ವರಾಹಸ್ವಾಮಿ ಎಂಬುದು ನಾರಾಯಣನ ಇನ್ನೊಂದು ಹೆಸರು ಹಾಗೂ ರೂಪ ಎಂದು ನಿಮ್ಮಲ್ಲಿ ಬಹುತೇಕರಿಗೆ ಗೊತ್ತಿರಬಹುದು. ಆದರೆ ಯಾರೀ ವರಾಹಿ ದೇವಿ?
ಯಾರು ಈಕೆಯನ್ನು ಆರಾಧಿಸುತ್ತಾರೆ ಎಂಬುದು ನಿಮಗೆ ಗೊತ್ತೆ? ಬಹು ಜನರಿಗೆ ಗೊತ್ತಿರಲಿಕ್ಕಿಲ್ಲ, ಅಲ್ಲವೆ? ಹಾಗಾದರೆ ಈ ಲೇಖನ ಓದಿ. ವರಾಹಿ ದೇವಿಗೆ ಮುಡಿಪಾದ ದೇವಾಲಯವೊಂದರ ಕುರಿತು ತಿಳಿಸುತ್ತದೆ.
ವರಾಹಿ ಮೂಲತಃ ಸಪ್ತ ಮಾತ್ರಿಕೆಯರಲ್ಲಿ ಒಬ್ಬಳು. ಜಗನ್ಮಾತೆಯ ಅವತಾರ ಇವಳೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ವರಾಹ ಅಂದರೆ ಕಾಡು ಹಂದಿಯ ಅಪರಿಮಿತವಾದಂತಹ ಶಕ್ತಿಯ ರೂಪ ಹೊಂದಿರುವ ದೇವಿ ಇವಳೆಂದು ಹೆಳಲಾಗುತ್ತದೆ. ಹಾಗಾಗಿ ವರಾಹಿ ವರಾಹದ ಮುಖವನ್ನೆ ಹೊಂದಿರುವ ಸ್ತ್ರೀ ಶಕ್ತಿಯಾಗಿ ಆರಾಧಿಸಲ್ಪಡುತ್ತಾಳೆ.
ಮುಖ್ಯವಾಗಿ ವರಾಹಿ ದೇವಿಯನ್ನು ವಾಮಮಾರ್ಗದಲ್ಲಿ ಸಾಮಾನ್ಯವಾಗಿ ಪೂಜಿಸಲಾಗುತ್ತದೆ. ಮಂತ್ರ-ತಂತ್ರ ಶಕ್ತಿಗಳ ಅಧಿದೇವತೆಯನ್ನಾಗಿ ಈಕೆಯನ್ನು ಆರಾಧಿಸಲಾಗುತ್ತದೆ. ಇನ್ನೊಂದು ವಿಶೇಷವೆಂದರೆ ಎಲ್ಲರೂ ನಸುಕಿನ ಹಾಗೂ ಇಳಿ ಸಂಜೆಯ ಸಮಯದಲ್ಲಿ ದೇವರನ್ನು ಪೂಜಿಸಿದರೆ, ಈ ವಿಶೇಷ ದೇವಿಯನ್ನು ಕಾಳರಾತ್ರಿ ಹಾಗೂ ಮಧ್ಯರಾತ್ರಿ ಸಮಯದಲ್ಲೆ ಪೂಜಿಸಬೇಕಾಗುತ್ತದೆ.
ಶೈವ ಹಾಗೂ ವೈಷ್ಣವರೂ ಸಹ ವರಾಹಿಯನ್ನು ಪೂಜಿಸುತ್ತಾರಾದರೂ ಬಲು ಪ್ರಮುಖ ಶಾಕ್ತರು ಈ ದೇವಿಯ ಆರಾಧಕರು. ತಂತ್ರ ವಿದ್ಯೆಯಲ್ಲಿ ವಿವರಿಸಲಾಗಿರುವಂತೆ ವರಾಹಿ ದೇವಿಯನ್ನು ರಾತ್ರಿಯಾದ ಮೇಲೆ ನಸುಕಾಗುವುದಕ್ಕೆ ಮುಂಚೆ ಪೂಜಿಸಬೇಕೆಂದು ಹೇಳಲಾಗಿದೆ. ವರಾಹಿಗೆ ಮುಡಿಪಾದ ಕೆಲವೆ ಕೆಲವು ದೇವಾಲಯಗಳು ಭಾರತದ ವಿವಿಧ ಸ್ಥಳಗಳಲ್ಲಿ ಕಂಡುಬರುತ್ತವೆ.
ವರಾಹಿ ದೇವಿಯನ್ನು ವಿಶೇಷವಾಗಿ ಪಂಚಮಕರಗಳಿಂದ ಪೂಜಿಸಲಾಗುತ್ತದೆ. ಅಂದರೆ ಐದು ರೀತಿಯಲ್ಲಿ. ಅವುಗಳೆಂದರೆ ಮದ್ಯ, ಮೀನು, ಕಾಳು, ಮಾಂಸ ಹಾಗೂ ಸಂಭೋಗ. ಇಲ್ಲಿ ಸಂಭೋಗ ಎಂದಾಗ ಇದನ್ನು ಧಾರ್ಮಿಕವಾಗಿ ತಂತ್ರವಿದ್ಯೆಯ ಆಯಾಮದಲ್ಲಿ ಪರಿಗಣಿಸಬೇಕು. ಕೆಲವು ಪಂಡಿತರ ಪ್ರಕಾರ, ಇದು ದೈಹಿಕವಾಗಿ ಮಿಲನವಾದಾಗ ಊರ್ಜಿತವಾಗುವ ಶಿವಶಕ್ತಿಯ ಸಂಕೇತ ಎನ್ನಲಾಗುತ್ತದೆ.
ಇ ರೀತಿಯಾಗಿ ಬೆಚ್ಚಿ ಬ್ಳಿಸುವಂತಹ ಆರಾಧನೆಗಳುಳ್ಳ ವರಾಹಿ ದೇವಿಯ ಶಕ್ತಿ ಅಪಾರ ಎಂದು ನಂಬಲಾಗಿದೆ. ಬೇಡಿದ್ದೆಲ್ಲವನ್ನೂ ಅತಿ ಶೀಘ್ರವಾಗಿ ಕೊಡುತ್ತಾಳೆ ಎಂಬ ನಂಬಿಕೆ ಹಲವು ಜನರಲ್ಲಿದೆ. ಆಗಲೆ ತಿಳಿಸಿದ ಹಾಗೆ ವರಾಹಿ ದೇವಿಯ ಕೆಲವು ದೇವಾಲಯಗಳು ಭಾರತದಲ್ಲಿದ್ದು ಅದರಲ್ಲಿ ಜನಪ್ರೀಯವಾಗಿರುವ ದೇವಾಲಯವೆಂದರೆ ಮತ್ಸ್ಯ ವರಾಹಿಯ ದೇವಾಲಯ.
ಮತ್ಸ್ಯ ವರಾಹಿಯ ದೇವಾಲಯವು ಒಡಿಶಾ ರಾಜ್ಯದ ಪುರಿ ಜಿಲ್ಲೆಯ ಚೌರಾಸಿ ಎಂಬ ಪಟ್ಟಣದಲ್ಲಿದೆ. ಈ ದೇವಾಲಯದಲ್ಲಿ ದೇವಿಯು ವರಾಹ ಮುಖ ಹೊಂದಿದ್ದು ತನ್ನ ಬಲಗಾಲಿನಿಂದ ಹೋರಿಯೊಂದನ್ನು ಒತ್ತಿ ಹಿಡಿದು ಒಂದು ಕೈಯಲ್ಲಿ ಬಟ್ಟಲು ಹಾಗೂ ಇನ್ನೊಂದು ಕೈಯಲ್ಲಿ ಮೀನೊಂದನ್ನು ಹಿಡಿದು ಕುಳಿತಿರುವ ಭಂಗಿಯಲ್ಲಿದೆ. ಪ್ರತಿನಿತ್ಯ ದೇವಿಯನ್ನು ಪೂಜಿಸಿ ನೈವೇದ್ಯವಾಗಿ ಮೀನನ್ನು ಅರ್ಪಿಸಲಾಗುತ್ತದೆ.
ಕಳಿಂಗ ಸಾಮ್ರಾಜ್ಯವಿದ್ದ ಸಂದರ್ಭದಲ್ಲಿ ನಿರ್ಮಾಣವಾದ ಪ್ರಾಚೀನ ದೇವಾಲಯ ಇದಾಗಿದ್ದು ಇದರ ವಾಸ್ತುಶೈಲಿಯು ಖಾಖರ ವಾಸ್ತುಶೈಲಿಯನ್ನು ಹೊಂದಿದೆ. ವರಾಹಿ ದೇವಿಯು ಮೂರನೆಯ ಕಣ್ಣನ್ನು ತನ್ನ ಹಣೆಯ ಮೇಲೆ ಹೊಂದಿರುವುದನ್ನೂ ಸಹ ಇಲ್ಲಿ ಗಮನಿಸಬಹುದಾಗಿದೆ. ಚೈತ್ರಮಾಸ ಉತ್ಸವ ಹಾಗೂ ವಿಜಯದಶಮಿಗಳನ್ನು ಇಲ್ಲಿ ಬಲು ಅದ್ದೂರಿಯಾಗಿ ಆಚರಿಸಲಾಗುತ್ತದೆ.
ಲೇಖನ: ಮಂಜುನಾಥ ಹಾರೊಗೊಪ್ಪ.
Click this button or press Ctrl+G to toggle between Kannada and English