತದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ, ಯುವ ಸಬಲೀಕರಣ ಮತ್ತು ಕ್ರೀಡೆಗಳ ಸಚಿವ ಸಿ.ಟಿ. ರವಿ ಅವರು ತಿಳಿಸಿದರು.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸುಮಾರು 30 ಲಕ್ಷ ಜನ ಉದ್ಯೋಗ ಮಾಡುತ್ತಿದ್ದು, ಹೆಚ್ಚುವರಿಯಾಗಿ 10 ಲಕ್ಷ ಉದ್ಯೋಗಾವಕಾಶ ಸೃಷ್ಠಿಸುವ ಚಿಂತನೆ ಮಾಡಲಾಗುತ್ತಿದೆ. ಕೃಷಿ ಪ್ರವಾಸೋದ್ಯಮದ ಮೂಲಕ ಕೃಷಿಕರಿಗೆ ನೆರವು, ಪ್ರವಾಸಿಗರಿಗೆ ಕೃಷಿಯ ಬಗ್ಗೆ ಅರಿವು ಮೂಡಿಸಿ, ಸ್ಥಳೀಯ ಆಹಾರ ವೈವಿದ್ಯತೆ, ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಅಭಿವೃದ್ಧಿ, ರಾಜ್ಯದ ಲಂಬಾಣಿ ಹಾಗೂ ಬುಡಕಟ್ಟು ಜನಾಂಗದ ಸಂಸ್ಕøತಿಯನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಒತ್ತು ನೀಡಲಾಗುತ್ತಿದೆ ಎಂದರು.
ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿ ಮೂಲ ಸೌಕರ್ಯಗಳನ್ನು ಕಲ್ಪಿಸಲು, ಖಾಸಗಿ ಉದ್ಯಮಿಗಳನ್ನು ಉತ್ತೇಜಿಸಲು ಪ್ರವಾಸೋದ್ಯಮ ಭೂ ಬ್ಯಾಂಕ್ ಅನ್ನು ಸ್ಥಾಪಿಸಲಾಗುವುದು. ಕೋವಿಡ್-19 ರ ಸಂದರ್ಭವನ್ನು ಎದುರಿಸಲು ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ರಾಜ್ಯದಲ್ಲಿ ಸಂಪದ್ಬರಿತವಾದ ಐತಿಹಾಸಿಕ ಮತ್ತು ಸಾಂಸ್ಕøತಿಕ ಪರಂಪರೆಯನ್ನು ಅನಾವರಣಗೊಳಿಸಲು ಸಾವಿರಾರು ಪಾರಂಪರಿಕ ತಾಣಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲು ಸಂರಕ್ಷಣಾ ಕಾರ್ಯಕ್ರಮ ಜಾರಿಗೊಳಿಸುವುದರ ಜೊತೆಗೆ ಸುಸ್ಥಿರ ಪ್ರವಾಸೋದ್ಯಮ ನೀತಿಗೆ ಒತ್ತು ನೀಡಲಾಗುವುದು.
ಹೂಡಿಕೆದಾರರಲ್ಲಿ ಕರ್ನಾಟಕ ಪ್ರವಾಸೋದ್ಯಮ ಹೂಡಿಕೆ ಸಂಭಾವ್ಯತೆಯನ್ನು ಪ್ರದರ್ಶಿಸಲು ಮತ್ತು ಖಾಸಗಿ ವಲಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು ಜಾಗತಿಕ ಪ್ರವಾಸೋದ್ಯಮ ಹೂಡಿಕೆದಾರರ ಸಭೆ ಏರ್ಪಡಿಸಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಮಟ್ಟದಲ್ಲಿ ಪ್ರವಾಸೋದ್ಯಮಕ್ಕೆ ಅಗತ್ಯ ಮಾರ್ಗದರ್ಶನ ನೀಡಲು ಜಿಲ್ಲಾ ಪ್ರವಾಸೋದ್ಯಮ ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದರು.
ಕರ್ನಾಟಕವು ಪ್ರವಾಸೋದ್ಯಮದಲ್ಲಿ ದೇಶದಲ್ಲಿ 3ನೇ ಸ್ಥಾನದಲ್ಲಿದ್ದು, ಮೊದಲನೇ ಸ್ಥಾನಕ್ಕೆ ಬರಬೇಕು ಎನ್ನುವ ಗುರಿ ಹೊಂದಲಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ 11ನೇ ಸ್ಥಾನದಲ್ಲಿದ್ದು, ಮೂರನೇ ಸ್ಥಾನಕ್ಕೆ ಬರುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಕರಾವಳಿ ಪ್ರವಾಸೋದ್ಯಮ, ಪಾರಂಪರಿಕ ಪ್ರವಾಸೋದ್ಯಮ ಹಾಗೂ ವನ್ಯಜೀವಿ ಪ್ರವಾಸೋದ್ಯಮ ಮುಂತಾದ ಪ್ರವಾಸಿ ವೃತ್ತಗಳನ್ನು ಸೃಜಿಸಿ ಅಭಿವೃದ್ಧಿಪಡಿಸುವುದು, ಆತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರವಾಸಿ ಮೇಳಗಳನ್ನು ನಡೆಸುವ ಮೂಲಕ ಕರ್ನಾಟಕ ಪ್ರವಾಸೋದ್ಯಮವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರಪಡಿಸಲಾಗುವುದು ಎಂದರು.
ಕರ್ನಾಟಕ ಬಂದ್ ಇಲ್ಲ : ಸೆಪ್ಟೆಂಬರ್-28 ರಂದು ಕರ್ನಾಟಕ ಬಂದ್ ಇರುವುದಿಲ್ಲ. ಎಲ್ಲಾ ಸರ್ಕಾರಿ/ಅರೆ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ತಿಳಿಸಿದ್ದಾರೆ.
Click this button or press Ctrl+G to toggle between Kannada and English