ಆಡುಭಾಷೆಯನ್ನು ಮರೆತರೆ ನಮ್ಮ ಮೂಲವನ್ನು ಮರೆತಂತೆ: ಡಿ ವಿ ಸದಾನಂದ ಗೌಡ

4:57 PM, Sunday, May 30th, 2021
Share
1 Star2 Stars3 Stars4 Stars5 Stars
(No Ratings Yet)
Loading...

DV Sadananda-gowdaಮಂಗಳೂರು: ಜಾಗತೀಕರಣದ ಪ್ರಭಾವದಿಂದ ಇಂಗ್ಲಿಷ್‌ ಅನಿವಾರ್ಯ ಎಂಬಂತಾಗಿದೆ. ಇದರಿಂದ ತುಳು ಸೇರಿದಂತೆ ಹಲವು ಭಾಷೆಗಳು ನಲುಗುತ್ತಿವೆ. ಹೀಗಾಗಿ ತುಳುವರು ತಮ್ಮ ಭಾಷೆಯನ್ನು ಮರೆತು ಮೂಲವನ್ನೇ ಮರೆಯದಿರೋಣ, ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ ವಿ ಸದಾನಂದ ಗೌಡ ಅಭಿಪ್ರಾಯಪಟ್ಟರು.

ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ತುಳು ಉಪನ್ಯಾಸ ಮಾಲಿಕೆಯ ವರ್ಷಾಚರಣೆಯ ಪ್ರಯುಕ್ತ ಶನಿವಾರ ಆನ್‌ಲೈನ್‌ ವೇದಿಕೆಯಲ್ಲಿ ನಡೆದ 52ನೇ ಸಂಚಿಕೆಯಲ್ಲಿ ವಿಶೇಷ ಅತಿಥಿಯಾಗಿ ಮಾತನಾಡಿದ ಅವರು, ಭಾಷೆ ನಮ್ಮ ಸಂಸ್ಕೃತಿ, ಆಚಾರ-ವಿಚಾರ, ಜೀವನ ಪದ್ಧತಿಯನ್ನು ಪ್ರತಿಬಿಂಬಿಸುತ್ತದೆ. ಭಾಷೆಯೊಂದರ ಅವನತಿ ದೇಶದ ಸಂಸ್ಕೃತಿಯ ಅವನತಿಯಿದ್ದಂತೆ, ಎಂದರು. ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಕುರಿತು ತಮ್ಮೆಲ್ಲಾ ಪ್ರಯತ್ನ ಮಾಡುವ ಭರವಸೆ ನೀಡಿದ ಅವರು, “ರಾಜ್ಯ ಸರ್ಕಾರ ತುಳು ಭಾಷೆಯನ್ನು ರಾಜ್ಯ ಭಾಷೆಯಾಗಿ ಗುರುತಿಸಿದರೆ, ವ್ಯವಸ್ಥೆಯೊಳಗೆ ಭಾಷೆ ಬೆಳೆಸಲು ಸಹಕಾರಿಯಾಗುತ್ತದೆ,” ಎಂದು ಅಭಿಪ್ರಾಯಪಟ್ಟರು.

ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು, ಕನ್ನಡ ಮಾಧ್ಯಮಕ್ಕೆ ತುಳುವರ ಕೊಡುಗೆ ಅಪಾರ. ಭಾಷಾ ಶುದ್ಧತೆ, ತುಡಿತ, ಪ್ರಾಮಾಣಿಕತೆ, ಶ್ರಮ, ತಾಳ್ಮೆ, ಕಷ್ಟವನ್ನು ಎದುರಿಸಿ ಗೆದ್ದು ಬರುವ ಗುಣವನ್ನು ನಮ್ಮ ಮಣ್ಣು ಕಲಿಸಿದೆ. ಆದರೆ ಈಗ ಮಾಧ್ಯಮದಲ್ಲಿ ರಾಜಕೀಯ ಪ್ರವೇಶದಿಂದ ತುಳು ಪ್ರತಿಭೆಗಳು ಅವಕಾಶ ಕಳೆದುಕೊಳ್ಳುತ್ತಿರುವುದು ಬೇಸರದ ವಿಚಾರ, ಎಂದರು.

Mangaluru-VVನ್ಯಾಯಾವಾದಿ ಎಂ. ಕೆ ಸುವೃತ ಕುಮಾರ್‌ ಅವರು, ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರದೆಯೇ ನಮ್ಮ ನಿತ್ಯ ಜೀವನದಲ್ಲಿ ತುಳುವನ್ನು ಅಳವಡಿಸಿಕೊಳ್ಳುವ ಮೂಲಕ ಭಾಷೆಯ ಬೆಳವಣಿಗೆಗೆ ಶ್ರಮಿಸೋಣ, ಎಂದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ, “ಕಠಿಣ ಪರಿಸ್ಥಿತಿಯಲ್ಲಿ ತುಳು ಉಪನ್ಯಾಸ ಸರಣಿ ಒಂದು ವರ್ಷ ಪೂರೈಸಿರುವುದು ವಿಶ್ವವಿದ್ಯಾನಿಲಯಕ್ಕೆ ಹೆಮ್ಮೆಯ ವಿಷಯ. ಜ್ಞಾನಪ್ರಸರಣವನ್ನೇ ಉದ್ದೇಶವಾಗಿ ಹೊಂದಿರುವ ನಾವು ಇಂತಹ ಕಾರ್ಯಕ್ರಮಕ್ಕೆ ಸದಾ ಪ್ರೋತ್ಸಾಹಿಸುತ್ತೇವೆ,” ಎಂಬ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಕಿಶೋರ್‌ ಕುಮಾರ್‌ ಸಿಕೆ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ, ತುಳು ಪೀಠ ಮತ್ತು ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಮಾಧವ ಎಂ.ಕೆ ಮೊದಲಾದವರು ಭಾಗವಹಿಸಿದ್ದರು. ಶ್ರೀಮತಿ ವಿಜಯಲಕ್ಷ್ಮೀ ಕಟೀಲ್‌ ಕಾರ್ಯಕ್ರಮ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English