ಇಂಧನ ಟ್ಯಾಂಕರ್ ಗೆ ಕಣ್ಣ ಹಾಕಿ ಹಣ ದೋಚುತ್ತಿದ್ದ ಜಾಲ ಪತ್ತೆ

12:17 PM, Tuesday, December 11th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Fuel theft racketಮಂಗಳೂರು :ಪೆಟ್ರೋಲ್ ಟ್ಯಾಂಕರ್ ನ ಒಳಭಾಗದಲ್ಲಿ ರಹಸ್ಯವಾಗಿ ಮತ್ತೊಂದು ಟ್ಯಾಂಕ್ ನಿರ್ಮಿಸಿ ಪೆಟ್ರೋಲ್ ಸಂಸ್ಥೆ ಹಾಗೂ ಬಂಕ್ ಗಳಿಗೆ ವಂಚಿಸಿ, ನಿರಂತರವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಕಳವು ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಇತ್ತೀಚೆಗೆ ಪತ್ತೆಹಚ್ಚುವ ಮೂಲಕ ಬೃಹತ್ ಕಾರ್ಯಚರಣೆ ಮಾಡಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು 69 ಲಕ್ಷ ರೂ. ಮೌಲ್ಯದ 5 ಟ್ಯಾಂಕರ್ ಹಾಗೂ ನಗದು 3 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.

ಬಂಟ್ವಾಳ ತಾಲೂಕು ಮಾಣಿ ಮನೆ ನಿವಾಸಿ ಯು.ಬಿ. ಅಶೋಕ್ (33), ಮಡಿಕೇರಿ ತಾಲೂಕು ಸಂಪಾಜೆ ದುಗ್ಗಲ ಮನೆ ನಿವಾಸಿ ಸುಕುಮಾರ (28), ಪುತ್ತೂರು ಮಾಡ್ನೂರು ಗ್ರಾಮ ಮಾಣಿ ಅಡ್ಕ ಮನೆ ನಿವಾಸಿ ಚಿದಾನಂದ (21), ಪುತ್ತೂರು ತಾಲೂಕು ಅಲಂಕಾರು ಗ್ರಾಮ ಶರವೂರು ಮನೆ ನಿವಾಸಿ ಕುಶಾಲಪ್ಪ (25), ಶಿವಮೊಗ್ಗ ಜಿಲ್ಲೆ ಮಾಸ್ತಿಕಟ್ಟೆ ಶಾಂತಿನಗರ ನಿವಾಸಿ ಉದಯ ಕುಮಾರ್ (35), ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮ ತಿಪ್ಪೆಮಜಲ್ ನಿವಾಸಿ ಸಿ.ಕೆ. ಸ್ಮಿಕಿಲ್ (20) ಬಂಧಿತರು.

Fuel theft racketಮಹಾನ್ ಕಳ್ಳರ ಕಣ್ಣ ಐಡಿಯಾ:

ಐಓಸಿಎಲ್ ನಿಂದ ಟ್ಯಾಂಕರ್ ಗೆ ಪೆಟ್ರೋಲ್ ಹಾಗೂ ಡೀಸೆಲ್ ನ್ನು ಭರ್ತಿ ಮಾಡಿದ ನಂತರ ಐಓಸಿಎಲ್ ನವರು ಟ್ಯಾಂಕ್ ನ ಮೇಲ್ಭಾಗ ಮತ್ತು ಟ್ಯಾಂಕ್ ನಿಂದ ಡೀಸೆಲ್ ನ್ನು ಹೊರಗೆ ಬಿಡುವ ವಾಲ್ವ್ ಇರುವ ಸ್ಥಳದಲ್ಲಿನ ಬಾಕ್ಸ್ ಗೂ ಬೀಗ ಹಾಕುತ್ತಾರೆ. ಬೀಗದ ಕೀಲಿಕೈ ಐಓಸಿಎಲ್ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಪೆಟ್ರೋಲ್ ಬಂಕ್ ನ ಮಾಲೀಕರ ಬಳಿ ಇರುತ್ತದೆ. ಮಾರ್ಗ ಮಧ್ಯದಲ್ಲಿ ಚಾಲಕರು ಅಥವಾ ಇತರ ಯಾರೂ ಕಳ್ಳತನ ಮಾಡಬಾರದೆಂಬ ಹಿನ್ನೆಲೆಯಲ್ಲಿ ಹೀಗೆ ಮಾಡಲಾಗುತ್ತದೆ. ಆದರೆ ಆರೋಪಿಗಳು ಪೆಟ್ರೋಲ್ ಟ್ಯಾಂಕ್ ನ ಒಳಭಾಗದಲ್ಲಿ ಇನ್ನೊಂದು ಟ್ಯಾಂಕನ್ನು ರಹಸ್ಯವಾಗಿ ರಚಿಸಿಕೊಂಡಿದ್ದು, ಪೆಟ್ರೋಲ್ ಬಂಕ್ ನವರು ಅಳತೆ ಮಾಡುವ ಸಂದರ್ಭದಲ್ಲಿ ಸರಿಯಾದ ಅಳತೆಯನ್ನೇ ತೋರಿಸುವಂತೆ ವ್ಯವಸ್ಥೆ ರೂಪಿಸಿದ್ದಾರೆ.

ಟ್ಯಾಂಕನಿಂದ ಪೆಟ್ರೋಲ್ ಬಂಕ್ ಗೆ ಅನ್ಲೋಡ್ ಮಾಡುವಾಗ ರಹಸ್ಯ ಟ್ಯಾಂಕ್ ನಲ್ಲಿ ಸುಮಾರು 100 ಲೀ. ಇಂಧನ ಅಲ್ಲಿಯೇ ಉಳಿದುಕೊಳ್ಳುವಂತೆ ವ್ಯವಸ್ಥೆ ಮಾಡಿ ಬಳಿಕ ಟ್ಯಾಂಕ್ ನ ಕೆಳಭಾಗದಲ್ಲಿ ರಹಸ್ಯವಾಗಿ ರಚಿಸಿರುವ ಲಿವರ್ ನ್ನು ಒತ್ತಿ ಅದರ ಮೂಲಕ ಇಂಧನವನ್ನು ಕಳವು ಮಾಡುತ್ತಿದ್ದರು. ಐಓಸಿಎಲ್ ನವರು ಹಾಕಿರುವ ಬೀಗ ನೋಡಲು ಹಾಗೆಯೇ ಇದ್ದು, ಆದರೆ ಎರಡು ಸಣ್ಣ ಬೋಲ್ಟ್ ಗಳ ಸಹಾಯದಿಂದ ಚಿಲಕವನ್ನು ಪ್ರತ್ಯೇಕಿಸುವ ವ್ಯವಸ್ಥೆಯನ್ನು ಕೂಡ ಆರೋಪಿಗಳು ಮಾಡಿಕೊಂಡಿದ್ದರು. ಪ್ರಮುಖ ಆರೋಪಿ ಅಶೋಕ್ ಎಂಬಾತ 7 ಟ್ಯಾಂಕರ್ ಗಳ ಮಾಲೀಕನಾಗಿದ್ದು, ಈಗಾಗಲೇ ಆತನ 5 ಟ್ಯಾಂಕರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ಟ್ಯಾಂಕರ್ ಗ್ಯಾರೇಜ್ನಲ್ಲಿದ್ದು, ಇನ್ನೊಂದು ಟ್ಯಾಂಕರ್ ನ್ನು ಚಾಲಕ ಮಡಿಕೇರಿ ಬಳಿ ಇರಿಸಿ ಪರಾರಿಯಾಗಿದ್ದು, ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಪೆಟ್ರೋಲ್ ಬಂಕ್ ಗಳಿಗೆ ತೆಗೆದುಕೊಂಡು ಹೋಗಲು ಸಿದ್ಧವಾಗಿದ್ದ 20,000 ಲೀಟರ್ ಡೀಸೆಲ್ ಮತ್ತು 4,000 ಲೀಟರ್ ಪೆಟ್ರೋಲ್, ಕಳ್ಳತನ ಮಾಡಿದ್ದ 105 ಲೀಟರ್ ಡೀಸೆಲ್ ಹಾಗೂ ಪೆಟ್ರೋಲ್ ನ್ನು ಕದಿಯಲು ಬಳಸುವ ಉಪಕರಣ, 7 ಮೊಬೈಲ್ ಫೋನ್, ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಕಳ್ಳತನ, ನಂಬಿಕೆದ್ರೋಹ, ವಂಚನೆ, ಲಂಚದ ಆಮಿಷ ಪ್ರಕರಣ ದಾಖಲಿಸಲಾಗಿದೆ.

ವರ್ಷಕ್ಕೆ ರೂ. 1.70 ಕೋಟಿ ಕಳವು:

ಏಳು ಟ್ಯಾಂಕರ್ ಗಳಲ್ಲಿ ಪ್ರತಿ ಟ್ಯಾಂಕರ್ ನಲ್ಲಿ ದಿನಕ್ಕೆ ಕನಿಷ್ಠ 100 ಲೀಟರ್ ನಂತೆ ಸುಮಾರು 700 ಲೀಟರ್ ವರೆಗೆ ಡೀಸೆಲ್ ಹಾಗೂ ಪೆಟ್ರೋಲ್ ನ್ನು ಕಳೆದ ಮೂರು ವರ್ಷಗಳಿಂದ ಇದೇ ರೀತಿ ಕಳವು ಮಾಡುತ್ತಿರುವುದಾಗಿ ಆರೋಪಿ ತಿಳಿಸಿದ್ದಾನೆ. ಒಂದು ಟ್ಯಾಂಕರ್ ನಲ್ಲಿ 100 ಲೀ.ನಂತೆ ಪ್ರತಿ ದಿನ ಸುಮಾರು 35 ಸಾವಿರ ಲೀ. ಇಂಧನ ಕಳವು ಮಾಡುವ ಮೂಲಕ ಪ್ರಮುಖ ಆರೋಪಿ ಅಶೋಕ್ ವಾರ್ಷಿಕ 1.70 ಕೋಟಿ ರೂ. ಮೌಲ್ಯದ ಇಂಧನ ಕಳವು ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

ಕೆಎಸ್ಆರ್ ಟಿಸಿಗೆ ಅತಿ ಹೆಚ್ಚು ವಂಚನೆ:

ಐಒಸಿಎಲ್ ನಿಂದ ಕೆಎಸ್ಆರ್ ಟಿಸಿ ಟಿಪೋಗೆ ಸಾಗಿಸಲಾಗುತ್ತಿದ್ದ ಡೀಸೆಲ್ ನ್ನು ಆರೋಪಿಗಳು ಅತಿ ಹೆಚ್ಚಾಗಿ ಕಳವು ಮಾಡಿದ್ದಾರೆ ಎಂಬುದು ತಿಳಿದುಬಂದಿದೆ. ಕಾರ್ಯಾಚರಣೆಯಲ್ಲಿ ಹಿಡಿಯಲಾದ ಒಂದು ಟ್ಯಾಂಕರ್ ಕೂಡ ಕೆಎಸ್ಆರ್ ಟಿಸಿ ಡಿಪೋದಲ್ಲಿ ಡೀಸೆಲ್ ಅನ್ಲೋಡ್ ಮಾಡಿ ವಾಪಸಾಗುತ್ತಿತ್ತು ಎಂದು ಪೊಲೀಸ್ ಮೂಲಗಳು ಹೇಳುತ್ತದೆ. ಇಂಧನ ಸಾಗಿಸುವ ಶೇ. 60ರಷ್ಟು ಟ್ಯಾಂಕರ್ ಗಳಲ್ಲಿ ಕಳವು ಮಾಡುವ ಹಿನ್ನೆಲೆಯಲ್ಲಿ ರಹಸ್ಯ ಟ್ಯಾಂಕರ್ ರಚಿಸಿರುವುದು ಎಂಬುದು ತಿಳಿದುಬಂದಿದ್ದು, ಬೆಂಗಳೂರು ಹಾಗೂ ಚೆನ್ನೈಯಲ್ಲಿ ರಹಸ್ಯ ಟ್ಯಾಂಕರ್ ವ್ಯವಸ್ಥೆ ರೂಪಿಸಿಕೊಡುವ ಜಾಲವಿದೆ ಎಂಬುದಾಗಿ ಪೊಲೀಸ್ ಮೂಲಗಳು ಮಾಹಿತಿಯನ್ನು ಹೊರ ಇಡುತ್ತದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English