ಮಂಗಳೂರು :ಭಾನುವಾರ ರಾತ್ರಿ ನಗರದ ಲೋವರ್ ಬೆಂದೂರ್‌ನ ಮಂಜುಶ್ರೀ ಜುವೆಲ್ಲರ್ಸ್‌ಗೆ ನುಗ್ಗಿದ ಕಳ್ಳರು ಸುಮಾರು 7.3 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದಾರೆ. ಜುವೆಲ್ಲರಿ ಹಿಂಬದಿ ಒಂದು ಕಿರಿದಾದ ದಾರಿ ಇದ್ದು ಈ ದಾರಿಯಿಂದ ಬಂದ ಕಳ್ಳರು ಗೋಡೆಯನ್ನು ಕೊರೆದು ಒಳನುಗ್ಗಿದ್ದಾರೆ. ಅಂಗಡಿ ಮಾಲೀಕರಾದ ಮಂಜುನಾಥ ಶೇಟ್ ಭಾನುವಾರ ಅಂಗಡಿ ಬಾಗಿಲು ಹಾಕಿ ಮನೆಗೆ ತೆರಳಿದ್ದರು. ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಎಂದಿನಂತೆ ಅಂಗಡಿ ಬಾಗಿಲು ತೆರೆದು ನೋಡಿದಾಗ ಒಳಗಡೆ ಗೋಡೆಗೆ ಕನ್ನ ಹಾಕಿ ಆಭರಣ ಕದ್ದಿರುವುದು ಬೆಳಕಿಗೆ ಬಂದಿದೆ.
ಸುಮಾರು 9.610 ಕೆಜಿ ಬೆಳ್ಳಿಯ ಆಭರಣಗಳು ಹಾಗೂ 21 ಗ್ರಾಂ ಚಿನ್ನಾಭರಣ ಹಾಗೂ 18 ಸಾವಿರ ರೂಪಾಯಿ ನಗದನ್ನು ಕಳವು ಗೈಯಲಾಗಿದೆ ಎಂದು ಮಾಲೀಕ ಮಂಜುನಾಥ್ ಶೇಟ್ ಕದ್ರಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 2ರಿಂದ 3 ಮಂದಿಯ ಕಳ್ಳರ ತಂಡ ಜುವೆಲ್ಲರಿ ಗೋಡೆಗೆ ಮೆಶಿನ್ ಅಥವಾ ಕಬ್ಬಿಣದ ಸಲಾಖೆ ಬಳಸಿ ಕನ್ನ ಕೊರೆದಿದ್ದಾರೆ.ಜುವೆಲ್ಲರಿಯಲ್ಲಿ ಭದ್ರತೆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ತಿಂಗಳ ಹಿಂದೆಯಷ್ಟೇ ಕದ್ರಿ ಠಾಣೆ ಪೊಲೀಸರು ನೋಟಿಸ್ ನೀಡಿದ್ದರು. ಆ ಬಳಿಕವೂ ಯಾವುದೇ ಮೆನ್ನೆಚ್ಚರಿಕೆ ಕ್ರಮಗಳನ್ನು ಮಾಲೀಕರು ಕೈಗೊಳ್ಳಲಿಲ್ಲ. ಮಳಿಗೆಯಲ್ಲಿ ಸಿಸಿ ಕ್ಯಾಮರಾ ಕೂಡ ಅಳವಡಿಸಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಕಳ್ಳರ ಸುಳಿವನ್ನು ಪತ್ತೆಹಚ್ಚಲು ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದೆ.
ಸ್ಥಳಕ್ಕೆ ತೆರಳಿದ ಕದ್ರಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು ಅಂಗಡಿಯ ಬಗ್ಗೆ ಸರಿಯಾದ ಅರಿವು ಇರುವವರೇ ಈ ಕೆಲಸ ಮಾಡಿರಬಹುದು ಎಂಬ ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸುತ್ತಿದ್ದಾರೆ.
Click this button or press Ctrl+G to toggle between Kannada and English