ಗೋಶಾಲೆಯಲ್ಲಿರೋ ಕರುಗಳನ್ನು ನೋಡಿದಾಗ ಕರುಳು ಕಿತ್ತು ಬರುತ್ತದೆ : ಮೊಯ್ದೀನ್ ಬಾವಾ

5:36 PM, Saturday, March 20th, 2021
Share
1 Star2 Stars3 Stars4 Stars5 Stars
(No Ratings Yet)
Loading...

Kapila Goshalaಮಂಗಳೂರು   :  ಕಪಿಲಾ ಗೋಶಾಲೆಯನ್ನು ಹಾಡಹಗಲೇ ಧ್ವಂಸ ಮಾಡಿದ್ದು ಖಂಡನೀಯ. ಗೋಶಾಲೆಯಲ್ಲಿರೋ ಕರುಗಳನ್ನು ನೋಡಿದಾಗ ಕರುಳು ಕಿತ್ತು ಬರುತ್ತದೆ. ನೆಲಸಮಗೊಂಡ ಗೋಶಾಲೆಯ ಮಾಲೀಕನಿಗೆ ನಾನು ವೈಯಕ್ತಿಕ ನೆಲೆಯಲ್ಲಿ ಒಂದು ಲಕ್ಷ ರೂಪಾಯಿ ಹಣವನ್ನು ಸಹಾಯಧನವಾಗಿ ನೀಡುತ್ತೇನೆ ಎಂದು  ಮಾಜಿ ಶಾಸಕ ಮೋಯ್ದಿನ್‌ ಬಾವಾ ಅವರು ಚೆಕ್ಕನ್ನು ಮಾಲೀಕ‌ ಪ್ರಕಾಶ್ ಶೆಟ್ಟಿಯವರಿಗೆ ಹಸ್ತಾಂತರಿಸಿದರು.

ಇವತ್ತು ಬೀಫ್ ರಫ್ತು ಮಾಡುವುದರಲ್ಲಿ ದೇಶ ನಂಬರ್ ವನ್ ಆಗಿರೋದಕ್ಕೆ ಬಿಜೆಪಿ ಕಾರಣ.  ಗೋವಿನ ಹೆಸರಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ ಈ ಆಡಳಿತವೇ ಕಪಿಲ ಗೋಶಾಲೆಯನ್ನು ಕೆಡವಿದ್ದು ಈಗ ಗೋವುಗಳು ಸಂಕಷ್ಟದಲ್ಲಿವೆ. ಗೋ ಶಾಲೆ ಕೆಡವಿದ್ದರಿಂದ ನಾವು ತುಂಬಾ ದುಃಖಿತರಾಗಿದ್ದೇವೆ ಎಂದು ಅವರು ಹೇಳಿದರು.

”ಗೋ ಶಾಲೆ ಕೆಡವಿ 20 ದಿನಗಳು ಕಳೆದಿದ್ದರೂ ಜಿಲ್ಲಾಡಳಿತ ಇನ್ನೂ ಯಾವುದೇ ವ್ಯವಸ್ಥೆ ಮಾಡಿಲ್ಲ. ತಾತ್ಕಾಲಿಕ ಗೋಶಾಲೆ ನಿರ್ಮಾಣಕ್ಕಾಗಿ ನಾನು ಕಪಿಲ ಗೋಶಾಲೆಗೆ ಒಂದು ಲಕ್ಷ ರೂ. ಹಸ್ತಾಂತರಿಸುತ್ತೇನೆ. ಕಪಿಲ ಗೋಶಾಲೆಗೆ ಸಹಾಯ ಮಾಡಲು ಸಹಕರಿಸಲು ನಾನು ಸದಾ ಸಿದ್ಧನಿದ್ದೇನೆ. ಈ ಗೋಶಾಲೆಗೆ 5 ಲಕ್ಷ ರೂ.ಗಳನ್ನು ನೀಡುವಂತೆ ನಾನು ಎಂಎಲ್‌ಸಿ ಅವರಲ್ಲಿಯೂ ವಿನಂತಿಸುತ್ತೇನೆ” ಎಂದು ಹೇಳಿದರು.

ಕಪಿಲ ಗೋಶಾಲೆ ಮಾಲೀಕ ಪ್ರಕಾಶ್ ಶೆಟ್ಟಿ ಮಾತನಾಡಿ, ”ಗೋ ಶಾಲೆ ಕೆಡವಿದ ನಂತರ 300 ಹಸುಗಳನ್ನು ರಾತ್ರೋರಾತ್ರಿ ಸ್ಥಳಾಂತರಿಸುವುದು ತುಂಬಾ ಕಷ್ಟವಾಗಿತ್ತು. ಆದರೂ ಸರ್ಕಾರದ ಯಾವುದೇ ಹಣವನ್ನು ತೆಗೆದುಕೊಳ್ಳದೆ ನಾವು ಗೋವುಗಳನ್ನು ಸ್ವತಂತ್ಯ್ರವಾಗಿ, ಎಲ್ಲಾ ಸೌಲಭ್ಯವನ್ನು ಒದಗಿಸಿ ನೋಡಿಕೊಂಡಿದ್ದೇವೆ. ಭವಿಷ್ಯದ ಪೀಳಿಗೆಗೆ ಈ ಅಪರೂಪದ ತಳಿಯನ್ನು ಸಂರಕ್ಷಿಸುವ ಸಲುವಾಗಿ ನಾವು 8 ವರ್ಷಗಳಿಂದ ಈ ಗೋಶಾಲೆಯ ಮೂಲಕ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಈ ಸರ್ಕಾರ ಗೋವಿಗೆ ಅನ್ಯಾಯ ಮಾಡಿದೆ. ಗೋವಿನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಈ ಗೋವುಗಳನ್ನೇ ತೀವ್ರ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ನನ್ನ ಬಳಿ ಗೋ ಶಾಲೆ ನಿರ್ಮಾಣಕ್ಕೆ ನನ್ನದೇ ಆದ 2 ಎಕರೆ ಜಮೀನು ಇದೆ. ಗೋ ಶಾಲೆ ನಿರ್ಮಾಣಕ್ಕೆ ಅನುಮೋದನೆ ನೀಡಲು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದೇವೆ. ಶಾಶ್ವತ ಗೋ ಶಾಲೆ ನಿರ್ಮಾಣಕ್ಕಾಗಿ ರಾಮ ಸೇನೆ ಮುಂದೆ ಬಂದಿದೆ” ಎಂದು ತಿಳಿಸಿದ್ದಾರೆ,

”ಗೋ ಪೂಜೆ ದಿನ  ಶಾಸಕ ವೇದವ್ಯಾಸ್, ಡಾ.ಭಾರತ್ ಶೆಟ್ಟಿ, ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಕಪಿಲ ಗೋಶಾಲೆಗೆ ಭೇಟಿ ನೀಡಿದ್ದರು. ಆದರೆ ಗೋ ಶಾಲೆ ಕೆಡವಿದ ಬಳಿಕ ಇವರ್‍ಯಾರೂ ಭೇಟಿ ನೀಡಿಲ್ಲ” ಎಂದು ದೂರಿದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English