ಮುಡಿಪು ಭಾಗದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದವರು ಶಾಸಕ ಯು.ಟಿ.ಖಾದರ್ ಸಂಬಂಧಿಗಳು !

8:27 PM, Monday, October 19th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Rajesh Naik ಮಂಗಳೂರು: ಮಾಜಿ ಸಚಿವರಾದ ಬಿ.ರಮಾನಾಥ ರೈ  ಆರೋಪಕ್ಕೆ ಉತ್ತರಿಸಿದ ಬಂಟ್ವಾಳ ಶಾಸಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್,  ನಾನು ಕೆಂಪು ಕಲ್ಲು ಗಣಿಗಾರಿಕೆ ಮಾಡುತ್ತಿಲ್ಲ. ನನ್ನ ಸಂಬಂಧಿಕರು ಕೂಡಾ ಅಂತಹ ವ್ಯವಹಾರದಲ್ಲಿ ತೊಡಗಿಸಿಕೊಂಡಿಲ್ಲಎಂದು ಹೇಳಿದ್ದಾರೆ.

ಅವರು ಸೋಮವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಡಿಪು ಪ್ರದೇಶ ಬಂಟ್ವಾಳ ತಾಲೂಕು ಸರಹದ್ದಿನಲ್ಲಿದ್ದರೂ ಮಂಗಳೂರು ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಅದು ನನ್ನ ಕ್ಷೇತ್ರದಲ್ಲಿ ಇಲ್ಲ,  ಬಿ.ರಮಾನಾಥ ರೈಯವರು ಸುದ್ದಿಗೋಷ್ಠಿಯಲ್ಲಿ ಆಡಳಿತ ಪಕ್ಷದ ಶಾಸಕರೊಬ್ಬರು ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಅವರ ಸಂಬಂಧಿಗಳು ಕೂಡಾ ಅದರಲ್ಲಿ ಇದ್ದಾರೆ ಎಂದು ಆರೋಪಿಸಿದ್ದರು. ನಾನು ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಅಧಿಕೃತ ಪರವಾನಗಿ ಪಡೆದು ಪಟ್ಟಾ ಜಮೀನಿನಲ್ಲಿ ಎಂದು ಅವರು ಹೇಳಿದರು.

ಅಕ್ರಮವಾಗಿ ಗಣಿಗಾರಿಕೆ ಮಾಡುವವರೂ ಇರಬಹುದು. ನಾನು ಹಿಂದಿನಿಂದಲೂ ಕಾನೂನು ಬದ್ಧವಾಗಿಯೇ ಗಣಿಗಾರಿಕೆ ಮಾಡಿಕೊಂಡು ಬಂದಿದ್ದೇನೆ. ಆದರೆ ಎಲ್ಲರೂ ಹಾಗೆ ಮಾಡುತ್ತಾರೆ ಎಂದು ಹೇಳಲಾಗದು. ಉನ್ನತ ಮಟ್ಟದ ತನಿಖೆ ನಡೆಯಲಿ. ಆಗ ಕಾನೂನು ರೀತಿಯಲ್ಲಿ ಗಣಿಗಾರಿಕೆ ಮಾಡುತ್ತಿರುವವವರಿಗೆ ಮಾನ್ಯತೆ ಬರುತ್ತದೆ ಎಂದು ಶಾಸಕರು ನುಡಿದರು.

ಕೆಂಪು ಮಣ್ಣಿಗೆ ಲಭಿಸುವ ದರ ರೂ.600. ಅದು ಆರ್ಥಿಕವಾಗಿ ನಷ್ಟದ ದಾರಿ ಎಂದು ಹೇಳಿದ ಶಾಸಕರು, ರಾಯಧನವನ್ನು ಕಡಿಮೆ ಮಾಡುವಂತೆ ನಾನೇ ಒತ್ತಾಯಿಸಿದ್ದೇನೆ. ಪ್ರಸ್ತುತ ಅದನ್ನು ರೂ.162ಕ್ಕೆ ಇಳಿಸಲಾಗಿದೆ. ಮುಂದೆ ಕೆಂಪು ಕಲ್ಲು ಗಣಿಗಾರಿಕೆ ಶುರು ಮಾಡುತ್ತಿದ್ದರೆ ಕಾನೂನು ಬದ್ದವಾಗಿಯೇ ಮಾಡುತ್ತೇನೆ ಎಂದು ರಾಜೇಶ ನಾಯ್ಕ್ ಹೇಳಿದರು.

ಪ್ರಸ್ತುತ ಎಂಟು ತಿಂಗಳಿನಿಂದ ಕೆಂಪು ಕಲ್ಲು ಗಣಿಗಾರಿಕೆಯನ್ನು ಮಾಡಿಲ್ಲ, ಕೋವಿಡ್ ಮತ್ತು ರಾಯಧನವನ್ನು ಹೆಚ್ಚಳ ಮಾಡಿರುವುದು ಅದಕ್ಕೆ ಕಾರಣವಾಗಿದೆ. ಸರಕಾರ ರಾಯಧನವನ್ನು ಟನ್‌ವೊಂದರ ರೂ.92 ರಿಂದ ರೂ.252ಕ್ಕೆ ಹೆಚ್ಚಿಸಿತ್ತು.

Rajesh Naikನಾನು ಎಂದಿಗೂ ರಾಜಕೀಯವನ್ನು ಬದುಕು ಮಾಡಿಕೊಂಡಿಲ್ಲ, ಮುಂದೆಯೂ ಬದುಕು ಮಾಡಿಕೊಳ್ಳಲಾರೆ. ಕೃಷಿ ಇದೆ, ಕಾನೂನು ಬದ್ಧ ವ್ಯವಹಾರಗಳಿವೆ. ನಿಯಮಗಳ ಚೌಕಟ್ಟು ಮೀರಲಾರೆ ಎಂದು ಸ್ಪಷ್ಟಪಡಿಸಿದರು. ನಾನು ಸಾರ್ವಜನಿಕ ಬದುಕಿನಲ್ಲಿ ಇರುವವನು. ಜೊತೆಗೆ ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ. ಪಾರದರ್ಶಕವಾಗಿರಬೇಕೆಂದು ಬಯಸಿ ಸ್ಪಷ್ಟನೆ ನೀಡುತ್ತಿದ್ದೇನೆ.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದ್ರೆ  ಮಾತನಾಡಿ ಮಾಜಿ ಸಚಿವ ರಮಾನಾಥ ರೈ ಅವರು ಕಂಪೆನಿಯೊಂದರ ಹೆಸರು ಪ್ರಸ್ತಾಪ ಮಾಡಿದ್ದಾರೆ. ಅದರಲ್ಲಿ ಬಿಜೆಪಿಯ ಶಾಸಕರು ಇದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪಕ್ಕೆ ಅವರು ದಾಖಲೆ ಒದಗಿಸಬೇಕು, ತಮ್ಮದೇ ಪಕ್ಷದ ಶಾಸಕ ಯು.ಟಿ.ಖಾದರ್ ಅವರನ್ನು ಎದುರು ಹಾಕಿಕೊಳ್ಳುವುದು ಸಾಧ್ಯವಾಗದೆ ಅವರು ಈ ರೀತಿ ವೃಥಾ ಆರೋಪ ಮಾಡಿದ್ದಾರೆ. ಮುಡಿಪು ಭಾಗದಲ್ಲಿ ಅಕ್ರಮ ಗಣಿಗಾರಿಕೆ ಕಂಪೆನಿಯಲ್ಲಿ ತೊಡಗಿರುವವರು ಖಾದರ್ ಸಂಬಂದಿಗಳೇ ಆಗಿದ್ದಾರೆ ಎಂದರು.

ಆಡಳಿತ ಪಕ್ಷದ ಶಾಸಕರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವುದರಿಂದ ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ಮಾಜಿ ಸಚಿವ ರೈ ಆರೋಪಿಸಿದ್ದಾರೆ. ರಮಾನಾಥ ರೈ ಅವರು ಪರಿಸರ ಖಾತೆಯ ಸಚಿವರಿದ್ದ ಕಾಲದಲ್ಲಿಯೇ ರಾಜೇಶ್ ನಾಯ್ಕರಿಗೆ ಕೆಂಪು ಕಲ್ಲು ಗಣಿಗಾರಿಕೆಗೆ ಪರವಾನಗಿ ನೀಡಲಾಗಿದೆ. ಆಗ ರೈ ಅವರಿಗೆ ಪರಿಸರದ ಕಾಳಜಿ ಇರಲಿಲ್ಲವೇ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ತು ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮೂಡಾ ಅಧ್ಯಕ್ಷ ರವಿಶಂಕರ ಮಿಜಾರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ, ವಕ್ತಾರ ರಾಧಾಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English