ಸಾವಿನ ದಾರಿಯಲ್ಲಿದ್ದ ಹಿಂದೂ ಕುಟುಂಬಕ್ಕೆ, ಬದುಕುವ ದಾರಿ ತೋರಿಸಿದ ಉಳ್ಳಾಲ ಮುಸ್ಲಿಂ ಕುಟುಂಬ !

10:08 PM, Monday, July 12th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Ullal Marriageಮಂಗಳೂರು : ಶಕ್ತಿನಗರದಲ್ಲಿ ಸ್ವಂತ ಮನೆಯಲ್ಲಿ ವಾಸವಿದ್ದ ಕುಟುಂಬವದು. ಗೀತಾ ಅವರ ಪತಿ ಕೆಲವು ವರ್ಷಗಳ ಹಿಂದೆಯೇ ದುರಂತ ಸಾವು ಕಂಡಿದ್ದಾರೆ. ದಂಪತಿಗೆ ಇಬ್ಬರು ಹೆಣ್ಮಕ್ಕಳು. ವರ್ಷದ ಹಿಂದೆ ಹಿರಿಯ ಮಗಳಿಗೆ ಮದುವೆಯಾಗಿ ಸಾಲದಿಂದ ಹೊರಬರಲು ಎಲ್ಲವನ್ನೂ ಮಾರಿ, ಖಾಲಿ ಕೈಯೊಂದಿದೆ ನಾಲ್ಕು ತಿಂಗಳ ಹಿಂದೆ ಗೀತಾ ತಾಯಿ, ಮಗಳು ಕವನಾ, ಅತ್ತೆ ರೇಣುಕಾ ಮಂಚಿಲಕ್ಕೆ ಬಂದಿದ್ದಾರೆ. ರೇಣುಕಾ ಅವರೇ ಅಲ್ಲಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರೂ, ಕರೊನಾ ಎರಡನೇ ಅಲೆಯಿಂದ ಅದೂ ಇಲ್ಲದಂತಾಗಿ ಜೀವನವೇ ಕಷ್ಟವಾಗಿದೆ. ಆದರೆ ಯಾರೊಬ್ಬರ ಪರಿಚಯವೂ ಇಲ್ಲದ ಕಾರಣ ಕಣ್ಣೀರಲ್ಲೇ ಕೈತೊಳೆಯುತ್ತಿದ್ದರು.

ಮೆಹಂದಿ ಜೊತೆ ಮದುವೆಯ ಜವಾಬ್ದಾರಿ!

ಎಂ.ಕೆ.ಕುಟುಂಬದಲ್ಲಿರುವ ಆರ್ಥಿಕವಾಗಿ ಹಿಂದುಳಿದ ಹೆಣ್ಮಗಳ ಮದುವೆಗೆ ಕುಟುಂಬಸ್ಥರಿಂದಲೇ ಹಣ ಸಂಗ್ರಹಿಸಿ ಲಕ್ಷ ರೂಪಾಯಿ ನೀಡುತ್ತಿದೆ. ಟ್ರಸ್ಟ್ ಮಾದರಿಯಲ್ಲಿ ಕಾರ್ಯಾಚರಿಸುತ್ತಿದ್ದು, ರಕ್ತದಾನ ಶಿಬಿರವನ್ನೂ ನಡೆಸಿ ಜಿಲ್ಲಾಡಳಿತದಿಂದ ಪುರಸ್ಕಾರ ಪಡೆದಿದೆ. ಅಬ್ದುಲ್ ರಹ್ಮಾನ್ ಕುಟುಂಬದ ಮ್ಯಾರೇಜ್ ಫಂಡ್ ಅಧ್ಯಕ್ಷರಾಗಿದ್ದಾರೆ. ಕುಟುಂಬದ ಸದಸ್ಯ ರಝಾಕ್‌ಗೆ ಮದುಮಗಳು ಕವನಾಳ ಚಿಕ್ಕಪ್ಪ ಸುರೇಶ್ ಪರಿಚಯಸ್ಥರಾಗಿದ್ದಾರೆ. ಇದರ ಆಧಾರದಲ್ಲಿ ಸುರೇಶ್ ಅವರು, ರಝಾಕ್‌ರನ್ನು ಕೆಲವು ದಿನಗಳ ಹಿಂದೆ ಭೇಟಿಯಾಗಿ ಗೀತಾ ಅವರ ಪರಿಸ್ಥಿತಿ ಮತ್ತು ಕವನಾಳ ಮದುವೆಯ ತಿಳಿಸುತ್ತಾರೆ. ತಕ್ಷಣ ಸ್ಪಂದಿಸಿ ರಝಾಕ್, ಮನೆಗೆ ಅಡುಗೆ ಅನಿಲ ಮತ್ತು ಪಡಿತರ ವ್ಯವಸ್ಥೆ ಮಾಡಿ ಹೊಟ್ಟೆ ತಣಿಸುತ್ತಾರೆ.

ರಝಾಕ್ ಅವರು ಮದುವೆಯ ವಿಚಾರವನ್ನು ಮ್ಯಾರೇಜ್ ಫಂಡ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಮತ್ತು ಹಂಝ ಅವರ ಬಳಿ ಹೇಳಿದ್ದರಿಂದ ಅವರು ಗೀತಾರ ಮನೆಗೆ ಭೇಟಿ ನೀಡುತ್ತಾರೆ. ಇನ್ನೇನು ಮದುವೆಗೆ ಕೇವಲ ಹತ್ತು ದಿನಗಳ ಮಾತ್ರ ಇದ್ದು, ನಮ್ಮಲ್ಲಿ ನಯಾಪೈಸೆ ಇಲ್ಲ, ಅದನ್ನು ಮಾಡಲೂ ಸಾಧ್ಯವಿಲ್ಲ. ಕುಟುಂಬಸ್ಥರು ಹತ್ತಿರ ಬರುವುದಿಲ್ಲ. ಮರ್ಯಾದೆ ಉಳಿಸಲು ನಾವು ಸಾವಿನ ದಾರಿ ಕಂಡುಕೊಳ್ಳಲು ಮುಂದಾಗಿದ್ದೇವೆ ಎನ್ನುತ್ತಾರೆ. ಮನಕರಗಿದ ರಹ್ಮಾನ್ ಅವರು, ಅವರಿಗೆ ಮದುವೆಯ ಖರ್ಚುವೆಚ್ಚದ ಭರವಸೆ ನೀಡಿ, ಕುಟುಂಬಸ್ಥರೊಡನೆ ಮತ್ತು ಶಾಸಕ ಖಾದರ್ ಜೊತೆಯೂ ಚರ್ಚಿಸುತ್ತಾರೆ. ಖಾದರ್ ಅವರೂ ಧನಸಹಾಯ ನೀಡುತ್ತಾರೆ.

Ullal Marriage
ಅದರಂತೆ ಶನಿವಾರ ಎಂ.ಕೆ.ಕುಟುಂಬಸ್ಥರಾದ ಹಂಝ ಅವರ ಮನೆಯಲ್ಲೇ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಭರ್ಜರಿ ಮೆಹಂದಿಯೂ ಶಾಸ್ತ್ರವೂ ನಡೆದಿದೆ. ಭಾನುವಾರ ತಲಪಾಡಿ ದೇವಿಪುರದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮದುವೆ ಕಾರ್ಯವೂ ಮುಗಿದಿದೆ. ಹುಡುಗಿಯ ಕಡೆಯಿಂದ ತಾಯಿ, ಅತ್ತೆ, ಚಿಕ್ಕಪ್ಪ, ಬಾವ ಸಹಿತ ಕೇವಲ ಆರು ಮಂದಿ ಮಾತ್ರ ಇದ್ದರೆ, ವರನ ಕಡೆಯಿಂದ ಏಳು ಮಂದಿಯಿದ್ದರೆ, ಎಂ.ಕೆ. ಕಡೆಯಿಂದ ಅಬ್ದುಲ್ ರಹ್ಮಾನ್ ಮತ್ತು ರಝಾಕ್ ಸಹಿತ ಮತ್ತೆ ಒಂದಿಬ್ಬರು ಮಾತ್ರ ಇದ್ದರು. ಮದುವೆ ಶಾಸ್ತ್ರದ ಬಳಿಕ ಕವನಾ ಪತಿಯೊಂದಿಗೆ ಕೇರಳ ತಲುಪಿದ್ದಾಳೆ. ಇದೆಲ್ಲವನ್ನೂ ಕಂಡ ಕವನಾಳ ಚಿಕ್ಕಪ್ಪ ಕಣ್ಣೀರಾದರು. ಚಿನ್ನಾಭರಣ, ವಸ್ತ್ರ, ಮೆಹಂದಿಯ ಊಟೋಪಚಾರ, ಮದುವೆಯ ರ್ಖಚನ್ನು ಖಾದರ್‌ರ ನೆರವು ಬಿಟ್ಟರೆ ಉಳಿದೆಲ್ಲವನ್ನೂ ಎಂ.ಕೆ.ಕುಟುಂಬ ಭರಿಸಿದೆ. ಅತ್ತ ಮದುಮಗಳು ಕರ್ನಾಟಕ ಗಡಿ ದಾಡುತ್ತಲೇ, ಇತ್ತ ಮಸಣ ಸೇರಬೇಕಿದ್ದ ಒಂದು ಜೀವ ನವಜೀವನಕ್ಕೂ ಕಳುಹಿಸಿ, ಹೆತ್ತೊಡಳ ಕಣ್ಣೀರು ಒರೆಸಿ ಮತ್ತೊಂದು ಜೀವ ಉಳಿಸಿದ ತೃಪ್ತ ಭಾವನೆ ಎಂ.ಕೆ.ಕುಟುಂಬಸ್ಥರ ಮುಖದಲ್ಲಿ ಕಂಡು ಬಂದಿದೆ.

`ಸುರೇಶ್ ಅವರು ಗೀತಾ ಮನೆಯ ಪರಿಸ್ಥಿತಿಯ ಬಗ್ಗೆ ತಿಳಿಸಿದಾಗ ನಾವಲ್ಲಿಗೆ ಭೇಟಿ ಕೊಟ್ಟೆವು, ಅಲ್ಲಿನ ಚಿಂತಾಜನಕ ಸ್ಥಿತಿ ಕಂಡು ತುಂಬಾ ಖೇದವಾಯಿತು. ಅಲ್ಲದೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿರುವ ವಿಚಾರ ತಿಳಿಯಿತು. ಈ ಹಿನ್ನೆಲೆಯಲ್ಲಿ ಕುಟುಂಬಕ್ಕಾಗಿ ಅಸ್ತಿತ್ವಕ್ಕೆ ತಂದ ಮ್ಯಾರೇಜ್ ಫಂಡ್ ಹಣ ಕವನಾಳ ಮೆಹಂದಿ, ಮದುವೆ ಖರ್ಚಿಗೆ ಮಾಡಿ ಮನೆಯವರಂತೆ ನೋಡಿಕೊಂಡಿದ್ದೇವೆ’
ಅಬ್ದುಲ್ ರಹ್ಮಾನ್, ಎಂ.ಕೆ.ಮ್ಯಾರೇಜ್ ಫಂಡ್ ಅಧ್ಯಕ್ಷ

`ನಮ್ಮ ಕೈಯಲ್ಲಿ ನಯಾ ಪೈಸೆಯೂ ಇಲ್ಲ, ನಿಗದಿತ ದಿನದಂದು ಮಗಳ ಮದುವೆ ಮಾಡಿಸಲು ಸಾಧ್ಯವಿಲ್ಲ, ಆದರೆ ಮಾನ ಉಳಿಸುವುದು ಅನಿವಾರ್ಯವಾಗಿತ್ತು. ನಾವಿಬ್ಬರು ಪ್ರಾಣ ತ್ಯಾಗ ಮಾಡುವುದೊಂದೇ ದಾರಿಯಾದಾಗ ಯಾರೂ ಮಾಡಲಾಗದಂತಹ ಸಹಾಯ ಎಂ.ಕೆ.ಕುಟುಂಬಸ್ಥರು ಮಾಡಿದ್ದಾರೆ’
ಗೀತಾ, ವಿವಾಹಿತೆ ಕವನಾಳ ತಾಯಿ

Ullal marriage

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English