ಮುಂಬಯಿ : ಕ್ರಿಮಿನಲ್ ಪ್ರಕರಣವೊಂದನ್ನು ಪರಿಶೀಲಿಸಿದ ನಂತರ ವಾಟ್ಸ್ ಆಪ್ ಸದಸ್ಯರ ಪೋಸ್ಟ್ ಗಳಿಗೆ ಗ್ರೂಪ್ ನ ನಿರ್ವಾಹಕರು ಹೊಣೆಯಲ್ಲ ಎಂದು ಬಾಂಬೆ ಹೈಕೋರ್ಟ್ನ ಪೀಠ ಮಹತ್ವದ ಆದೇಶ ಪ್ರಕಟಿಸಿದೆ.
ಮಹಿಳೆಗೆ ಸಂಬಂಧಿಸಿದಂತೆ ವಾಟ್ಸ್ ಆಪ್ ಗ್ರೂಪ್ ಒಂದರ ಸದಸ್ಯರೊಬ್ಬರು ಆಕ್ಷೇಪಾರ್ಹವಾಗಿ ಪೋಸ್ಟ್ ನ್ನು ಹಾಕಿದ್ದರು. ಇದರ ವಿರುದ್ಧ ವಾಟ್ಸ್ ಆಪ್ ಗ್ರೂಪ್ ನ ನಿರ್ವಾಹಕರಾದ ಕಿಶೋರ್ ಟ್ಯಾರೋನ್ (33) ಎಂಬಾತನ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ಮಹಿಳೆಯೊಬ್ಬರು ದಾಖಲಿಸಿದ್ದರು.
ಮಹಿಳೆಯ ಕುರಿತಾದ ಆಕ್ಷೇಪಾರ್ಹ ಪೋಸ್ಟ್ ನ್ನು ನಿರ್ವಾಹಕರು ಡಿಲೀಟ್ ಮಾಡಿಲ್ಲ ಹಾಗೂ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಕ್ಷಮೆ ಕೋರುವಂತೆ ಕೇಳಲಿಲ್ಲ ಎಂದು ಮಹಿಳೆ ಆರೋಪಿಸಿದ್ದರು. ಆದರೆ ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕಿಶೋರ್ ಟ್ಯಾರೋನ್ ಎಂಬ ವ್ಯಕ್ತಿ ಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಝೆದ್ ಎ ಹಕ್ ಹಾಗೂ ಎಬಿ ಬೋರ್ಕಾರ್ ಅವರಿದ್ದ ಪೀಠ, ವಾಟ್ಸ್ ಆಪ್ ಗ್ರೂಪ್ ನ ನಿರ್ವಾಹಕರು ಗುಂಪಿನ ಸದಸ್ಯರು ಹಾಕುವ ಪೋಸ್ಟ್ ಗಳಿಗೆ ಹೊಣೆಯಾಗುವುದಿಲ್ಲ, ಅವರನ್ನು ಹೊಣೆಗಾರರನ್ನಾಗಿ ಮಾಡಲಾಗದು ಎಂದು ಹೇಳಿದೆ.
ವಾಟ್ಸ್ ಆಪ್ ಗ್ರೂಪ್ ನ ನಿರ್ವಾಹಕರಿಗೆ ಸದಸ್ಯರು ಹಾಕುವ ಪೋಸ್ಟ್ ಗಳನ್ನು ನಿಯಂತ್ರಿಸುವುದಕ್ಕೆ ಅಥವಾ ಅದನ್ನು ಪ್ರಕಟಿಸುವ ಮೊದಲೇ ಸೆನ್ಸಾರ್ ಮಾಡುವುದಕ್ಕೆ ಅಧಿಕಾರವಿಲ್ಲ ಆದರೆ ಗುಂಪಿನ ಯಾವುದೇ ಸದಸ್ಯ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬಹುದಾದಂತಹ ಅಂಶಗಳನ್ನು ಹಾಕಿದರೆ ಅಂತಹ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಬಹುದು ಎಂದು ನ್ಯಾಯಾಲಯ ಹೇಳಿದೆ.
Click this button or press Ctrl+G to toggle between Kannada and English