ಮಂಗಳೂರು : ಅಕ್ರಮವಾಗಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕ ವಸ್ತುವಾದ ಎಲ್‌ಎಸ್‌ಡಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಕೇರಳ ಮೂಲದ ಆರೋಪಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ಕುರಿತು ಮಾಹಿತಿ ನೋಡಿದ ಕಮಿಶನರ್, ಮೂಲತಃ ಕೇರಳ ಕ್ಯಾಲಿಕಟ್ ಮುಟ್ಟಂಗಲ್ ನಿವಾಸಿ, ಪ್ರಸ್ತುತ ಕದ್ರಿಯ ಪಿಜಿಯಲ್ಲಿ ವಾಸಿಸುತ್ತಿರುವ ಮುಹಮ್ಮದ್ ಅಜಿನಾಸ್ (25) ಬಂಧಿತ ಆರೋಪಿ.
ಈತನಿಂದ 16.80 ಲಕ್ಷ ರೂ. ಮೌಲ್ಯದ ಒಟ್ಟು 15 ಗ್ರಾಂ 15 ಮಿಲಿ ಗ್ರಾಂ ತೂಕವಿರುವ 840 ಹಿಂದೂ ದೇವರ ಲೇಬಲ್ ಇರುವ ಎಲ್‌ಎಸ್‌ಡಿ ಸ್ಟ್ಯಾಂಪ್, ಮೋಟರ್ ಬೈಕ್, 2 ಮೊಬೈಲ್ ಫೋನ್ ಸೇರಿದಂತೆ 17,15,500 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಲ್‌ಎಸ್‌ಡಿ ಒಂದು ಸ್ಟ್ಯಾಂಪ್‌ಗೆ 2 ಸಾವಿರದಿಂದ 6 ಸಾವಿರ ರೂ. ಬೆಲೆಯಿದೆ ಎಂದು ಹೇಳಿದರು.
ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ನಗರ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಕದ್ರಿ ಮೈದಾನದ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಐಷಾರಾಮಿ ವ್ಯಕ್ತಿಗಳಿಗೆ ಇದನ್ನು ಮಾರಾಟ ಮಾಡುತ್ತಿದ್ದ. ಈತ ಮಂಗಳೂರು ನಗರ, ಕಾಸರಗೋಡು, ಗೋವಾಕ್ಕೂ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಆರೋಪಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು ಎಂದರು.
ನಗರ ಕಾನೂನು ಸುವ್ಯವಸ್ಥಾ ವಿಭಾಗದ ಉಪಪೊಲೀಸ್ ಆಯುಕ್ತ ಹರಿರಾಂ ಶಂಕರ್ ನೇತೃತ್ವದ ತಂಡ ಕಳೆದ ಹಲವು ದಿನಗಳಿಂದ ಮಾದಕ ದ್ರವ್ಯ ಸಾಗಾಟ ವಿರುದ್ಧ ತನಿಖೆ ನಡೆಸಿದ್ದು, ಈ ಹಿಂದೆ ಬೃಹತ್ ಪ್ರಮಾಣದ ಗಾಂಜಾ, ಎಂಡಿಎಂ ಪ್ರಕರಣವನ್ನು ಪತ್ತೆಹಚ್ಚಿತ್ತು. ಇದರ ಮುಂದುವರಿದ ಭಾಗವಾಗಿ ಎಲ್‌ಎಸ್‌ಡಿ ಪ್ರಕರಣವನ್ನು ಭೇದಿಸುವ ಮೂಲಕ ಮತ್ತೊಂದು ಸಾಧನೆ ಮಾಡಿದೆ. ಈ ತಂಡಕ್ಕೆ ಅಭಿನಂದನೆ ಸಲ್ಲಿಸುವುದರ ಜತೆಗೆ 10 ಸಾವಿರ ರೂ. ಪುರಸ್ಕಾರ ನೀಡುವುದಾಗಿ ಕಮಿಷನರ್ ಘೋಷಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಹರಿರಾಮ್ ಶಂಕರ್, ಸಹಾಯಕ ಪೊಲೀಸ್ ಆಯುಕ್ತರಾದ ಎ.ಎ. ಹೆಗಡೆ, ರಂಜಿತ್ ಕುಮಾರ್, ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್, ಉಪಸ್ಥಿತರಿದ್ದರು.
Click this button or press Ctrl+G to toggle between Kannada and English