ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಳವಾಗಿರುವ ಹದಿನೇಳು ಗ್ರಾಮಗಳನ್ನು ಸಂಪೂರ್ಣ ಸೀಲ್ ಡೌನ್ ಗೊಳಿಸಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.
ಮಂಗಳೂರು ತಾಲೂಕಿನ ಕೊಣಾಜೆ ಮತ್ತು ನೀರುಮಾರ್ಗ, ಬೆಳ್ತಂಗಡಿ ತಾಲೂಕಿನ ನಾರಾವಿ, ಕೊಯ್ಯೂರು, ಮಿತ್ತಬಾಗಿಲು, ಮಾಲಾಡಿ, ನೆರಿಯ, ಲಾಯಿಲ, ಉಜಿರೆ ಮತ್ತು ಚಾರ್ಮಾಡಿ, ಸುಳ್ಯ ತಾಲೂಕಿನ ಐವರ್ನಾಡು, ಅಮರ ಮುಡ್ನೂರು, ಕೊಲ್ಲಮೊಗರು, ಗುತ್ತಿಗಾರು, ಅರಂತೋಡು, ಕಡಬ ತಾಲೂಕಿನ ಸುಬ್ರಮಣ್ಯ ಹಾಗೂ ಸವಣೂರು ಸೀಲ್ ಡೌನ್ ಆಗಲಿದೆ.
ದ.ಕ. ಜಿಲ್ಲೆಯ 17 ಗ್ರಾಪಂ.ಗಳು ಜೂ.14ರ ಬೆಳಿಗ್ಗೆ 9 ಗಂಟೆಯಿಂದ 21ರ ಬೆಳಗ್ಗೆ 9 ಗಂಟೆಯವರೆಗೆ ಸೀಲ್ ಡೌನ್ ಜಾರಿಯಲ್ಲಿರಲಿದೆ. 17 ಗ್ರಾ.ಪಂ.ಗಳಿಗೆ ಬರುವವರಿಗೆ, ಹೋಗುವವರಿಗೆ ಕೆಲವು ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ನರ್ಸಿಂಗ್ ಹೋಂ, ಕ್ಲಿನಿಕ್, ಲ್ಯಾಬ್, ಟೆಲಿಮೆಡಿಸಿನ್, ರಕ್ತ ಸಂಗ್ರಹ ಕೇಂದ್ರ ತೆರೆಯಲು ಅವಕಾಶ ನೀಡಲಾಗಿದೆ. ಕೆಎಂಎಫ್ ಹಾಲಿನ ಬೂತ್, ರಾಜ್ಯ, ರಾಷ್ಟ್ರ ಹೆದ್ದಾರಿ ಪೆಟ್ರೋಲ್ ಬಂಕ್ ತೆರೆಯಲು ಅವಕಾಶ ಕೊಡಲಾಗಿದೆ. ವೈದ್ಯಕೀಯ, ಇತರ ತುರ್ತು ಅಗತ್ಯ ಸೇವೆಗೆ ವಾಹನ ಓಡಾಟಕ್ಕೆ ಅನುಮತಿಸಲಾಗಿದೆ. ಗ್ರಾಮಸ್ಥರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಗ್ರಾಮಪಡೆಗಳು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
Click this button or press Ctrl+G to toggle between Kannada and English