ಕಾಸರಗೋಡು : ಮಂಜೇಶ್ವರ ಮೀನುಗಾರಿಕಾ ಬಂದರುನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಜೊತೆಗೆ ಕೊಯಿಲಾಂಡಿಯ ಬಂದರನ್ನೂ ಅವರು ಉದ್ಘಾಟಿಸಿದರು.
ಮಂಜೇಶ್ವರ ಬಂದರು ಒಟ್ಟು 48.80 ಕೋಟಿ ರೂ.ಗಳ ಯೋಜನೆಯಾಗಿದ್ದು, ಇದರಲ್ಲಿ ಶೇ.75 ಕೇಂದ್ರ ಸರಕಾರದ ಪಾಲು, ಶೇ.25 ರಾಜ್ಯ ಸರಕಾರದ ಪಾಲು ಇರುವುದು. ಯೋಜನೆಗಾಗಿ ಈಗಾಗಲೇ 45.71 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಬೆಸ್ತರು ನಿಜವಾಗಿಯೂ ಕರಾವಳಿಯ ರಕ್ಷಕರು. ಯಾವುದೇ ದುರಂತ ಸಂದರ್ಭದಲ್ಲಿ ಸೈನಿಕರಂತೆ ಸೇವೆ ಸಲ್ಲಿಸುತ್ತಿರುವ ಬೆಸ್ತರ ಬಗ್ಗೆ ಸರಕಾರ ಕಾಳಜಿ ಹೊಂದಿದೆ. ಪ್ರಕೃತಿ ವಿಕೋಪಗಳು ನಡೆದ ಸಂದರ್ಭದಲ್ಲಿ ಜೀವವನ್ನು ಪಣಕ್ಕಿಟ್ಟು ನೀಡಿದ ಸೇವೆ ಮರೆಯಲಾಗದು. ಬೆಸ್ತರ ಏಳಿಗೆಗಾಗಿ ಸರಕಾರ ಕಟಿಬದ್ದವಾಗಿದ್ದು, ಮಂಜೇಶ್ವರದಲ್ಲಿ ಬಂದರು ನಿರ್ಮಿಸಬೇಕೆಂಬ ದಶಕಗಳ ಕನಸು ಈಗ ಈಡೇರಿದೆ ಎಂದು ಪಿಣರಾಯಿ ವಿಜಯನ್ ಹೇಳಿದರು.
ಸುಮಾರು 275 ಬೋಟುಗಳು ಅಲ್ಲದೆ, ಯಾಂತ್ರಿಕರ ದೋಣಿಗಳಿಗೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕುಂಬಳೆ, ಕೊಯಿಪಾಡಿ, ಶಿರಿಯ, ಬಂಗ್ರ, ಮಂಜೇಶ್ವರ ಮೊದಲಾದ ಮೀನುಗಾರಿಕಾ ವಲಯದ ಹತ್ತು ಸಾವಿರದಷ್ಟು ಮಂದಿ ಈ ಬಂದರಿನ ಫಲಾನುಭವಿಗಳಾಗಿದ್ದಾರೆ.
ಸುಮಾರು1200 ರಷ್ಟು ಬೆಸ್ತರಿಗೆ ಪ್ರತ್ಯಕ್ಷವಾಗಿ ಹಾಗೂ 4800 ಮಂದಿಗೆ ಪರೋಕ್ಷವಾಗಿ ಪ್ರಯೋಜನ ಲಭಿಸಲಿದೆ. ಮೀನುಗಾರಿಕೆ ಅಲ್ಲದೆ ಮೀನು ಮಾರಾಟ, ರಫ್ತು ಸೇರಿದಂತೆ ಹಲವು ರೀತಿಯಲ್ಲಿ ಉದ್ಯೋಗಾವಕಾಶಗಳು ಲಭಿಸಲಿದೆ.
ಮೀನುಗಾರಿಕಾ ಸಚಿವೆ ಜೆ. ಮೆರ್ಸಿ ಕುಟ್ಟಿಯಮ್ಮ ಅಧ್ಯಕ್ಷತೆ ವಹಿಸಿದ್ದರು. ಕಂದಾಯ ಸಚಿವ ಇ. ಚಂದ್ರಶೇಖರನ್, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಎಂ.ಸಿ ಕಮರುದ್ದೀನ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English