ಮಂಗಳೂರು: ಯುಪಿಸಿಎಲ್ ಕಂಪೆನಿಯು ನಂದಿಕೂರಿನಿಂದ ಕೇರಳಕ್ಕೆ ಅಳವಡಿಸಲಿರುವ ವಿದ್ಯುತ್ ಪ್ರಸರಣ ತಂತಿ ಹಾದು ಹೋಗುವ ಪ್ರದೇಶಗಳ ಕುರಿತು ಸರಕಾರ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಭೂಮಿಯ ಮೇಲ್ಭಾಗದಲ್ಲಿ ತಂತಿ ಎಳೆಯುವ ಬದಲು ಭೂಗತ ಕೇಬಲ್ ಅಳವಡಿಸುವುದು ಸೂಕ್ತ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ನಂದಿಕೂರಿನಿಂದ ಮೂಡುಬಿದಿರೆ- ಬಂಟ್ವಾಳ-ವಿಟ್ಲ- ಕರೋ ಪಾಡಿ ಮೂಲಕ ಕಾಸರಗೋಡು ಭಾಗಕ್ಕೆ ವಿದ್ಯುತ್ ಲೈನ್ ಕೊಂಡೊಯ್ಯುವ ಬಗ್ಗೆ ಗೂಗಲ್ ಸರ್ವೇ ನಡೆದಿದೆ ಎಂಬ ಮಾಹಿತಿ ಇದೆ. ಆದರೆ ಬಂಟ್ವಾಳ ತಾಲೂಕಿನ ಯಾವ್ಯಾವ ಗ್ರಾಮಗಳಲ್ಲಿ ಹಾದು ಹೊಗುತ್ತದೆ ಎಂಬ ಯಾವುದೇ ಮಾಹಿತಿ ಗ್ರಾಮಸ್ಥರಿಗಿಲ್ಲ. ತಂತಿ ಹಾದು ಹೋಗುವ ಪ್ರದೇಶದಲ್ಲಿ 60 ಮೀ. (200 ಅಡಿ)ಅಗಲಕ್ಕೆ ಯಾವುದೇ ಕೃಷಿ ಮತ್ತಿತರ ಚಟುವಟಿಕೆಗಳನ್ನು ಕೈಗೊಳ್ಳುವಂತಿಲ್ಲ. ಇದರಿಂದ ಜನರಿಗೆ ಸಮಸ್ಯೆಯಾಗಲಿದೆ. ಸಮುದ್ರತೀರದಲ್ಲಿ ಅಳವಡಿಸುವುದರಿಂದ ಈ ಸಮಸ್ಯೆಯನ್ನು ತಪ್ಪಿಸಬಹುದು ಎಂದು ಸಲಹೆ ಮಾಡಿದರು.
ಎಲ್ ಆ್ಯಂಡ್ ಟಿ ಸಂಸ್ಥೆಯು ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದು, ಮೂಡುಬಿದಿರೆ ಸಮೀಪದ ತಾಕೊಡೆಯಲ್ಲಿ ಜಾಗ ಖರೀದಿಸಿ ಯಂತ್ರೋಪಕರಣ ಇತ್ಯಾದಿಗಳನ್ನು ತಂದಿರಿಸಿದೆ. ಆದರೆ ಯಾವುದೇ ಮಾಹಿತಿ ಇಲ್ಲದ ಜನರು ಭಯಗೊಂಡಿದ್ದಾರೆ. ಜನರನ್ನು ಕತ್ತಲಲ್ಲಿಟ್ಟು ಯೋಜನೆ ಯನ್ನು ಕಾರ್ಯಗತಗೊಳಿಸುವುದು ಸರಿಯಲ್ಲ. ಸೂಕ್ತ ಮಾಹಿತಿ ನೀಡಿ ಜನರಿಗೆ ತೊಂದರೆಯಾಗದಂತೆ ಕಾಮಗಾರಿ ನಿರ್ವಹಿಸಬೇಕು ಎಂದು ಹೇಳಿದರು.
Click this button or press Ctrl+G to toggle between Kannada and English