ಮಂಗಳೂರು: ಮಂಗಳೂರು ಮೂಲದ ದಂಪತಿಯು ನ್ಯೂಜಿಲ್ಯಾಂಡ್ನಲ್ಲಿ ತಮ್ಮದೇ ಮಗನಿಂದ ಭೀಕರವಾಗಿ ಹತ್ಯೆಗೊಳಗಾಗಿರುವ ಘಟನೆ ನಡೆದಿದೆ.
ನಗರದ ಬಲ್ಮಠ ನಿವಾಸಿಗಳಾಗಿರುವ ಎಲ್ಸಿ ಬಂಗೇರ ಮತ್ತು ಹರ್ಮನ್ ಬಂಗೇರ ಹತ್ಯೆಗೀಡಾದವರು. ಅವರ ಪುತ್ರ ಶೀಲ್(23) ಹತ್ಯೆ ಮಾಡಿದವನೆಂದು ಆರೋಪಿಸಲಾಗಿದ್ದು, ಪೊಲೀಸರು ಆತನನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಶೀಲ್ ಇತ್ತೀಚಿನ ದಿನಗಳಲ್ಲಿ ಹೆತ್ತವರಿಂದ ದೂರ ಇರಲು ಪ್ರಯತ್ನಿಸಿ, ತನ್ನಿಚ್ಛೆಯಂತೆ ಬದುಕಲು ಅಭಿಲಾಷೆ ಹೊಂದಿದ್ದನು. ಈ ಹಿನ್ನೆಲೆಯಲ್ಲಿ ಹೆತ್ತವರೊಂದಿಗೆ ಜಗಳ ಮಾಡುತ್ತಿದ್ದನು. ಕಳೆದ ಶುಕ್ರವಾರ ಕೂಡಾ ಇದೇ ಕಾರಣಕ್ಕಾಗಿ ಜಗಳ ಮಾಡಿ ಹೆತ್ತ ತಾಯಿ – ತಂದೆಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ. ಹೆತ್ತವರು ಮೃತಪಟ್ಟ ಬಳಿಕ ಆತನೂ ಆತ್ಮಹತ್ಯೆ ಮಾಡಲು ಯತ್ನಿಸಿದ್ದ ಎಂದು ತಿಳಿದು ಬಂದಿದೆ.
ಇದೀಗ ನ್ಯೂಜಿಲ್ಯಾಂಡ್ನ ಆಕ್ಲೆಂಡ್ ಆಸ್ಪತ್ರೆಯಲ್ಲಿ ಯುವಕ ಜೀವನ್ಮರಣ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಎಲ್ಸಿಯವರ ತಂದೆ ಎಡ್ವರ್ಡ್ ಅಮ್ಮನ್ನ ಬಲ್ಮಠದ ಶಾಂತಿ ಕೆಥೆಡ್ರೆಲ್ನ ಸಂಡೇ ಸ್ಕೂಲ್ನಲ್ಲಿ ಅಧ್ಯಾಪಕರಾಗಿದ್ದರು. ಮುಂಬೈಯಲ್ಲಿ ಗೋದ್ರೆಜ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಎಲ್ಸಿಯವರು, ಮುಂಬೈನ ಶಾಲೆಯೊಂದರ ಆಡಳಿತಾಧಿಕಾರಿಯಾಗಿದ್ದ ಹರ್ಮನ್ ಬಂಗೇರ ಅವರನ್ನು ವಿವಾಹವಾಗಿದ್ದರು. ಆ ಬಳಿಕ ದಂಪತಿ ಗೋವಾದಲ್ಲಿ ನೆಲೆಸಿದ್ದರು.
2007ರಲ್ಲಿ ಮಗನ ವಿದ್ಯಾಭ್ಯಾಸಕ್ಕಾಗಿ ನ್ಯೂಜಿಲ್ಯಾಂಡ್ಗೆ ದಂಪತಿ ಸ್ಥಳಾಂತರಗೊಂಡಿದ್ದರು. ಇದೀಗ ದಂಪತಿ ತಮ್ಮದೇ ಮಗನಿಂದ ಹತ್ಯೆಗೊಳಗಾಗಿದ್ದಾರೆ.
Click this button or press Ctrl+G to toggle between Kannada and English