ಮಂಗಳೂರು: ಮಹತೋಭಾರ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವವು ಅಕ್ಟೋಬರ್ 17 ರಿಂದ ಆರಂಭಗೊಂಡಿದೆ.
ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚು ಜನಸಂದಣಿ ಸೇರದಂತೆ ಉತ್ಸವದ ಸಮಯ ಬದಲಾವಣೆ ಮಾಡಲಾಗಿದೆ. ಸಾರ್ವಜನಿಕ ಅನ್ನಸಂತರ್ಪಣೆ ಇರುವುದಿಲ್ಲ ಎಂದು ಎಂದು ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆ ಹೇಳಿದ್ದಾರೆ.
ಮಹಾನವಮಿಯಂದು ಚಂಡಿಕಾಹೋಮ, ವಾಹನ ಪೂಜೆ (ಆಯುಧ ಪೂಜೆ), ರಾತ್ರಿ ದೊಡ್ಡ ವಿಶೇಷ ರಂಗಪೂಜೆ ನಂತರ ಸಣ್ಣ ರಥೋತ್ಸವ ನೆರವೇರಿಸಲಾಗುವುದು. ವಿಜಯದಶಮಿಯಂದು ಬೆಳಿಗ್ಗೆ ತೆನೆ ಹಬ್ಬದ ಅಂಗವಾಗಿ 8 ಗ್ರಾಮದ ಜನರಿಗೆ ತೆನೆ ನೀಡುವ ಪದ್ಧತಿ ಹಿಂದಿನಿಂದಲೂ ನಡೆದು ಬಂದಿದೆ. ನಂತರ ತುಲಾಭಾರ ಸೇವೆ, ಮಧ್ಯಾಹ್ನ ರಥಾರೋಹಣವಾಗಿ ಸಂಜೆ 5ಕ್ಕೆ ರಥೋತ್ಸವ ಜರುಗಲಿವೆ.
ನವರಾತ್ರಿ ಸಂದರ್ಭದಲ್ಲಿ ದೇವರಿಗೆ 10 ದಿನಗಳಲ್ಲಿ ವಿಶೇಷವಾಗಿ ದುರ್ಗಾದೇವಿ, ಆರ್ಯದೇವಿ, ಭಗವತಿ, ಕುಮಾರಿ, ಅಂಬಿಕೆ, ಮಹಿಷಮರ್ದಿನಿ, ಚಂಡಿಕೆ, ಸರಸ್ವತಿ, ವಾಗೀಶ್ವರಿ, ಮಂಗಳಾದೇವಿಯ ಅಲಂಕಾರ ಮಾಡಲಾಗುತ್ತದೆ. 27ರಂದು ಸಂಜೆ 7.30ಕ್ಕೆ ಅವಭೃತ ಮಂಗಳ ಸ್ನಾನದೊಂದಿಗೆ ನವರಾತ್ರಿ ಮಹೋತ್ಸವ ಮುಕ್ತಾಯವಾಗಲಿದೆ. ರಥೋತ್ಸವ ಮತ್ತು ಅವಭೃತ ಮಂಗಳಸ್ನಾನದ ಸಮಯದಲ್ಲಿ ಕರ್ಪೂರ ಆರತಿ, ಹಣ್ಣುಕಾಯಿಗಳನ್ನು ಸ್ವೀಕರಿಸುವುದಿಲ್ಲ.
ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಉತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲಾಗುವುದು. ಉತ್ಸವದ ಸಮಯದಲ್ಲಿ ಸಂತೆ ಏಲಂ, ಸಾಂಸ್ಕೃತಿಕ ಕಾರ್ಯಕ್ರಮ ಇರುವುದಿಲ್ಲ. ಅಕ್ಟೋಬರ್ 26 ರಂದು ಸಂಜೆ ರಥೋತ್ಸವ 5 ಗಂಟೆಗೆ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆ ತಿಳಿಸಿದ್ದಾರೆ.
Click this button or press Ctrl+G to toggle between Kannada and English