ಬೆಂಗಳೂರು : ರಾಜ್ಯ ಸರ್ಕಾರ ತಡರಾತ್ರಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರನ್ನು ವರ್ಗಾವಣೆ ಮಾಡಿದೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರನ್ನಾಗಿ ವರ್ಗಾವಣೆ ಮಾಡಿದರೆ, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.
ರೋಹಿಣಿ ಇಂದು ಬೆಳಗ್ಗೆಯೇ ಸಿಎಂ ಬಿಎಸ್ ಯಡಿಯೂರಪ್ಪನವರನ್ನು ಭೇಟಿ ಮಾಡಲು ಮುಂದಾಗಿದ್ದರು. ಸುಮಾರು ಎರಡೂವರೆ ಗಂಟೆಗಳ ಕಾಲ ಸಿಎಂ ಬಿಎಸ್ವೈಗಾಗಿ ಕಾದರು. ಬಳಿಕ ಭೇಟಿ ಮಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ವರ್ಗಾವಣೆ ತಡೆ ಹಿಡಿಯುವಂತೆ ಸಿಎಂ ಬಳಿ ಮನವಿ ಮಾಡಿದರು.
ಆದರೆ ಸಿಎಂ ಯಡಿಯೂರಪ್ಪ ಸಿಂಧೂರಿ ಅವರ ಮನವಿಯನ್ನು ಒಪ್ಪಲಿಲ್ಲ. ಹೀಗಾಗಿ ರೋಹಿಣಿ ಸಿಂಧೂರಿ ಹೋದ ದಾರಿಗೆ ಸುಂಕವಿಲ್ಲ ಎಂಬಂತೆ ಬರಿಗೈಲಿ ವಾಪಸ್ಸಾದರು.
ಮೈಸೂರಿನ ಡಿಸಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ನಡುವಿನ ಕಿತ್ತಾಟ ಸರ್ಕಾರಕ್ಕೆ ದೊಡ್ಡ ತಲೆನೋವಾಗಿತ್ತು. ಹೀಗಾಗಿ ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಸರ್ಕಾರ ವರ್ಗಾವಣೆ ಎಂಬ ಅಸ್ತ್ರವನ್ನು ಪ್ರಯೋಗ ಮಾಡಿದೆ. ಇಬ್ಬರು ಐಎಎಸ್ ಅಧಿಕಾರಿಗಳನ್ನು ರಾತ್ರೋರಾತ್ರಿ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ಡಾ. ಬಗಾದಿ ಗೌತಮ್ ಅವರನ್ನು ನೇಮಿಸಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಆಡಳಿತ ವ್ಯವಸ್ಥಾಪಕ ಲಕ್ಷ್ಮೀಕಾಂತ್ ರೆಡ್ಡಿ ಅವರನ್ನು ಮೈಸೂರು ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಆರೋಪಗಳನ್ನು ಗಮನಿಸಿದ ಜಿಲ್ಲಾ ಉಸ್ತುವಾರಿ ಎಸ್.ಟಿ.ಸೋಮಶೇಖರ್, ಸಿಎಂ ಬಿಎಸ್ ಯಡಿಯೂರಪ್ಪನವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.
ಸರಕಾರದ ಮುಖ್ಯ ಕಾರ್ಯದರ್ಶಿ ಸಿ.ಎಸ್.ರವಿಕುಮಾರ್ ಮೈಸೂರಿಗೆ ತೆರಳಿ ಸಭೆ ನಡೆಸಿ ಡಿಸಿ ಹಾಗೂ ಆಯುಕ್ತೆ ಇಬ್ಬರಿಂದಲೂ ಮಾಹಿತಿ ಪಡೆದಿದ್ದರು. ಇದಾದ ಬಳಿಕವೂ ಇಬ್ಬರು ಐಎಎಸ್ ಅಧಿಕಾರಿಗಳ ಶೀತಲ ಸಮರ ಮುಂದುವರೆದಿತ್ತು.
Click this button or press Ctrl+G to toggle between Kannada and English