ಜಿಲ್ಲಾಡಳಿತದ ನಿರ್ಲಕ್ಷ್ಯ ಮರವೂರು ಸೇತುವೆ ಹಾನಿಗೊಳಗಾಗಲು ಕಾರಣ : ಅಭಯಚಂದ್ರ ಜೈನ್

7:07 PM, Tuesday, June 15th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Abhayachandra Jain ಮಂಗಳೂರು : ಜೆಸಿಬಿ ಮೂಲಕ ಸೇತುವೆ ಸುತ್ತಮುತ್ತ ಹೂಳೆತ್ತುವ ನೆಪದಲ್ಲಿಅವ್ಯಾಹತವಾಗಿ ಮರಳು ಮಾಫಿಯಾ ನಡೆಯುತ್ತಿರುವುದೇ  ಮರವೂರು ಸೇತುವೆಯ  ಪಿಲ್ಲರ್ ಗಳು ಕುಸಿಯಲು ಕಾರಣ  ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಆರೋಪಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಸಮೀಪದಲ್ಲೇ ಅವ್ಯಾಹತವಾಗಿ ಮರಳು ಮಾಫಿಯಾ ನಡೆಯುತ್ತಿದ್ದರೂ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಮೌನ ವಹಿಸಿರುವುದು ಈ ದುರಂತಕ್ಕೆ ಕಾರಣ ಎಂದು ಜೈನ್ ಆರೋಪಿಸಿದರು.

ಮರಳು ಮಾಫಿಯಾದಿಂದ  ಮರವೂರು ಸೇತುವೆಯ ಜತೆಗೆ ಬಹುಗ್ರಾಮ ಕುಡಿಯುವ ನೀರಿಗಾಗಿ ನಿರ್ಮಿಸಲಾದ ಕಿಂಡಿ ಅಣೆಕಟ್ಟಿಗೂ ಅಪಾಯವನ್ನು ತಂದೊಡ್ಡಿದೆ. ಜತೆಗೆ ಕೊಂಕಣ ರೈಲ್ವೆಯ ಸೇತುವೆಯೂ ಇಲ್ಲಿ ಹಾದು ಹೋಗುತ್ತಿದ್ದು, ಅದಕ್ಕೂ ಹಾನಿಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜಕಾರಣಿಗಳು  ಮರುಳು ಮಾಫಿಯಾದಲ್ಲಿ ಕೈ  ಜೋಡಿಸಿರುವುದರಿಂದ ಇಂತಹ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ಗಣಿಗಾರಿಕೆ ಇಲಾಖೆಯ ಭ್ರಷ್ಟ ಅಧಿಕಾರಿಗಳೂ ಇದಕ್ಕೆ ಕಾರಣ. ನಾನು ಶಾಸಕನಾಗಿದ್ದಾಗ ಇದಕ್ಕೆ ಅವಕಾಶ ನೀಡಿರಲಿಲ್ಲ ಎಂದವರು ಹೇಳಿದರು.

ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮಿಥುನ್ ರೈ ಮಾತನಾಡಿ,  ಹೊಸ ಸೇತುವೆ ಕಾಮಗಾರಿ ಸಮರೋಪಾದಿಯಲ್ಲಿ ಮುಗಿಸಬೇಕು. ಹಳೆ ಸೇತುವೆ ಕುಸಿಯಲು ಕಾರಣದ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿ ಯಲ್ಲಿ  ಮುಖಂಡರಾದ ವಿನಯರಾಜ್, ಶಾಲೆಟ್ ಪಿಂಟೋ, ಅನಿಲ್ ಕುಮಾರ್, ಮೆರಿಲ್ ರೇಗೋ, ಸವದ್ ಸುಳ್ಯ, ಸಿರಾಜ್, ಹನೀಫ್, ಬಾಬು ಶೆಟ್ಟಿ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English