ಮಂಗಳೂರು : ಪಂಜಿಮೊಗರು ಸಮೀಪದ ಮಾಯಿಲ ಎಂಬಲ್ಲಿ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ ವ್ಯಕ್ತಿಯೊಬ್ಬರು ಪತ್ನಿ ಮತ್ತು ಪುತ್ರನ ಎದುರಲ್ಲೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಅವರನ್ನು ರಕ್ಷಿಸಲು ಮುಂದಾದ ಮತ್ತೊಬ್ಬ ವ್ಯಕ್ತಿಯು ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.
ಪಂಜಿಮೊಗರು ಸಮೀಪದ ಅಂಬಿಕಾನಗರದ ನಿವಾಸಿ ಜೋಕಿಂ ಮಸ್ಕರೇನಸ್ (58) ಮೃತಪಟ್ಟ ಮೀನುಗಾರ. ಕೆರೆಯಲ್ಲಿ ಜೋಕಿಂ ಮೀನು ಹಿಡಿಯುತ್ತಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದರು. ತಕ್ಷಣ ಅಲ್ಲೇ ಇದ್ದ ಶೇಷಪ್ಪ (50) ಎಂಬವರು ಮಸ್ಕರೇನಸ್‌ರನ್ನು ರಕ್ಷಿಸಲು ಮುಂದಾದರು. ಆದರೆ ಈ ಆಘಾತದಿಂದ ಶೇಷಪ್ಪ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದರು ಎನ್ನಲಾಗಿದೆ.
ನಂತರ ಮಸ್ಕರೇನಸ್ ಮತ್ತು ಶೇಷಪ್ಪ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಇಬ್ಬರೂ ಕೊನೆಯುಸಿರೆಳೆದಿದ್ದರು. ಮಸ್ಕರೇನಸ್‌ರನ್ನು ರಕ್ಷಿಸಲು ಅವರ ಪುತ್ರ ಮುಂದಾದರೂ ಪ್ರಯೋಜನವಾಗಲಿಲ್ಲ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English