ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ನವರಾತ್ರಿ ಅಥವಾ `ದಸರಾ’ ಹಬ್ಬಕ್ಕೆ ತನ್ನದೇ ಆದ ಮಹತ್ವ, ಪೌರಾಣಿಕ ಹಿನ್ನೆಲೆ ಇದೆ. ಭಾರತಾದ್ಯಂತ `ದಸರಾ’ ಹಬ್ಬವನ್ನು ತುಂಬಾ ಉತ್ಸಾಹದಿಂದ ವಿಜೃಂಭಣೆಯಿಂದ ಆಚರಿಸುತ್ತಾರೆ. ಪಶ್ಚಿಮ ಬಂಗಾಳದಲ್ಲಿ 9 ದಿನಗಳಲ್ಲಿ ದುರ್ಗಾದೇವಿಯ ವಿಶಾಲವಾದ ಸುಂದರ ಮೂರ್ತಿಗಳನ್ನು ದೊಡ್ಡ ಪ್ರಮಾಣದಲ್ಲಿ, ಅಲಂಕೃತ ಮಂಟಪಗಳಲ್ಲಿ ಕೂರಿಸಿ ಪೂಜಿಸಲಾಗುತ್ತದೆ. ವಿಜಯದಶಮಿಯ ದಿನ ಭವ್ಯ ಮೆರವಣಿಗೆಯ ಮೂಲಕ ವಿಸರ್ಜಿಸಲಾಗುತ್ತದೆ. ಇದು ಬಂಗಾಳಿಯವರಿಗೆ ನಾಡಹಬ್ಬವಾಗಿದೆ, ಪಂಜಾಬ್ನಲ್ಲಿ ಭಕ್ತರು 7 ದಿನಗಳ ಕಾಲ ಉಪವಾಸ ಮಾಡಿದ ನಂತರ ಎಂಟನೇ ದಿನ ಪುಟ್ಟ್ ಬಾಲಕಿಯರನ್ನು ದೇವಿಯರ ಪ್ರತಿರೂಪವೆಂದು ಭಾವಿಸಿ ಅವರಿಗೆ ಪೂರಿ, ಹಲ್ವಾ ಮತ್ತು ಕಡಲೆಯನ್ನು ನೈವೇದ್ಯ ಇಡುತ್ತಾರೆ. ಹೊಸ ಕೆಂಪು ಬಣ್ಣದ ‘ಚುನ್ನಿ’ಗಳನ್ನು ಕಾಣಿಕೆಯಾಗಿ ನೀಡುತ್ತಾರೆ. ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ ನವರಾತ್ರಿಯ ಸಮಯದಲ್ಲಿ ದಾಂಡಿಯ, ಗರ್ಬಾವೆಂಬ ಲೋಕನೃತ್ಯವು ಪ್ರಸಿದ್ಧವಾಗಿದೆ.
‘ಧೋತಿ-ಕುರ್ತಾ ಮತ್ತು ಚನಿಯಾ-ಚೋಲಿ’ ವಿಶೇಷ ಉಡುಪುಗಳನ್ನು ಧರಿಸಿ, ಡೋಲಿನ ತಾಳದಲ್ಲಿ ‘ಗಾರ್ಬಾ'(ಅಶಾಂತಿ ಅಂಧಕಾರ ದೂರಮಾಡಿ ಜ್ಞಾನದ ಬೆಳಕು ನೀಡುವ) ಎಂಬ ಸಣ್ಣ ದೀಪದ ಸುತ್ತಲು ಮಾಡುವ ಈ ನೃತ್ಯವು ನೋಡಲು ಅತಿ ಸುಂದರವಾಗಿರುತ್ತದೆ. ಕರ್ನಾಟಕ, ಆಂಧ್ರ ಮತ್ತು ತಮಿಳುನಾಡಿನಲ್ಲಿ ದಸರಾ ಹಬ್ಬವನ್ನು ಪಾರಂಪರಿಕ ರೀತಿಯಲ್ಲಿ ಆಚರಿಸಲಾಗುತ್ತದೆ. ಸುಮಂಗಳೆಯರು ಮನೆಯಲ್ಲಿ ಗೊಂಬೆಗಳನ್ನು ಅಲಂಕರಿಸಿ ಇಟ್ಟು ಪೂಜಿಸುತ್ತಾರೆ. ರಂಗೋಲಿ, ಪುಷ್ಪಗಳ ಅಲಂಕಾರವು ವಿಶೇಷವಾಗಿರುತ್ತದೆ. ಸುಮಂಗಳೆಯರನ್ನು ಕರೆದು ಅವರಿಗೆ ಅರಿಶಿಣ -ಕುಂಕುಮ ನೀಡಿ ಪ್ರಸಾದ ಕೊಡುತ್ತಾರೆ. ಮೈಸೂರಿನಲ್ಲಿ ಬಹಳ ವೈವಿಧ್ಯತೆಯಿಂದ ಈ ಹಬ್ಬವನ್ನು ಭವ್ಯವಾಗಿ ಆಚರಿಸುವ ಪರಂಪರೆ ಇದೆ. ಜಂಬೂಸವಾರಿ, ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ 10 ದಿನಗಳ ಕಾಲ ನಡೆಯುವ ದಸರಾ ಮಹೋತ್ಸವವನ್ನು ನೋಡಲು ಅನೇಕ ದೇಶಗಳಿಂದ ಜನರು ಧಾವಿಸುತ್ತಾರೆ. ಆದರೆ ಈ ವರ್ಷ ಕರೋನದ ಕರಿ ನೆರಳಿನಲ್ಲಿ ಹಬ್ಬವು ಸಾಧಾರಣ ರೀತಿಯಲ್ಲಿ ಆಚರಿಸಲಾಗುತ್ತಿದೆ.
ಈ ಹಬ್ಬವು ಆಶ್ವೀಜ ಮಾಸದ ಬಹುಳ ಪಾಡ್ಯಮಿಯಿಂದ ಪ್ರಾರಂಭವಾಗಿ ವಿಜಯದಶಮಿಯಂದು ಕೊನೆಗೊಳ್ಳುತ್ತದೆ. ಈ ಮಧ್ಯೆ ಬರುವ ಸಪ್ತಮಿ, ಅಷ್ಟಮಿ, ನವಮಿ ಹಾಗೂ ದಶಮಿಗಳಲ್ಲಿ ವಿಶೇಷ ಪೂಜೆಯೂ ನಡೆಯುತ್ತದೆ. ದುರ್ಗಾಷ್ಟಮಿಗೆ ಶಕ್ತಿಪೂಜೆ, ಮಹಾನವಮಿಯಂದು ಸರಸ್ವತಿ ಪೂಜೆ, ಆಯುಧ ಪೂಜೆ ವಿಜಯದಶಮಿಯಂದು `ಬನ್ನಿ’ ಪೂಜೆಯನ್ನು ಮಾಡುತ್ತಾರೆ. ನವರಾತ್ರಿಯ ಹಿಂದಿನ ದಿನ ಮಹಾಲಯ ಅಮಾವಾಸ್ಯೆ ಬರುತ್ತದೆ. ಅಮಾವಾಸ್ಯೆ ಎಂದರೆ ಕತ್ತಲು, ಈ ಕತ್ತಲಿನಲ್ಲೂ ಮಹಾ+ಲಯ, ಮಹಾ+ವಿನಾಶ ಅಂದರೆ ಮಹಾನ್ ಪರಿವರ್ತನೆ ಆಗುವುದು. ಆ ದಿನ, ಗತಿಸಿದ ಸರ್ವ ಪಿತೃಗಳಿಗೆ ತರ್ಪಣ ಹಾಗೂ ಭಕ್ಷ, ಭೋಜನಾದಿಗಳನ್ನು ಮಾಡಿ ಅರ್ಪಿಸಲಾಗುತ್ತದೆ. ಆದ್ದರಿಂದ ಈ ದಿನಕ್ಕೆ ಸರ್ವಪಿತೃ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ವಿಜಯದಶಮಿಯ ದಿನದಂದು ಶಮಿಪೂಜೆಯೆಂದು ಬನ್ನಿಮರಕ್ಕೆ ಪೂಜಿಸುವರು. `ಶಮಿ’ ಎಂದರೆ ಶಾಂತಿ, ಸಮಾಧಾನವೆಂದರ್ಥ. ಆ ದಿನ ಬನ್ನಿ ಮರಕ್ಕೆ ಪೂಜಿಸುವುದರರೊಂದಿಗೆ ಬನ್ನಿಮರದ ಎಲೆಗಳನ್ನು ಪರಸ್ಪರ ಕೊಟ್ಟು ಶುಭ ಹಾರೈಸುತ್ತಾರೆ. `ಬನ್ನಿ’ ಎಂಬ ಶಬ್ದವೇ ಸ್ವಾಗತ ಶಬ್ದಾರ್ಥವಾಗಿರುವುದರಿಂದ ತಮ್ಮ ಆಪ್ತಸ್ನೇಹಿತರಿಗೆಲ್ಲ ನಿಮಂತ್ರಣ ನೀಡಿ ಸಿಹಿ ಹಂಚಲಾಗುತ್ತದೆ. ಹೊಲಗಳಲ್ಲಿ ಬೆಳೆದ ಜೋಳ, ಗೋಧಿಯ ಹುಲ್ಲನ್ನು ಅಥರ್ಾತ್ ಶಾಂತಿಯ ಸಂಕೇತವಾದ ಹಸಿರನ್ನು ಪೂಜಿಸುತ್ತಾರೆ. ವಿಜಯದಶಮಿ ಶಾಂತಿ, ಸಮಾಧಾನ ನೀಡುವ ಹಬ್ಬವಾಗಿದೆ.
ಉತ್ತರ ಭಾರತದಲ್ಲಿ ದಸರಾ ಹಬ್ಬದ ಪ್ರಯುಕ್ತ ‘ರಾಮಲೀಲಾ’ ಎಂಬ ನಾಟಕ ಹಾಗೂ ರಾವಣ ವಿಭೀಷಣ ಹಾಗೂ ಕುಂಭಕರ್ಣನ ದೊಡ್ಡ ಪ್ರತಿಕೃತಿಗಳನ್ನು ಮಾಡಿ ಸುಡುವ ಪದ್ಧತಿಯಿದೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿಯೂ ಇದನ್ನು ಕಾಣಬಹುದು. ದಶಾನನ ರಾವಣ ಸಂಹಾರದ ಪ್ರತೀಕವಾಗಿ `ವಿಜಯ ದಶಮಿ’ ಆಚರಿಸುತ್ತಾರೆ. ರಾವಣ ನಮ್ಮ ಶತ್ರು, ಆದರಿಂದಲೇ ಅವನ ಸಂಹಾರ ಮಾಡುತ್ತಾರೆ. ರಾವಣ ಯಾರು? ಅವನನ್ನು ಏಕೆ ಪ್ರತಿವರ್ಷ ಸುಟ್ಟು ಹಾಕುತ್ತಾರೆ? ರಾವಣ ಲಂಕಾಧಿಪತಿ, ಅವನು ಬಹಳ ಶಕ್ತಿಶಾಲಿ, ಜಲ, ವಾಯು, ಅಗ್ನಿ, ಆಕಾಶ ಮತ್ತು ಕಾಲಗಳು ಅವನ ಬಂಧನದಲ್ಲಿ ಇದ್ದವು ಎಂದು ಜನಸಾಮಾನ್ಯರು ಹೇಳುತ್ತಾರೆ. ರಾವಣ ಎಂದರೆ ರಾಕ್ಷಸಿ ಪ್ರವೃತ್ತಿಯ ಸಂಕೇತ. ರಾವಣನ ಹತ್ತು ತಲೆಗಳು ಸ್ತ್ರೀ ಮತ್ತು ಪುರುಷರಲ್ಲಿರುವ ಪಂಚವಿಕಾರಗಳಾದ ಕಾಮ, ಕ್ರೋಧ, ಮೋಹ, ಲೋಭ, ಅಹಂಕಾರಗಳು. ನಮ್ಮಲ್ಲಿರುವ ಈ ಪಂಚ ವಿಕಾರಗಳನ್ನು ಸುಟ್ಟು ಹಾಕಿದರೆ ನಿಜವಾದ ದಶಹರಾ ಅಂದರೆ ರಾವಣನ ಸಂಹಾರವಾಗುವುದು. ನವರಾತ್ರಿಗೆ ವಿಶೇಷವಾಗಿ ದೇವಿಯರ ಆರಾಧನೆ ಮತ್ತು ಪೂಜೆಯು ನಡೆಯುತ್ತದೆ. ದುರ್ಗಾದೇವಿಯ 8 ಭುಜಗಳು ಮುಖ್ಯ 8 ಶಕ್ತಿಯ ಪ್ರತೀಕವಾಗಿವೆ. ಆ ಶಕ್ತಿಗಳಾಗಿವೆ – ಸಹನಸಕ್ತಿ, ಅಳವಡಿಸಿಕೊಳ್ಳುವ ಶಕ್ತಿ, ಪರೀಕ್ಷಿಸಿಕೊಳ್ಳುವ ಶಕ್ತಿ, ನಿರ್ಣಯ ಶಕ್ತಿ, ಧೈರ್ಯ ಶಕ್ತಿ, ಸಹಯೋಗ ಶಕ್ತಿ, ಸಂಕುಚಿತಗೊಳಿಸುವ ಶಕ್ತಿ ಮತ್ತು ಸಂಕ್ಷಿಪ್ತಗೊಳಿಸುವ ಶಕ್ತಿಗಳು. ನಮ್ಮ ಜೀವನದಲ್ಲಿ ದೈವಿ ಗುಣಗಳಾದ ಶಾಂತಿ, ಪ್ರೀತಿ ಸ್ನೇಹ, ಮಧುರತೆ, ಆನಂದ ಮುಂತಾದಗಳನ್ನು ಜೀವನದಲ್ಲಿ ಅಳವಡಿಸಿಕೊಂಡೆರೆ ನಾವೂ ದೇವಮಾನವರಾಗಬಹುದು. ಸ್ವಯಂ ನಿರಾಕಾರ ಪರಮಪಿತ ಪರಮಾತ್ಮನು ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಾಜಯೋಗದ ಶಿಕ್ಷಣದಿಂದ ನಮ್ಮನ್ನು ಮಾನವರಿಂದ ದೇವ ಮಾನವ ಮಾಡುತ್ತಿದ್ದಾನೆ. ಪರಮಾತ್ಮನೇ ರಾಮರಾಜ್ಯದ ಕನಸನ್ನು ನನಸು ಮಾಡುತ್ತಾನೆ.
ಇನ್ನೊಂದು ಅರ್ಥದಲ್ಲಿ ನವ ಎಂದರೆ ಹೊಸತನ ಎಂದರ್ಥ. ಜೀವನದಲ್ಲಿಲ ನವೀನತೆ, ಉತ್ಸಾಹ, ಧೈರ್ಯವಿರಬೇಕು. ನಮ್ಮ ಜೀವನ ಎಲ್ಲರಿಗೂ ಪ್ರೇರಣೆ ನೀಡುವಂತಿರಬೇಕು. ರಾತ್ರಿ ಎಂದರೆ ಇಲ್ಲಿ ಅಜ್ಞಾನದ ರಾತ್ರಿ. ವರ್ತಮಾನ ಸಮಯದಲ್ಲಿ ನಮ್ಮೆಲ್ಲರ ಆತ್ಮದ ತಂದೆಯಾಗಿರುವ ನಿರಾಕಾರ ಜ್ಯೋತಿರ್ಬಂದು ಜ್ಞಾನಸೂರ್ಯ ಶಿವಪರಮಾತ್ಮನು ಈ ಧರೆಗೆ ಅವತರಿಸಿ ಅಜ್ಞಾನದ ಅಂಧಕಾರವನ್ನು ಭೂಮಿಯಿಂದ ಸಮಾಪ್ತಿಗೊಳಿಸುವ ಶ್ರೇಷ್ಠ ಕರ್ತವ್ಯವನ್ನು ಮಾಡುತ್ತಿದ್ದಾನೆ. ಸೂರ್ಯೋದಯವಾದ ನಂತರ ಅಂಧಕಾರವು ಸಮಾಪ್ತಿಯಾಗುವಂತೆಯೇ ಜ್ಞಾನ ಪ್ರಕಾಶದಿಂದ ನಮ್ಮ ಮನಸ್ಸಿನ ಅಜ್ಞಾನದ ಕತ್ತಲೆಯು ದೂರವಾಗುತ್ತದೆ.
ನವರಾತ್ರಿಯು ವಿಶೇಷವಾಗಿ ಪವಿತ್ರತೆಯ ಮತ್ತು ಸ್ನೇಹದ ಹಬ್ಬ. ನಮ್ಮ ಜೀವನದಲ್ಲಿ ಮಾತೃಶಕ್ತಿಯ ಮಹತ್ವ ಬಹಳ ಇದೆ. ಮಮತೆ, ಸಮಾನತೆ ಮತ್ತು ಕ್ಷಮೆ ಇರುವವಳೇ ಮಾತೆ. ಭಕ್ತನು ತಪ್ಪು ಮಾಡಿದರೆ ದೇವಿ ಹತ್ತಿರ ಹೋಗಿ ಕ್ಷಮೆ ಕೇಳುತ್ತಾಣೆ. ಇದೇ ರೀತಿ ನಾವೂ ಸಹ ದೈವಿಶಕ್ತಿಗಳನ್ನು ಜೀವನದಲ್ಲಿ ಅವಳವಡಿಸಿಕೊಂಡು ಸಮಾನತೆ, ಮಮತೆ ಮತ್ತು ಕ್ಷಮಾ ಭಾವನೆಯನ್ನು ಬೆಳೆಸಿಕೊಳ್ಳಬೇಕಾಗಿದೆ. ದುಗರ್ಾ ಶಕ್ತಿ ಸ್ವರೂಪಳಾಗಿದ್ದಾಳೆ. ನಮ್ಮ ಜೀವನದಲ್ಲಿ ದುರ್ಗುಣಗಳನ್ನು ಸಮಾಪ್ತಿ ಮಾಡುವುದರ ಪ್ರತೀಕವೇ ದುರ್ಗೆ. ಶ್ರೀಲಕ್ಷ್ಮಿಯು ಜ್ಞಾನಧನ ಪ್ರತೀಕವಾಗಿದ್ದಾಳೆ. ಉಮಾದೇವಿಯು ಉತ್ಸಾಹ ಮತ್ತು ಉಲ್ಲಾಸದ ಪ್ರತೀಕವಾಗಿದ್ದಾಳೆ. ಗಾಯತ್ರಿ ದೇವಿಯು ಖುಷಿಯ ಪ್ರತೀಕವಾಗಿದ್ದಾಳೆ. ಸಂತೋಷಿ ಮಾತೆ ಸಂತುಷ್ಟತೆಯ ಪ್ರತೀಕವಾಗಿದ್ದಾಳೆ. ಕಾಳಿಯು ದುರ್ಗುಣಗಳೆಂಬ ರಾಕ್ಷಸರನ್ನು ಹೊಡೆದೊಡಿಸಲು ತಾಳುವ ವಿಕರಾಳ ಸ್ವರೂಪವಾಗಿದೆ.
ನಾವು ದೇವಿಯರನ್ನು ಆರಾಧನೆ ಮಾಡುವುದರ ಜೊತೆಗೆ ಅವರ ಗುಣ-ವಿಶೇಷತೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇವಿಯರ ಕೈಗಳಲ್ಲಿರುವ ಆಯುಧಗಳು ವಿಕಾರಗಳ ಮೇಲೆ ಹೋರಾಡುವ ಜ್ಞಾನಯೋಗದ ಶಕ್ತಿಗಳ ಪ್ರತೀಕವಾಗಿವೆ. ಅನೇಕ ರೀತಿಯ ಪರೀಕ್ಷೆಗಳನ್ನು ನಾವು ಗೆಲ್ಲಬೇಕಾಗಿದೆ. ನವರಾತ್ರಿಯ ಸಂದರ್ಭದಲ್ಲಿ ಅಖಂಡ ದೀಪವನ್ನು ಬೆಳಗಿಸಲಾಗುತ್ತದೆ. ಇದು ನಿರಂತರ ಆತ್ಮಜ್ಯೋತಿಯನ್ನು ಜ್ಞಾನಯೋಗದ ಮೂಲಕ ಬೆಳಗಿಸಿಕೊಳ್ಳುವ ಪ್ರತೀಕವಾಗಿದೆ. ಉಪವಾಸವೆಂದರೆ ನಮ್ಮ ಮನಸ್ಸು ಮತ್ತು ಬುದ್ಧಿಯನ್ನು ಭಗವಂತನ ಸ್ಮರಣೆಯಲ್ಲಿ ಕಳೆಯುವುದಾಗಿದೆ. ಇಲ್ಲಿ ಸಾತ್ವಿಕ ಶುದ್ಧ ಆಹಾರವನ್ನು ಸೇವಿಸಬೇಕಾಗುತ್ತದೆ.
ಹಾಗಾದರೆ ಬನ್ನಿ, ನಾವು ಈ ದಸರಾ ಹಬ್ಬದ ಆಧ್ಯಾತ್ಮಿಕ ಹಿನ್ನಲೆಯನ್ನು ತಿಳಿದು, ವಿಶ್ವಪಿತನಾದ ನಿರಾಕಾರ ಭಗವಂತನ ಮಕ್ಕಳು ಎಂದು ಅರಿತು ಪರಸ್ಪರದಲ್ಲಿ ಸ್ನೇಹ ಆತ್ಮೀಯತೆಯನ್ನು ಬೆಳೆಸಿಕೊಳ್ಳೋಣ, ವಿಶ್ವಶಾಂತಿಯ ಉಗಮಕ್ಕೆ ನಾಂದಿಯನ್ನು ಹಾಡಿ ಉತ್ಸಾಹದಿಂದ ಆಚರಿಸೋಣ.
ವಿಶೇಷ ಲೇಖನ : ವಿಶ್ವಾಸ ಸೋಹೋನಿ. ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್.
Click this button or press Ctrl+G to toggle between Kannada and English