ಕಾರವಾರ: ದಾಂಡೇಲಿಯ ಕಾಳಿ ನದಿ ಪಕ್ಕದಲ್ಲೇ ಇರುವ ಕೊಗಿಲಬನ ಗ್ರಾಮಕ್ಕೆ ಆಹಾರ ಅರಸಿ ಮೊಸಳೆಯೊಂದು ನುಗ್ಗಿದ ಘಟನೆ ಗುರುವಾರ ನಡೆದಿದೆ.
ಕಾಳಿ ನದಿಯಿಂದ ಆಹಾರ ಅರಸಿ ನದಿ ದಡಕ್ಕೆ ಬಂದ ಬೃಹದಾಕಾರದ ಮೊಸಳೆಯು ದಾಂಡೇಲಿಯ ರಸ್ತೆಯಲ್ಲಿ ಸಂಚರಿಸಿದೆ.
ಮೊಸಳೆಯನ್ನು ನೋಡಿದ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಗ್ರಾಮದ ರಸ್ತೆಯಲ್ಲಿ ವಾಕ್ ಮಾಡಿದ ಮೊಸಳೆ ಅರಣ್ಯಾಧಿಕಾರಿಗಳು ಬರುವುದರೊಳಗೆ ಗ್ರಾಮವನ್ನು ದಾಟಿ ಕಾಡಿನ ಹಾದಿ ಮೂಲಕ ಮತ್ತೆ ನದಿಗೆ ಸೇರಿಕೊಂಡಿದೆ.
ದಾಂಡೇಲಿಯ ಕಾಳಿ ನದಿಯಲ್ಲಿ ಸಾವಿರಾರು ಮೊಸಳೆಗಳು ವಾಸವಾಗಿವೆ. ಆದರೆ ನದಿಯನ್ನು ಬಿಟ್ಟು ಗ್ರಾಮಕ್ಕೆ ಇದೇ ಮೊದಲ ಬಾರಿ ಮೊಸಳೆ ಆಗಮಿಸಿದ್ದು ಜನರನ್ನು ಬೆಚ್ಚಿ ಬೀಳಿಸಿದೆ.
ದಾಂಡೇಲಿಯ ಕಾಗದ ಕಾರ್ಖಾನೆ ಬಳಿ ನದಿ ತಡದಲ್ಲಿ ಅತೀ ಹೆಚ್ಚು ಮೊಸಳೆಗಳು ವಾಸಿಸುತ್ತಿವೆ. ಕಾರ್ಖಾನೆಯ ತ್ಯಾಜ್ಯಗಳೇ ಇವುಗಳಿಗೆ ಆಹಾರವಾಗಿದ್ದು ಲಾಕ್‍ಡೌನ್‍ನಿಂದ ಜನರ ಓಡಾಟ ಸಹ ಈ ಪ್ರದೇಶಗಳಲ್ಲಿ ಇಳಿಮುಖವಾಗಿತ್ತು. ಹೀಗಾಗಿ ಆಹಾರ ಅರಸಿ ಮೊಸಳೆಗಳು ನದಿ ದಡದಿಂದ ಸುತ್ತಮುತ್ತ ಓಡಾಟ ನಡೆಸುತಿದ್ದು, ಇಂದು ಗ್ರಾಮಕ್ಕೆ ಮೊಸಳೆ ನುಗ್ಗಿದ್ದರಿಂದ ಇದೀಗ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.
ಈ ಹಿಂದೆ ನದಿ ಭಾಗದಲ್ಲಿ ಮೊಸಳೆಗಳು ಮನುಷ್ಯನ ಮೇಲೆ ಎರಗಿ ಸಾವುಗಳಾದ ಘಟನೆ ಸಹ ನಡೆದಿದೆ.
Click this button or press Ctrl+G to toggle between Kannada and English