ಬೆಳ್ತಂಗಡಿಯಲ್ಲಿ ನಕ್ಸಲರೂ ಮಕ್ಕಳಾಟಿಕೆಯಾದರೂ

11:38 AM, Tuesday, December 11th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Chaarmaadiಮಂಗಳೂರು :ಮನೆಯಿಂದ ಪರಾರಿಯಾಗಿದ್ದ ಬಾಲಕರಿಬ್ಬರು ಕಾಡಿನಲ್ಲಿ ದಿನಬಳಕೆ ವಸ್ತುಗಳನ್ನು ಶೇಖರಿಸಿಟ್ಟಿದ್ದು ಎಎನ್ಎಫ್ ಪೊಲೀಸರ ಕೂಂಬಿಂಗ್ ಕಾರ್ಯಾಚರಣೆ ಸಂದರ್ಭ ಪತ್ತೆಯಾಗುವ ಮೂಲಕ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಘಟನೆ ಚಾರ್ಮಾಡಿಯಲ್ಲಿ ಇತ್ತೀಚೆಗೆ ನಡೆಯಿತು. ಚಾರ್ಮಾಡಿಯ ಪೇಟೆಯ ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು ಎರಡು ಕಿ. ಮೀ. ದೂರದಲ್ಲಿ ಈ ಘಟನೆ ನಡೆದಿತ್ತು.

ನಕ್ಸಲ್ ನಿಗ್ರಹ ದಳದ ಪೊಲೀಸರಿಗೆ ಚಾರ್ಮಾಡಿಯಲ್ಲಿ ನಕ್ಸಲ್ ತಂಡವಿದೆ ಎಂಬ ಮಾಹಿತಿ ಬಂದಿತ್ತು. ಅದರಂತೆ ಬೆಳಗ್ಗೆ ತಂಡವೊಂದು ಚಾರ್ಮಾಡಿ ಪೇಟೆ ಬಳಿಯ ಕಾಡಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿತ್ತು. ಚಾರ್ಮಾಡಿ ಪೇಟೆಯಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿ ಉರ್ಬಿಲ್ ಗುಂಡಿ ಎಂಬಲ್ಲಿ ಓಟೆ ಬಿದಿರಿನ ಕಾಡಿನಲ್ಲಿ ಕಲ್ಲಿನ ಮೇಲೆ ಟರ್ಪಾಲ್ ಹಾಸಿದ್ದು ಕಂಡು ಬಂದಾಗ ಪೊಲೀಸರು ಅಲ್ಲಿಗೆ ತೆರಳಿದರು. ಆಗಷ್ಟೇ ಬಾಲಕರಿಬ್ಬರು ಅಲ್ಲಿಂದ ಪರಾರಿಯಾದರು. ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಗೋಣಿಯಲ್ಲಿ 2 ಕೆಜಿಯಷ್ಟು ಅಕ್ಕಿ, ಶಾಲಾ ಬ್ಯಾಗ್ ನಲ್ಲಿ 3 ಕೆಜಿಯಷ್ಟು ಅಕ್ಕಿ, 2 ಗರಗಸ, 2 ಕೆಜಿಯಷ್ಟು ಉಪ್ಪು, ಟರ್ಪಾಲ್, ಬೆಂಕಿಪೆಟ್ಟಿಗೆ, ಸುಮಾರು 100 ಊಟದ ಫೈಬರ್ ತಟ್ಟೆಗಳು, ಪ್ಲಾಸ್ಟಿಕ್ ಲೋಟ, ಕತ್ತರಿ, ಟಾರ್ಚ್, ಟೇಪ್ ರೆಕಾರ್ಡರ್, ಕ್ಯಾನ್, ಒಂದು ಕೋಳಿ, ಸಕ್ಕರೆ, ಚಾಹುಡಿ, ಬಟ್ಟೆ ತೊಳೆಯುವ ಸೋಪು, ಸೇರಿದಂತೆ ಅನೇಕ ವಸ್ತುಗಳು ಪತ್ತೆಯಾದವು.

ಘಟನೆ ಹಿರಿಯ ಅಧಿಕಾರಿಗಳಿಗೆ ತಿಳಿದು ನಕ್ಸಲ್ ಐಜಿ ಅಲೋಕ್ ಮೋಹನ್, ಎಸ್ಪಿ ಅಭಿಷೇಕ್ ಗೋಯೆಲ್, ಪುತ್ತೂರು ಎಎಸ್ಪಿ ಅನುಚೇತ್, ಬೆಳ್ತಂಗಡಿ ಎಸ್ಐ ಯೋಗೀಶ್ ಕುಮಾರ್, ವೇಣೂರು ಎಸ್ಐ ಉಮೇಶ್ ಉಪ್ಪಳಿಕೆ ಸ್ಥಳಕ್ಕೆ ಆಗಮಿಸಿದರು. ಸ್ಥಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಲೋಕ್ ಮೋಹನ್, ಇದು ನಕ್ಸಲರಿಗೆ ಆಹಾರ ಸಾಮಗ್ರಿ ಸರಬರಾಜು ಮಾಡಲು ಇಟ್ಟಿರುವ ಶಂಕೆಯಿದೆ. ಸ್ಥಳದಲ್ಲಿ ಬಾಲಕರಿಬ್ಬರು ಪರಾರಿಯಾಗಿದ್ದಾರೆ. ಹಾಗಾಗಿ ಅವರು ನಕ್ಸಲ್ ತಂಡಕ್ಕೆ ಸರಬರಾಜು ಮಾಡಲು ತಂದಿಟ್ಟಿರಬಹುದು ಎಂದು ಹೇಳಿದರು.

ಆದರೆ ಅಲ್ಲಿದ್ದ ಟೇಪ್ ರೆಕಾರ್ಡ್ ನ್ನು ಪ್ಲೇ ಮಾಡಿದಾಗ ಅದರಲ್ಲಿ ತುಳು ಭಕ್ತಿಗೀತೆ ಬಂತು. ಆಗ ಪೊಲೀಸರಿಗೆ ಒಂದಷ್ಟು ಅನುಮಾನಗಳು ಹುಟ್ಟಿಕೊಂಡವು. ಪೊಲೀಸರು ಕ್ಷಣಾರ್ಧದಲ್ಲಿ ಅಲ್ಲಿಂದ ಹೊರಟರು. ಚಾರ್ಮಾಡಿ ಪೇಟೆಗೆ ಬಂದಾಗ ಅಲ್ಲಿ ಸಾರ್ವಜನಿಕರು ಬೇರೆ ಬೇರೆ ಸುದ್ದಿ ಮಾತನಾಡಲು ಆರಂಭಿಸಿದರು. ಸ್ಥಳೀಯ ಬಾಲಕರಿಬ್ಬರು ಪರಾರಿಯಾಗಿದ್ದು, ಅವರು ಕಾಡಿನಲ್ಲಿದ್ದರು ಎಂಬ ಮಾಹಿತಿ ಬಹಿರಂಗವಾಯಿತು. ಅಲ್ಲದೆ ಸ್ಥಳೀಯ ಕೆಲವು ಮನೆಯಿಂದ ಟೇಪ್ ರೆಕಾರ್ಡರ್, ಟರ್ಪಾಲ್ ಕದ್ದು ಕೊಂಡೋಗಿದ್ದಾರೆ ಎಂಬ ಮಾಹಿತಿಯೂ ಸಿಕ್ಕಿತು. ಆಗ ಅದು ಬಾಲಕರ ಕೃತ್ಯ ಎಂದು ಬಹಿರಂಗವಾಯಿತು.

ಶಾಲೆ ತಪ್ಪಿಸಿ ಕಾಡಿಗೆ ಬಂದ ಮಕ್ಕಳು !

ನಾಪತ್ತೆಯಾಗಿದ್ದ ಬಾಲಕರಿಬ್ಬರು ಚಾರ್ಮಾಡಿ ಯಲ್ಲಿ ಸಂಜೆ ಪತ್ತೆಯಾದರು. ಅವರನ್ನು ಠಾಣೆಗೆ ಕರೆತಂದಾಗ ತಮ್ಮದೇ ಕತ್ಯ ಎಂದು ಒಪ್ಪಿಕೊಂಡರು. ನ.25ರಂದು ಮನೆಯಲ್ಲಿ ಯಾರೂ ಇಲ್ಲದಾಗ ಇವರು ನಾಪತ್ತೆಯಾಗಿದ್ದರು. ಚಾರ್ಮಾಡಿಯ ಕುಂಡುಟ್ಟು ಮನೆ ನಿವಾಸಿ ಜೋಹಾರ ಮತ್ತು ಸಿ.ಕೆ. ಅಬ್ದುಲ್ ಮುನಾಪ್ ಎಂಬವರ ಪುತ್ರ, ಚಾರ್ಮಾಡಿ ಸರ್ಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಮುಸ್ತಾಪ (14) ಹಾಗೂ ಉಜಿರೆ ಟಿಬಿ ಕ್ರಾಸ್ ಬಳಿಯ ನಿವಾಸಿ ರಾಬಿಯಾ ಹಾಗೂ ಅಬ್ದುಲ್ ಜಬ್ಬಾರ್ ಪುತ್ರ, ಉಜಿರೆ ಜನಾರ್ದನ ಶಾಲೆಯ 4ನೇ ತರಗತಿ ವಿದ್ಯಾರ್ಥಿ ಅಬ್ದುಲ್ ಸಲಾಂ (10) ನಾಪತ್ತೆಯಾಗಿದ್ದರು.

ಮುಸ್ತಾಫ ಅವರ ಮನೆಯಲ್ಲಿ ಮದುವೆ ಕಾರ್ಯಕ್ರಮವಿತ್ತು. ಅದಕ್ಕಾಗಿ ತಂದಿದ್ದ ಪೈಬರ್ ತಟ್ಟೆ, ಇನ್ನಿತರ ವಸ್ತುಗಳನ್ನು ಹಿಡಿದುಕೊಂಡು ಹೋಗಿದ್ದರು. ಹೀಗೆ ಕೊಂಡೋದ ವಸ್ತುಗಳನ್ನು ಕಾಡಿನಲ್ಲಿ ಇಟ್ಟು ರಾತ್ರಿ ಅಲ್ಲೇ ಮಲಗಿದ್ದರು. ಈ ನಡುವೆ ಹಗಲು ಉಜಿರೆಗೆ ಬಂದು ಒಂದೂವರೆ ಸಾವಿರ ಬೆಲೆಯ ಮೊಬೈಲ್ ನ್ನು 400 ರೂ.ಗೆ ಮಾರಿ ಮತ್ತೆ ಕಾಡಿಗೆ ತೆರಳಿದ್ದರು. ಮುಂಜಾನೆಯೇ ಕೂಂಬಿಂಗ್ ನಡೆಸಿದ ತಂಡ ಈ ಭಾಗದಲ್ಲಿ ಬಂದಾಗ ಕಲ್ಲಂಗಡಿ ತಿನ್ನಲು ತುಂಡು ಮಾಡುತ್ತಿದ್ದ ಬಾಲಕರು ಪೊಲೀಸರನ್ನು ಕಂಡು ಪರಾರಿಯಾದರು. ಮತ್ತೆ ಉಜಿರೆಗೆ ಬಂದ ಅವರು ವಾಪಸು ಚಾರ್ಮಾಡಿ ಗೆ ಹೋದಾಗ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದರು. ಅಲ್ಲಿಂದ ಬೆಳ್ತಂಗಡಿ ಠಾಣೆಗೆ ಕರೆತಂದಾಗ ತಮ್ಮ ಕತ್ಯಗಳನ್ನು ಒಪ್ಪಿಕೊಂಡರು. ಶಾಲೆಗೆ ಹೋಗಲು ಮನಸ್ಸಿಲ್ಲದೆ ಕಾಡಿನಲ್ಲಿ ಕುಳಿತ ಬಾಲಕರಿಬ್ಬರು ಜಿಲ್ಲಾ ಪೊಲೀಸ್ ವ್ಯವಸ್ಥೆಯನ್ನೇ ಅಲುಗಾಡಿಸಿದ್ದರು. ಒಂದು ವೇಳೆ ನಕ್ಸಲ್ ನಿಗ್ರಹ ತಂಡ ಬಾಲಕರನ್ನು ಕಂಡು ನಕ್ಸಲರು ಎಂದು ತಿಳಿದು ಗುಂಡು ಹಾರಿಸುತ್ತಿದ್ದರೆ ಭಾರಿ ಅನಾಹುತವೊಂದು ನಡೆಯುತ್ತಿತ್ತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English