ಗದಗ : ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ವತಿಯಿಂದ ನಾಗಾವಿ ಹತ್ತಿರದ ಗುಡ್ಡಗಾಡು ಪ್ರದೇಶದ ನಯನ ಮನೋಹರ ಪ್ರದೇಶದಲ್ಲಿ ನಿರ್ಮಿತವಾಗಿರುವ ನೂತನ ಕ್ಯಾಂಪಸ್ನಲ್ಲಿ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಇಡೀ ಕ್ಯಾಂಪಸ್ನಲ್ಲಿ ಗುರುತು ಪಡಿಸಲಾದ ಮಾದರಿ ಸಸ್ಯ ಶಿಶುಪಾಲನಾ ಕೇಂದ್ರ, ಸಮಗ್ರ ಪಶು ಕೃಷಿ ಯೋಜನೆ, ಸ್ಮೃತಿ ವನ, ಸಬರಮತಿ ಆಶ್ರಮ, ರೂರಲ್ ಟೆಕ್ನಾಲಜಿ ಪಾರ್ಕ್, ಜೀವ ವೈವಿಧ್ಯ ಕೇಂದ್ರ, ತರಬೇತಿ ಕೇಂದ್ರ, ನೆರಳು, ಭೋಜನ ಶಾಲೆಯ ಆವರಣ ಹಾಗೂ ದೇಸಿ ಯೋಜನೆಯ ಭೂಮಿ ಹೀಗೆ 10 ವಿವಿಧ ತಾಣಗಳಲ್ಲಿ ವಿಶ್ವವಿದ್ಯಾಲಯದ ಒಟ್ಟು 100 ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಏಕಕಾಲದಲ್ಲಿ ಸುಮಾರು 500 ಗಿಡಗಳನ್ನು ನೆಡುವ ಮೂಲಕ ಹತ್ತು ಸಾವಿರ ಗಿಡಗಳನ್ನು ನೆಡುವ ಮುಂದಿನ ಕೆಲವು ದಿನಗಳ ವರೆಗೆ ನಡೆಯಲಿರುವ ಗ್ರೀನ್ ಕ್ಯಾಂಪಸ್ ಇನಿಷಿಯೇಟಿವ್ ಎಂಬ ಹಚ್ಚಹಸಿರ ಕ್ಯಾಂಪಸ್ ನಿರ್ಮಿಸುವ ಸತ್ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ಕೆ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ವಿಷ್ಣುಕಾಂತ ಎಸ್. ಚಟಪಲ್ಲಿ ಹಾಗೂ ಕುಲಸಚಿವರಾದ ಪ್ರೊ. ಬಸವರಾಜ್ ಎಲ್. ಲಕ್ಕಣ್ಣವರ್ ಅವರು ಚಾಲನೆ ನೀಡಿದರು.
ಜೊತೆಗೆ ವಿಶ್ವ ಪರಿಸರ ದಿನದ ಅಂಗವಾಗಿ ವಿಶ್ವವಿದ್ಯಾಲಯದಲ್ಲಿ ಮಾತ್ರವಲ್ಲದೆ ವಿದ್ಯಾರ್ಥಿಗಳು ತಾವಿರುವ ಕ್ಷೇತ್ರದಲ್ಲಿ ಸಸಿಯನ್ನು ನೆಟ್ಟು ವಿಶ್ವವಿದ್ಯಾಲಯದೊಂದಿಗೆ ಆ ಸೆಲ್ಫಿಯನ್ನು ಹಂಚಿಕೊಳ್ಳುವ ನನ್ನ ಗಿಡ ನನ್ನ ಉಸಿರು ಎಂಬ ವಿನೂತನ ಅಭಿಯಾನಕ್ಕೆ ವಿಶ್ವವಿದ್ಯಾಲಯದಿಂದ ಕರೆ ನೀಡಲಾಗಿತ್ತು, ಅದಕ್ಕೆ ಸ್ಪಂದಿಸಿದ ವಿಶ್ವವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಗಿಡನೆಟ್ಟು ತಾವು ನೆಟ್ಟ ಗಿಡದ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿ ವಿಶ್ವವಿದ್ಯಾಲಯದೊಂದಿಗೆ ಹಂಚಿಕೊಂಡರು. ಈ ಮೂಲಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣದಿಂದ ದೂರವಿದ್ದರೂ ವಿಶ್ವವಿದ್ಯಾಲಯದ ಮಹತ್ವಾಕಾಂಕ್ಷೆ ಹಾಗೂ ಸತ್ಕಾರ್ಯದಲ್ಲಿ ಭಾಗಿಯಾಗಲು ಸದಾ ಸಿದ್ಧ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್ ಬ್ಯುರೋ.
Click this button or press Ctrl+G to toggle between Kannada and English