‘ತುಳು ಇತಿಹಾಸದಲ್ಲಿ ಹವ್ಯಾಸಿಗಳ ಕೊಡುಗೆ ಅನನ್ಯʼ : ಡಾ. ಪುಂಡಿಕಾಯ್‌ ಗಣಪಯ್ಯ ಭಟ್‌ ಅಭಿಮತ

4:27 PM, Sunday, July 11th, 2021
Share
1 Star2 Stars3 Stars4 Stars5 Stars
(No Ratings Yet)
Loading...

Ganapathi Bhatಮಂಗಳೂರು: ಪ್ರಾಚೀನ ತುಳು ಇತಿಹಾಸವನ್ನು ಯಾರೂ ದಾಖಲಿಸಿಲ್ಲ ಎಂಬುದು ಆಧುನಿಕ ದೃಷ್ಟಿಕೋನವಷ್ಟೇ. ನಮ್ಮ ಹಿರಿಯರು ಮಿತಿಯೊಳಗೆ, ಅಸಂಪ್ರದಾಯಿಕ ರೀತಿಯಲ್ಲಿ ಇತಿಹಾಸ ದಾಖಲಿಸಿದ್ದಾರೆ, ಎಂದು ಮೂಡಬಿದ್ರಿ ಶ್ರೀ ದವಳಾ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಪುಂಡಿಕಾಯ್‌ ಗಣಪಯ್ಯ ಭಟ್‌ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗ, ಮಾನುಷ (ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕರ ಸಂಘ) ದ ಸಹಯೋಗದೊಂದಿಗೆ ಆರಂಭಿಸಿರುವ ತುಳುನಾಡು, ಕೊಡಗುಗಳ ಇತಿಹಾಸ ಕುರಿತ ಆನ್‌ಲೈನ್‌ ಉಪನ್ಯಾಸ ಮಾಲಿಕೆಯ ಮೊದಲ ಭಾಗದಲ್ಲಿ ʼತುಳುನಾಡಿನ ಇತಿಹಾಸ ಬರವಣಿಗೆಯ ಮೊದಲ ಹೆಜ್ಜೆಗಳುʼ ಎಂಬ ವಿಷಯದ ಕುರಿತು ಮಾತನಾಡಿದ ಗಣಪಯ್ಯ ಭಟ್‌, ಇತಿಹಾಸ ಅರಿಯುವ ಪ್ರಯತ್ನ 19 ನೇ ಶತಮಾನದಲ್ಲೇ ಆರಂಭವಾಗಿದ್ದರೂ, ಕ್ರಮಬದ್ಧವಾಗಿ ದಾಖಲಿಸುವ ಪ್ರಯತ್ನ 20 ನೇ ಶತಮಾನದ ಆದಿಭಾಗದಿಂದ ಆರಂಭವಾಯಿತು. ತಮ್ಮ ಆಸಕ್ತಿಗಾಗಿ, ಯಾವುದೇ ತರಬೇತಿಯಿಲ್ಲದೆ, ಅನುಕೂಲಗಳೂ ಇಲ್ಲದೇ ಇದನ್ನು ಆರಂಭಿಸಿದ ಹವ್ಯಾಸಿ ಇತಿಹಾಸಕಾರರೇ ಮುಂದಿನ ವೃತ್ತಿಪರರಿಗೆ ದಾರಿದೀಪವಾದರು, ಎಂದರು.

“ಕೇವಲ 4 ನೇ ತರಗತಿ ಓದಿದ್ದ ಪೊಳಲಿ ಶೀನಪ್ಪ ಹೆಗಡೆ, ಐತಿಹ್ಯಗಳನ್ನೇ ಆಧಾರವಾಗಿಟ್ಟುಕೊಂಡು ಸಂಶೋಧನೆ ನಡೆಸಿ “ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ ಮತ್ತು ಭೂತಾಳಪಾಂಡ್ಯರಾಯನ ಅಳಿಯಕಟ್ಟು” ಸೇರಿದಂತೆ 3 ಕೃತಿಗಳನ್ನು ರಚಿಸಿದರು. ಬಂಟ್ವಾಳದಲ್ಲಿ ಪ್ರಾಥಮಿಕ ಶಾಲೆಯ ಅಧ್ಯಾಪಕರಾಗಿದ್ದ ಮಂಜೇಶ್ವರ ಗಣಪತಿ ರಾವ್‌ ಐಗಳವರು ವ್ಯಾಪಕ ಕ್ಷೇತ್ರಕಾರ್ಯ ನಡೆಸಿ 35 ಅಧ್ಯಾಯಗಳ “ದಕ್ಷಿಣ ಕನ್ನಡದ ಪ್ರಾಚೀನ ಇತಿಹಾಸ” ಎಂಬ ಕೃತಿ ರಚಿಸಿದರು. ದುರಾದೃಷ್ಟವಶಾತ್‌ ಇತಿಹಾಸಕಾರ ಎಂದು ಗುರುತಿಸಿಕೊಳ್ಳದ ಮಂಜೇಶ್ವರ ಗೋವಿಂದ ಪೈಗಳು 1921 ರ ಬಳಿಕ ತುಳುನಾಡಿನ ಇತಿಹಾಸದ ಬಗ್ಗೆ ಬರೆದ 25 ಲೇಖನಗಳು ಅತ್ಯಮೂಲ್ಯವಾದವುಗಳು,” ಎಂದು ಅವರು ತುಳು ಇತಿಹಾಸಕಾರರನ್ನು ನೆನಪಿಸಿಕೊಂಡರು.

ಕಾರ್ಯಕ್ರಮಕ್ಕೆ ಶುಭಹಾರೈಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ, “ಈ ಮಾಲಿಕೆಯ ಮೂಲಕ ಅನಾವರಣಗೊಳ್ಳದ ತುಳು ಸಂಸ್ಕೃತಿಯ ಅದೆಷ್ಟೋ ವಿಷಯಗಳನ್ನು ತಿಳಿಯುವಂತಾಗಲಿ,” ಎಂದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಪ್ರಾಂಶುಪಾಲೆ ಡಾ. ಅನಸೂಯ ರೈ, ಇತಿಹಾಸ ಸ್ನಾತಕೋತ್ತರ ವಿಭಾಗದ ನವೀನ ಪ್ರಯತ್ನವನ್ನು ಶ್ಲಾಘಿಸಿದರು. ವಿಭಾಗದ ಸಂಯೋಜಕ ಡಾ. ಗಣಪತಿ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಡಾ. ಕುಮಾರಸ್ವಾಮಿ ಎಂ ಕಾರ್ಯಕ್ರಮ ನಿರೂಪಿಸಿದರು. ಡಾ.ಮೀನಾಕ್ಷಿ ವಂದನಾರ್ಪಣೆ ನೆರವೇರಿಸಿದರು.

Tulu

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English