ಮಂಗಳೂರು : ರಾಜ್ಯದ ಒಂದು ರಾಜ್ಯಸಭಾ ಸ್ಥಾನಕ್ಕೆ ಡಿಸೆಂಬರ್ 1 ರಂದು ಉಪ ಚುನಾವಣೆ ನಡೆಯಲಿದ್ದು, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಮಂಗಳೂರಿನಲ್ಲಿ ನಡೆದ ಬಿಜೆಪಿ ವಿಶೇಷ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿದೆ. ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಸಭೆ ಅಭ್ಯರ್ಥಿ ಆಯ್ಕೆ ಕುರಿತು ವಿಸ್ತಾರವಾದ ಚರ್ಚೆ ನಡೆಸಲಾಗಿದೆ ಎನ್ನಲಾಗುತ್ತಿದೆ.
ಇತ್ತೀಚೆಗೆ ನಟಿ ಖುಷ್ಬೂ ಬಿಜೆಪಿ ಸೇರ್ಪಡೆ ಇದಕ್ಕೆ ನಿದರ್ಶನವಾಗಿದ್ದು, ಸೂಪರ್ ಸ್ಟಾರ್ ರಜನಿಕಾಂತ್ ಗೂ ಬಿಜೆಪಿ ಗಾಳ ಹಾಕಿರುವುದು ಗುಟ್ಟಾಗೇನು ಉಳಿದಿಲ್ಲ. ಈ ನಡುವೆ ಈ ಇಬ್ಬರಲ್ಲಿ ಒಬ್ಬರನ್ನು ಕರ್ನಾಟಕದಿಂದ ರಾಜ್ಯಸಭೆ ಆಯ್ಕೆ ಮಾಡಲಾಗುತ್ತದೆ ಎನ್ನುವ ವದಂತಿಗಳು ಹರಿದಾಡುತ್ತಿವೆ.
ತಳ ಸಮುದಾಯದ ಸಾಮಾನ್ಯ ಕಾರ್ಯಕರ್ತ ಅಶೋಕ್ ಗಸ್ತಿ ಅವರ ಸೇವೆಯನ್ನು ಗುರುತಿಸಿ ಅವರಿಗೆ ಅಚ್ಚರಿ ರೀತಿಯಲ್ಲಿ ರಾಜ್ಯಸಭೆಗೆ ಅವಕಾಶ ನೀಡಲಾಯಿತು. ಈಗಲೂ ಕೂಡ ಅದೇ ರೀತಿ ಸಾಮಾನ್ಯ ಕಾರ್ಯಕರ್ತರ ಸೇವೆ ಪರಿಗಣಿಸಬೇಕು ಎನ್ನುವ ಚರ್ಚೆ ರಾಜ್ಯ ಬಿಜೆಪಿ ನಾಯಕರಲ್ಲಿ ನಡೆಯುತ್ತಿದೆ.
ಈಗಾಗಲೇ ರಾಜ್ಯದಿಂದ ಹೊರರಾಜ್ಯದವರಿಗೆ ಅವಕಾಶ ಕೊಡುವ ಬಿಜೆಪಿಗೆ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಮರುಆಯ್ಕೆ ಬಯಸಿದ ವೇಳೆ ಕನ್ನಡದ ಪರ ನಿಂತಿಲ್ಲ ಎನ್ನುವ ಕಾರಣ ನೀಡಿ ವೆಂಕಯ್ಯ ಸಾಕಯ್ಯ ಅಭಿಯಾನ ನಡೆಸಲಾಗಿತ್ತು. ನಂತರ ಆಂಧ್ರಪ್ರದೇಶದವರೇ ಆದ ನಿರ್ಮಲಾ ಸೀತಾರಾಮನ್ ಅವರಿಗೆ ಅವಕಾಶ ನೀಡಲಾಗಿತ್ತು. ವೆಂಕಯ್ಯ ಬಳಿಕ ನಿರ್ಮಲಾ ಸೀತಾರಾಮನ್ ಬಗ್ಗೆಯೂ ಕನ್ನಡಿಗರಿಗೆ ಅಷ್ಟು ಒಲವು ಉಳಿದಿಲ್ಲ, ರಾಜ್ಯದಿಂದ ಆಯ್ಕೆಯಾಗಿ ರಾಜ್ಯದ ಪರ ನಿಲ್ಲುತ್ತಿಲ್ಲ ಎನ್ನುವ ಅಸಮಧಾನ ಆಗಾಗ ಕೇಳಿ ಬರುತ್ತಲೇ ಇದೆ. ಇದರ ನಡುವೆ ಅಶೋಕ್ ಗಸ್ತಿ ನಿಧನದಿಂದ ತೆರವಾದ ಸ್ಥಾನಕ್ಕೆ ಹೊರ ರಾಜ್ಯದ ಮುಖಂಡರನ್ನು ಆಯ್ಕೆ ಮಾಡಲು ಬಿಜೆಪಿ ಮುಂದಾದರೆ ಜನರಿಂದ ಮತ್ತೆ ತೀವ್ರ ವಿರೋಧ ಎದುರಿಸಬೇಕಾಗಲಿದೆ.
ಈ ಎಲ್ಲಾ ವಿಷಯಗಳನ್ನು ಗಮನದಲ್ಲಿರಿಸಿಕೊಂಡೇ ರಾಜ್ಯ ಬಿಜೆಪಿ ಅಭ್ಯರ್ಥಿ ಹೆಸರನ್ನು ಶಿಫಾರಸ್ಸು ಮಾಡಲಿದೆ ಮತ್ತು ಹೈಕಮಾಂಡ್ ಕೂಡ ಎಚ್ಚರಿಕೆಯಿಂದಲೇ ರಾಜ್ಯಸಭಾ ಅಭ್ಯರ್ಥಿ ಆಯ್ಕೆ ಮಾಡಲಿದೆ ಎಂದು ತಿಳಿದುಬಂದಿದೆ.
Click this button or press Ctrl+G to toggle between Kannada and English