ಚಿಕ್ಕಮಗಳೂರು: ಕೋಳಿ, ನಿಂಬೆಹಣ್ಣು, ಮೊಟ್ಟೆ, ಹೊಸ ಬಟ್ಟೆ, ಅನ್ನ, ತೆಂಗಿನಕಾಯಿ, ಅರಿಶಿನ-ಕುಂಕುಮ, ಮೂರು ತರದ ದಾರ, ಬಳೆ, ತಲೆಗೂದಲು ಇಟ್ಟು ರಸ್ತೆ ಮಧ್ಯೆಯೇ ವಾಮಾಚಾರ ಮಾಡಿರುವ ಘಟನೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿಯ ರಂಗನೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಂಗೇನಹಳ್ಳಿ ಗ್ರಾಮದಿಂದ ಬರಗೇನಹಳ್ಳಿಗೆ ಹೋಗುವ ಮಾರ್ಗ ಮಧ್ಯೆ ಈ ವಾಮಾಚಾರ ನಡೆಸಿದ್ದಾರೆ.
ಬೆಳ್ಳಂ ಬೆಳಗ್ಗೆಯೇ ಕೃಷಿ ಕೆಲಸಕ್ಕೆ ಜಮೀನಿಗೆ ಹೋಗುವ ರೈತರು ಇದನ್ನ ಕಂಡು ಕಂಗಾಲಾಗಿದ್ದಾರೆ. ವಾಮಾಚಾರ ನಡೆಸಿದ ದುಷ್ಕರ್ಮಿಗಳು ವಾಮಾಚಾರದ ಬಳಿಕ ವಿವಿಧ ವಸ್ತುಗಳು ಸ್ಥಳದಲ್ಲಿ ಬಿಟ್ಟು ಹೋಗಿದ್ದಾರೆ.
ನೇರ ರಸ್ತೆಯಲ್ಲಿ ಈ ರೀತಿ ಕೆಟ್ಟದ್ದಾಗಿ ವಾಮಾಚಾರ ಮಾಡಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ವಾಮಾಚಾರ ನಡೆಸುವವರು ಸಾಮಾನ್ಯವಾಗಿ ಮೂರು ದಾರಿ ಕೂಡಿರುವ ಕಡೆ ವಾಮಾಚಾರ ನಡೆಸುತ್ತಾರೆ ಎಂದು ಹಳ್ಳಿಗರು ಹೇಳಿದ್ದಾರೆ.
ಈ ರಸ್ತೆಯಲ್ಲಿ ಬರಗೇನಹಳ್ಳಿ, ರಂಗೇನಹಳ್ಳಿ, ಅರುವನಹಳ್ಳಿ, ಗೌಳಿಗರ ಕ್ಯಾಂಪ್ ಸೇರಿದಂತೆ ಏಳೆಂಟು ಗ್ರಾಮದ ಜನ ದಿನಂ ಪ್ರತಿ ಓಡಾಡುತ್ತಾರೆ. ಸಾಲದಕ್ಕೆ ಕೃಷಿ ಕೆಲಸಕ್ಕೂ ನೂರಾರು ರೈತರು ಓಡಾಡುತ್ತಾರೆ. ಇಂತಹಾ ಜನವಸತಿ ಪ್ರದೇಶದಲ್ಲಿ ಹೀಗೆ ವಾಮಾಚಾರ ಮಾಡಿರುವುದರಿಂದ ಸ್ಥಳೀಯರು ಕೂಡ ಭಯಭೀತರಾಗಿದ್ದಾರೆ.
Click this button or press Ctrl+G to toggle between Kannada and English