ರೇಡಿಯೋ ಜಾಕಿಗಳ ಮೂರ್ಖತನಕ್ಕೆ ದಾದಿ ಬಲಿ

5:12 PM, Friday, December 28th, 2012
Share
1 Star2 Stars3 Stars4 Stars5 Stars
(No Ratings Yet)
Loading...

Jacintha Saldanhaಮಂಗಳೂರು : ಗರ್ಭಿಣಿಯಾಗಿರುವ ಕೇಂಬ್ರಿಜ್ ರಾಜಕುಮಾರಿ ಕೇಟ್ ಮಿಡ್ಲ್ ಟನ್ ಳ ಖಾಸಗಿ ಮಾಹಿತಿಯನ್ನು ಪಡೆಯಲು ರೇಡಿಯೋ ಆರ್ ಜೆಗಳು ಮಾಡಿದ ಕುಚೇಷ್ಟೆ ಒಬ್ಬ ಪ್ರತಿಭಾವಂತ, ಹೃದಯವಂತ ಕರಾವಳಿ ಮೂಲದ ದಾದಿಯೊಬ್ಬರು ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು. ಹೌದು. ನರ್ಸ್ ಜೆಸಿಂತಾ ಸಲ್ಡಾನಾ ಈಗಿಲ್ಲ…ಎನ್ನುವ ಸುದ್ದಿಯ ಮೂಲಕ ಉಡುಪಿಯ ಜಿಲ್ಲೆಯ ಶಿರ್ವದ ಮನೆಯೊಂದರಲ್ಲಿ ದುಃಖ ಮಡುಗಟ್ಟಿ ಹೋಗಿತ್ತು. ಭಾರತದವರು ಅದರಲ್ಲೂ ಕರಾವಳಿಗರು ಮಾನವೀಯತೆ, ಸತ್ಯಾಸಂದತೆಗೆ ಹೆಚ್ಚು ಒದ್ದಾಟ ಮಾಡುವ ಮನಸ್ಸಿನವರು ಇದೇ ಕಾರಣದಿಂದ ಜೆಸಿಂತಾ ಬದುಕಿಗೆ ಪೂರ್ಣ ವಿರಾಮ ಬಿದ್ದುಬಿಟ್ಟಿದೆ .

ಅಂದಹಾಗೆ ಶಿರ್ವ ಗ್ರಾಮದ ಮಂಚಕಲ್ ಸೊರ್ಕಳ ನಿವಾಸಿ ಕಾರ್ಮಿನ್ ಬರ್ಬೋಜ ಅವರ ಪುತ್ರ ಲಂಡನ್ ನಲ್ಲಿ ನೆಲೆಸಿರುವ ಬೆನೆಡಿಕ್ಟ್ ಬರ್ಬೋಜ ಅವರ ಪತ್ನಿ ಜೆಸಿಂತಾ ಸಲ್ದಾನಾ. ಬೆನೆಡಿಕ್ಟ್ ಅವರು ಲಂಡನ್ ನ ಸೂಪರ್ ಮಾರ್ಕೆಟ್ ನಲ್ಲಿ ಅಕೌಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಜೆಸಿಂತಾ ಲಂಡನ್ ನ ಕಿಂಗ್ ಎಡ್ವರ್ಡ್ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದರು. ಬೆನೆಡಿಕ್ಟ್ ಹಾಗೂ ಜೆಸಿಂತಾ ಅವರ ಮದುವೆ 19 ವರ್ಷಗಳ ಹಿಂದೆ ನಡೆದಿತ್ತು. ಆರಂಭದಲ್ಲಿ ಮಸ್ಕತ್ ನಲ್ಲಿ ಕೆಲವು ಕಾಲ ವಾಸವಿದ್ದ ಈ ದಂಪತಿ, ಒಂಬತ್ತು ವರ್ಷಗಳಿಂದ ಮಗ ಜುನಾಲ್ (16) ಮತ್ತು ಮಗಳು ಲೀಶಾ (14) ಜತೆ ಲಂಡನ್ ನಲ್ಲೇ ನೆಲೆಸಿದ್ದಾರೆ. ಈ ಕುಟುಂಬ ಎರಡು ವರ್ಷಗಳಿಗೊಮ್ಮೆ ಊರಿನ ಮನೆಗೆ ಬಂದು ಹೋಗುತ್ತಿದ್ದು, ಕಳೆದ ವರ್ಷದ ಡಿಸೆಂಬರ್ ನಲ್ಲಿ ಕೊನೆಯ ಬಾರಿ ಬಂದಿತ್ತು.

ನಕಲಿ ಕರೆಗೆ ಅಸಲಿ ಉತ್ತರ:

ಡಿ.5 ರಂದು ಮುಂಜಾನೆ 5. 30ರ ವೇಳೆಗೆ ಆಸ್ಟ್ರೇಲಿಯಾ ಮೂಲದ ರೇಡಿಯೋ ವಾಹಿನಿಯವರು ನಕಲಿ ಕರೆ ಮಾಡಿ ನಾವು ರಾಜಮನೆತನದವರು ಮಾತನಾಡುವುದು. ರಾಜಕುಮಾರಿ ಕೇಟ್ ಳ ಆರೋಗ್ಯದ ಕುರಿತಾಗಿ ಮಾತನಾಡಲಿದೆ ಎಂದಿದ್ದರು. ಜೆಸಿಂತಾ ಮಾತನಾಡಿದಾಗ ನಾನು ಕೇಟ್ ಳ ಅಜ್ಜಿ ಮಾತನಾಡುವುದು. ಕೇಟ್ ಳ ಆರೋಗ್ಯ ಸ್ಥಿತಿ ಹೇಗಿದೆ ಎಂದು ವಿಚಾರಿಸಿದ್ದರು. ಕರೆ ಸ್ವೀಕರಿಸಿ ಮಾತನಾಡಿದ್ದ ಜೆಸಿಂತಾ ಅವರು ಅನಂತರ ಕರೆಯನ್ನು ತನ್ನ ಸಹೋದ್ಯೋಗಿಗೆ ವರ್ಗಾಯಿಸಿದ್ದರು.

ಅವರು ರಾಜಕುಮಾರಿ ಕೇಟ್ ಆರೋಗ್ಯದ ಕುರಿತಾಗಿ ಕೇಳಿದ್ದರು. ಅವರಿಗೆ ಮಾಹಿತಿಯನ್ನು ನೀಡಿದ್ದರು. ಆ ಕ್ಷಣದಿಂದಲೇ ಆಸ್ಟ್ರೇಲಿಯ ಮೂಲದ ರೇಡಿಯೋ ವಾಹಿನಿಯು ಈ ಸುದ್ದಿಯನ್ನು ಪ್ರಸಾರ ಮಾಡಿತ್ತು. ನಕಲಿ ಕರೆಯ ಮೂಲಕ ಕೇಟ್ ಆರೋಗ್ಯದ ಮಾಹಿತಿ ಪಡೆದಿದ್ದಾಗಿ ರೇಡಿಯೊ ಡಿಜೆಗಳು ಪದೇ ಪದೇ ಹಾಸ್ಯವಾಗಿ ಪ್ರಕಟಿಸುತ್ತಿದ್ದರು. ರೇಡಿಯೋದವರ ತಮಾಷೆ ಕರೆ ಮತ್ತು ಅದು ಪ್ರಕಟವಾಗುತ್ತಿದ್ದ ರೀತಿ ಯಿಂದ ನೊಂದ ಹಾಗೂ ಇದರಿಂದ ಆಸ್ಪತ್ರೆ ಆಡಳಿತ ಮಂಡಳಿ ಮತ್ತು ರಾಜಕುಟುಂಬ ಏನಾದರೂ ಕ್ರಮ ತೆಗೆದುಕೊಳ್ಳಬಹುದೆಂಬ ಚಿಂತೆಯಿಂದ ಜೆಸಿಂತಾ ಸಾವಿನ ಹಾದಿ ತುಳಿದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಜೆಸಿಂತಾ ನಮ್ಮಿಂದ ದೂರವಾದಳು…: ಶಿರ್ವ ಸೊರ್ಕಳದ ಹಳ್ಳಿಯ ಮನೆಯಲ್ಲಿರುವ ಜೆಸಿಂತಾ ಅತ್ತೆ ಕಾರ್ಮಿನ್ ಬರ್ಬೋಜ ಅವರಿಗೆ ಮಗ ಬೆನೆಡಿಕ್ಟ್ ಬರ್ಬೋಜಾ ಅವರು ದೂರವಾಣಿ ಮೂಲಕ ಜೆಸಿಂತಾ ಸಾವಿನ ಸಂಗತಿ ತಿಳಿಸಿದ್ದರು. ಬೆನೆಡಿಕ್ಟ್ ವರು ತನ್ನ ತಾಯಿಗೆ, ಜೆಸಿಂತಾ ನಮ್ಮಿಂದ ದೂರವಾದಳು ಎಂದಷ್ಟೇ ಹೇಳಿ ಒಂದೇ ಸವನೆ ಅಳತೊಡಗಿದ್ದರು. ನನಗೆ ಕೂಡ ಲಂಡನ್ ಪೊಲೀಸರು ತಿಳಿಸಿದ ಬಳಿಕವೇ ಪತ್ನಿ ಸಾವಿನ ವಿಚಾರ ಗೊತ್ತಾಗಿದೆ. ನನಗೆ ಆಕೆ ನರ್ಸ್ ಆಗಿ ಕೆಲಸ ಮಾಡುತ್ತಿರುವ ಆಸ್ಪತ್ರೆಯಲ್ಲೇ ಸಾವಿಗೀಡಾಗಿದ್ದಾಳೆ ಎಂಬ ವಿವರ ಮಾತ್ರ ಲಭ್ಯವಾಗಿದೆ ಎಂದಷ್ಟೇ ತನ್ನ ತಾಯಿಗೆ ದೂರವಾಣಿ ಮೂಲಕ ಹೇಳಿಕೊಂಡಿದ್ದಾರೆ. ಆಕೆಯ ಸಾವಿಗೆ ಕಾರಣವೇನು ಮತ್ತು ಯಾವ ರೀತಿ ಸಾವು ಸಂಭವಿಸಿತು ಎನ್ನುವ ಮಾಹಿತಿಗಳು ನಮಗೆ ಸಿಕ್ಕಿಲ್ಲ ಎನ್ನುತ್ತಾರೆ ಕಾರ್ಮಿನ್ ಬರ್ಬೋಜಾ.

ಜೆಸಿಂತಾ ಆತ್ಮಹತ್ಯೆ ಮಾಡುವವರಲ್ಲ:

ಆದರೆ ಜೆಸಿಂತಾ ಅತ್ತಿಗೆ ಐರೀನ್ ಡಿಸೋಜಾ ಅವರು ಹೇಳುವ ಪ್ರಕಾರ ಜೆಸಿಂತಾ ಅವರು ಆತ್ಮಹತ್ಯೆ ಮಾಡುವಷ್ಟು ದುರ್ಬಲ ಹೃದಯದವರಲ್ಲ. ಸೇವಾಮನೋಭಾವನೆಯಲ್ಲಿ ಎಷ್ಟು ಸೂಕ್ಷ್ಮಮತಿಯಾಗಿದ್ದರೂ ಇತರೆ ಕೆಲಸಗಳಲ್ಲಿ ಅಷ್ಟೇ ಧೈರ್ಯವಂತೆಯೂ ಆಗಿದ್ದರು. ಆತ್ಮಹತ್ಯೆ ಮಾಡಿಕೊಂಡಿರುವುದು ನಂಬಲು ಅಸಾಧ್ಯವಾದ ಮಾತು.

ಹಲವು ಬಡವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಹಾಯಹಸ್ತ ಮಾಡಿದ ಜೆಸಿಂತಾ ಕಳೆದ ವರ್ಷದ ಕ್ರಿಸ್ ಮಸ್ಗೆ ಆಗಮಿಸಿದ್ದ ಸಂದರ್ಭ ಕುಟುಂಬ ಸಮೇತ ತಿಂಗಳ ಕಾಲ ಸುತ್ತಾಡಿದ್ದೆವು, ಒಂದು ರಾತ್ರಿಯಿಡೀ ಕುಳಿತು ಪಾರ್ಟಿ ಮಾಡಿದ್ದೆವು ಎಂಬುದನ್ನು ಜೆಸಿಂತಾ ಅತ್ತಿಗೆ ಅಳುತ್ತಲೇ ವಿವರಿಸಿದರು.

ಆಸ್ಪತ್ರೆ ಕೊಟ್ಟ ಮಾತು:

ಜೆಸಿಂತಾ ಕಿಂಗ್ ಎಡ್ವರ್ಡ್ ಆಸ್ಪತ್ರೆಯಲ್ಲಿ ನಾಲ್ಕು ವರ್ಷಗಳಿಗಿಂತ ಹೆಚ್ಚು ಸಮಯ ಕೆಲಸ ಮಾಡಿದ್ದರು. ಅವರು ಒಬ್ಬ ಅತ್ಯುತ್ತಮ ನರ್ಸ್ ಆಗಿದ್ದರು. ಎಲ್ಲರ ಗೌರವಾದರಗಳಿಗೆ ಪಾತ್ರರಾಗಿದ್ದರು. ಅವರ ಸಾವಿನಿಂದ ಆಸ್ಪತ್ರೆಯ ಪ್ರತಿಯೊಬ್ಬ ಸಹೋದ್ಯೋಗಿ ಆಘಾತಗೊಂಡಿದ್ದಾರೆ. ಯಾವುದೇ ಸಂದರ್ಭದಲ್ಲೂ ಘಟನೆ ಕುರಿತು ಅರಮನೆಯಿಂದ ಆಸ್ಪತ್ರೆಗೆ ದೂರು ಬಂದಿಲ್ಲ. ಜೆಸಿಂತಾ ಆಸ್ಪತ್ರೆಗೆ ಬಂದ ಸುಳ್ಳು ಕರೆಗೆ ಬಲಿಯಾದರೆಂದು ನಾವು ದೃಢಪಡಿಸಬಲ್ಲೆವು. ಆಸ್ಪತ್ರೆ ಈ ಸಂಕಷ್ಟ ಕಾಲದಲ್ಲಿ ಅವರ ಬೆಂಬಲಕ್ಕೆ ನಿಂತಿತ್ತು ಎಂದು ಕಿಂಗ್ ಎಡ್ವರ್ಡ್ ಆಸ್ಪತ್ರೆ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ.

ಘಟನೆಗೆ ಪ್ರಧಾನಿ ಪ್ರತಿಕ್ರಿಯೆ:

ಘಟನೆ ಕುರಿತು ಆಸ್ಟ್ರೇಲಿಯದಲ್ಲಿ ಎಷ್ಟು ಆಕ್ರೋಶ ಎದ್ದಿದೆಯೆಂದರೆ ಸ್ವತಃಪ್ರಧಾನಿ ಜೂಲಿಯಾ ಗಿಲಾರ್ಡ್ ಪ್ರತಿಕ್ರಿಯೆ ನೀಡಬೇಕಾಯಿತು. ಇದೊಂದು ಅತ್ಯಂತ ದಾರುಣ ಘಟನೆಯೆಂದು ಅವರು ಬಣ್ಣಿಸಿದರು. `ಜೆಸಿಂತಾ ಸಾವಿನ ಸುದ್ದಿ ತಿಳಿದು ಕ್ಯಾಂಬ್ರಿಜ್ ನ ಡ್ಯೂಕ್ ಮತ್ತು ಡಚೆಸ್ ಗೆ ತೀವ್ರ ದುಃಖವಾಗಿದೆ. ಜೆಸಿಂತಾ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ನೀಡುವಂತೆ ಅವರು ದೇವರಲ್ಲಿ ಪ್ರಾರ್ಥಿಸುತ್ತಾರೆ ಎಂದು ಸೈಂಟ್ ಜೇಮ್ಸ್ ಅರಮನೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಮೃತಪಟ್ಟ ನರ್ಸ್ ಜೆಸಿಂತಾ ಮೂಲತಃ ಮಂಗಳೂರಿನ ವಲೇನ್ಸಿಯಾದವರು. ಅವರು 1984ರಲ್ಲಿ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನಿಂದ ಪದವಿ ಪಡೆದಿದ್ದರು. ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ತಂದೆ ಲಾರೆನ್ಸ್ ಸಲ್ದಾನಾ ಅವರನ್ನು ಬಾಲ್ಯದಲ್ಲೇ ಕಳೆದುಕೊಂಡಿದ್ದರು. ಸಲ್ಡಾನಾ ದಂಪತಿಗಳಿಗೆ ಆರು ಜನ ಮಕ್ಕಳು. ಜೆಸಿಂತಾ ನಾಲ್ಕನೆಯವರು. ಮೇಬಲ್, ಐವಾನ್, ಜಾಯ್, ಗ್ಲಾಡಿಸ್ ಮತ್ತು ನವೀನ್ ಉಳಿದ ಐವರು ಮಕ್ಕಳು. ಫಾದರ್ ಮುಲ್ಲರ್ ಆಸ್ಪತ್ರೆಯ ನರ್ಸಿಂಗ್ ವಿಭಾಗದ ಮುಖ್ಯಸ್ಥೆ ಸಿಸ್ಟರ್ ಐಲೀಲ್ ಮಥಾಯಸ್, `ಕಲಿಯುವಾಗ ಮತ್ತು ನಂತರ ಕೆಲಸ ಮಾಡುವಾಗ ಐದು ವರ್ಷ ನಾವು ಜತೆಗಿದ್ದೆವು. ಓದಿನ ನಂತರ ಮೂರು ವರ್ಷ ಕಡ್ಡಾಯ ಸೇವೆ ಸಲ್ಲಿಸಿದ್ದಳು’ ಎಂದು ನೆನಪು ಮಾಡಿಕೊಂಡರು. `ಆಕೆ ಶ್ರಮಜೀವಿ. ಪಠ್ಯೇತರ ಚಟುವಟಿಕೆಯಲ್ಲೂ ಚುರುಕಾಗಿದ್ದಳು. ಕೊನೆಯ ಬಾರಿ ದೇಶಕ್ಕೆ ಬಂದಿದ್ದಾಗ, ನನ್ನನ್ನು ಭೇಟಿಯಾಗಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಸ್ವಲ್ಪ ಹಣ ಕೊಟ್ಟಿದ್ದಳು’ ಎಂದರು. ಜೆಸಿಂತಾ ಸಲ್ಡಾನಾ ಅವರ ಸಹೋದರ ನವೀನ್ ಸಲ್ಡಾನಾ ವೆಲೆನ್ಸೀಯಾದಲ್ಲಿ ವಾಸವಾಗಿದ್ದಾರೆ. ಖ್ಯಾತ ಶಿಪ್ಪಿಂಗ್ ಕಂಪನಿಯಲ್ಲಿ ಕೆಲಸದಲ್ಲಿರುವ ನವೀನ್ ಸಲ್ಡಾನಾ ಮನೆಗೆ ಈ ವರ್ಷದ ಕ್ರಿಸ್ಮಸ್ ಹಬ್ಬದ ಸಂದರ್ಭ ಜೆಸಿಂತಾ ಸಹೋದರನ ಮನೆಗೆ ಗಂಡ ಹಾಗೂ ಮಕ್ಕಳ ಜತೆಯಲ್ಲಿ ಬರುವ ಕುರಿತು ಯೋಜನೆ ರೂಪಿಸಿದ್ದರು. ಸಹೋದರ ನವೀನ್ ಗೆ ಜೆಸಿಂತಾ ಮೇಲೆ ಅಪಾರ ಪ್ರೀತಿ ಇದೆ ಕಾರಣದಿಂದ ಜೆಸಿಂತಾರನ್ನು `ಜೆಸ್ ‘ಎಂದೇ ಕರೆಯುತ್ತಿದ್ದರು.

ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಕೊಡುವ ಬರದಲ್ಲಿ ಸಾಮಾಜಿಕ ತಾಣಗಳಿಂದ ಜೆಸಿಂತಾ ಸಲ್ಡಾನಾ ಚಿತ್ರವನ್ನು ತೆಗೆದುಕೊಂಡು ಪ್ರಸಾರ ಮಾಡಿದರು. ಆದರೆ ನಿಜಕ್ಕೂ ಲಂಡನ್ ನಲ್ಲಿ ಮೃತಪಟ್ಟ ನರ್ಸ್ ಜೆಸಿಂತಾ ಬದಲಾಗಿ ಕಿನ್ನಿಗೋಳಿ ಐಕಳ ನಿವಾಸಿ ಜೆಸಿಂತಾ ಸಲ್ಡಾನಾ ಚಿತ್ರವನ್ನು ಮಾಧ್ಯಮಗಳು ತಪ್ಪಾಗಿ ಪ್ರಕಟಿಸಿದ್ದರು. ಈ ವಿಷಯ ಕಿನ್ನಿಗೋಳಿಯ ಐಕಳದಲ್ಲಿದ್ದ ಜೆಸಿಂತಾ ಅವರ ಸಂಬಂಧಿಕರಿಗೆ ತಿಳಿದು ಅಲ್ಲಿಂದ ಪೋನ್ ಕರೆಗಳು ಬಂದಾಗ ಜೆಸಿಂತಾ ಮನೆಯವರು ಗಲಿಬಿಲಿಗೊಂಡರು. ನಂತರ ಭಾವಚಿತ್ರವನ್ನು ತಪ್ಪಾಗಿ ಮುದ್ರಿಸಿದ ಮಾಧ್ಯಮಗಳಿಗೆ ಜೆಸಿಂತಾ ಮನವರಿಕೆ ಮಾಡಿಕೊಟ್ಟರು. ಬಳಿಕ ತಪ್ಪು ತಿದ್ದಿಕೊಳ್ಳದ ಮಾಧ್ಯಮಗಳ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಲು ಪ್ರಯತ್ನಿಸಿದರು. ಐಕಳದ ಈಗ ಮಂಗಳೂರಿನ ಬಿಜೈಯಲ್ಲಿರುವ 63ರ ಹರೆಯದ ಜೆಸಿಂತಾ ಸಲ್ಡಾನಾ ಹೇಳುವಂತೆ ` ಮಾಧ್ಯಮಗಳಲ್ಲಿ ನರ್ಸ್ ಜೆಸಿಂತಾಳ ಬದಲಾಗಿ ನನ್ನ ಚಿತ್ರಗಳನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ನಾನು ಸಂಬಂಧಪಟ್ಟವರಿಗೆ ತಿಳಿಸಿದೆ. ಆದರೆ ಅದ್ದರಿಂದ ಏನೂ ಪ್ರಯೋಜನವಾಗಿಲ್ಲ. ಪೊಲೀಸ್ ಠಾಣೆಗೆ ದೂರು ದಾಖಲಿಸಲು ಪ್ರಯತ್ನಿಸಿದೆ ಎನ್ನುತ್ತಾರೆ ಅವರು.

ಜೆಸ್ ಭಾರತದಲ್ಲಿಯೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು !

ಆಸ್ಟ್ರೇಲಿಯನ್ ರೇಡಿಯೋ ವಾಹಿನಿಯೊಂದರ ಜಾಕಿಗಳ ತಮಾಷೆ ಕರೆಯ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವರೆನ್ನಲಾದ ಲಂಡನ್ ನ ಏಳನೆಯ ಕಿಂಗ್ ಎಡ್ವರ್ಡ್ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಮಂಗಳೂರು ಮೂಲದ ಜೆಸಿಂತಾ ಸಲ್ದಾನ ರವರ ನಿಗೂಢ ಸಾವು ಮತ್ತು ಅವರ ಶರೀರ ಸಂಸ್ಕಾರದ ನಂತರ ಜೆಸಿಂತಾ ಬದುಕಿನ ಕುರಿತಾದ ಒಂದೊಂದೇ ಘಟನೆಗಳು ಬಹಿರಂಗ ಗೊಳ್ಳತೊಡಗಿವೆ.

ಮಂಗಳೂರಿನ ಚಿಲಿಂಬಿ ನಿವಾಸಿಯಾಗಿದ್ದ ಜೆಸಿಂತಾ ಸಲ್ದಾನಾ ಕಂಕನಾಡಿಯ ಫಾದರ್ ಮುಲ್ಲಸರ್ ಆಸ್ಪತ್ರೆಯಲ್ಲಿ ನರ್ಸಿಂಗ್ ತರಬೇತಿ ಪಡೆದಿದ್ದರು. ಉಡುಪಿ ಜಿಲ್ಲೆಯ ಶಿರ್ವ ಪೋರ್ಕಳ ಎಂಬಲ್ಲಿನ ಶ್ರೀಮಂತ ಕುಟುಂಬದ ಪದವೀಧರ ಯುವಕ ಮಸ್ಕತ್ ನಲ್ಲಿ ಉದ್ಯೋಗದಲ್ಲಿದ್ದ ಬೆನಡಿಕ್ಟ್ ಬರ್ಬೋಜಾ ಎಂಬವರನ್ನು ಮದುವೆಯಾಗಿದ್ದ ಜೆಸಿಂತಾ ಬಳಿಕ ಮಸ್ಕತ್ ನ ಆಸ್ಪತ್ರೆಯಲ್ಲಿ ದಾದಿಯಾಗಿ ವೃತ್ತಿ ಜೀವನ ನಡೆಸುತ್ತಿದ್ದರು.

ಪತಿ ಬೆನಡಿಕ್ಟ್ ಲಂಡನಿಗೆ ಸ್ಥಳಾಂತರ ಗೊಂಡಾಗ ಜೆಸಿಂತಾರೂ ಲಂಡನಿಗೆ ಬಂದು ಅಲ್ಲಿನ ರಾಜಮನೆತನಕ್ಕೆಂದೇ ಮೀಸಲಾಗಿದ್ದ ಏಳನೆಯ ಕಿಂಗ್ ಎಡ್ವರ್ಡ್ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. 46ರ ಹರೆಯದ ಬೆನಡಿಕ್ಟ್ ದಂಪತಿಗೆ ಹದಿನಾರರ ಹರೆಯದ ಮಗ ಜುನಾಲ್ ಮತ್ತು ಹದಿನಾಲ್ಕರ ಹರೆಯದ ಸಾಕುಮಗಳು ಲಿಶಾ ಎಂಬ ಮಕ್ಕಳಿದ್ದು ಲಂಡನ್ ನಲ್ಲೇ ವಿದ್ಯಾಭ್ಯಾಸ ಪಡೆಯುತ್ತಿದ್ದರು.

ಜೆಸಿಂತಾ ಸಲ್ದಾನ ಸುಮಾರು ಎರಡು ವಾರಗಳ ಹಿಂದೆ ಲಂಡನಿನಲ್ಲಿರುವ ತನ್ನ ವಾಸದ ಕೊಠಡಿಯಲ್ಲಿ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಇಡೀ ಪ್ರಪಂಚದ ಗಮನ ಸೆಳೆದರು. ಆಸ್ಟ್ರೇಲಿಯಾದ ರೇಡಿಯೋ ಟುಡೇ ಎಫ್ಎಂನ ನಿರೂಪಕರಿಬ್ಬರು ತಮಾಷೆ ಕರೆಯೊಂದನ್ನು ಮಾಡಿ ಬ್ರಿಟನ್ನಿನ ಯುವ ರಾಣಿ ಕೇಟ್ರ ಆರೋಗ್ಯ ವಿಚಾರಿಸಿ ನಡೆದ ಸಂಭಾಷಣೆಯನ್ನು ವಿಡಂಬನಾತ್ಮಕವಾಗಿ ಪ್ರಚಾರಿಸಿದರೆಂದೂ, ಇದರಿಂದ ಮನನೊಂದ(ಅಥವಾ ಹೆದರಿದ) ಜೆಸಿಂತಾ ಸಾವಿಗೆ ಶರಣಾದರೆಂದೂ ಹೇಳಲಾಗಿತ್ತು.

ಆದರೆ ಕರೆ ಸ್ವೀಕರಿಸಿದ್ದ ಜೆಸಿಂತಾ ಕರೆಯನ್ನು ಸಹೋದ್ಯೋಗಿಗೆ ವರ್ಗಾಯಿಸಿದ್ದಾರೆಂದು, ಮೇಲ್ನೋಟಕ್ಕೆ ಜೆಸಿಂತಾ ಆತ್ಮಹತ್ಯೆಯಲ್ಲಿ ಆಸ್ಟ್ರೇಲಿಯನ್ ರೇಡಿಯೋದ ನೇರಪಾತ್ರ ಕಂಡುಬರುತ್ತಿಲ್ಲವೆಂದು ತನಿಖೆ ನಡೆಸಿದ್ದ ಸ್ಕಾಟ್ ಲ್ಯಾಂಡ್ ಯಾರ್ಡ್ ಪೊಲೀಸರು ಅಭಿಪ್ರಾಯಪಟ್ಟಿದ್ದರು. ಜೆಸಿಂತಾ ಮರಣದ ಕುರಿತು ಬ್ರಿಟನ್, ಆಸ್ಟ್ರೇಲಿಯಾ ಸರಕಾರಗಳ ಸಹಿತ ವಿಶ್ವದ ಎಲ್ಲೆಡೆಯಿಂದ ಸಂತಾಪ, ಸಂದೇಹ, ಆಕ್ರೋಶ ವ್ಯಕ್ತವಾಗಿತ್ತು. ಭಾರೀ ವಿಳಂಬವಾಗಿ ಭಾರತಕ್ಕೆ ಡಿ.16ರಂದು ತಂದ ಮೃತದೇಹವನ್ನು ಡಿ.17 ರಂದು ಶಿರ್ವದ ಚರ್ಚ್ ನಲ್ಲಿ ದಫನ ಮಾಡಲಾಗಿತ್ತು.

ಈ ನಡುವೆ ಜೆಸಿಂತಾ ಅಂತ್ಯಸಂಸ್ಕಾರದ ಬಳಿಕ ಆಕೆಯ ಕುಟುಂಬದ ಆಪ್ತವಲಯದಿಂದಲೇ ಜೆಸಿಂತಾ ಬದುಕಿನ ಬಗ್ಗೆ ವಿವರಗಳು ಬಹಿರಂಗಗೊಳ್ಳತೊಡಗಿವೆ. ಪುಕ್ಕಲು ಹೃದಯದವಳೆಂದೇ ಗುರುತಿಸಲ್ಪಡುತ್ತಿದ್ದ ಜೆಸಿಂತಾ, ಈ ಹಿಂದೆ ಎರಡು ಭಾರಿ ಮಂಗಳೂರಿನಲ್ಲಿ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದರೂ ಬದುಕುಳಿದಿದ್ದಳೆಂದು ಅವರು ವಿವರಿಸಿದ್ದಾರೆ.

ಈ ವರ್ಷದ ಜನವರಿ ತಿಂಗಳಲ್ಲಿ ಶಿರ್ವ ಸಮೀಪದ ಎಲ್ಲೂರಿನಲ್ಲಿ ನಡೆದ ಪತಿ ಬೆನಡಿಕ್ ರ ಅಕ್ಕನ ಮಗನ ಮದುವೆಗೆಂದು ಊರಿಗೆ ಬಂದಿದ್ದ ಜೆಸಿಂತಾ, ಮಂಗಳೂರಿನಲ್ಲಿ ಜನವರಿ 6 ರಂದು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರೆನ್ನಲಾಗಿದೆ. ಆಕೆಯನ್ನು ಬೆಂದೂರಿನ ಆಸ್ಪತ್ರೆಗೆ ಸೇರಿಸಿ ಬಳಿಕ ಬಿಡುಗಡೆಗೊಳಿಸಲಾಗಿತ್ತು. ಇದಾದ ಎರಡೇ ದಿನದ ಬಳಿಕ ಜನವರಿ 8 ರಂದು ವಿಪರೀತ ನಿದ್ರೆ ಮಾತ್ರೆ ಸೇವಿಸಿ ಈಕೆ ಪುನರಪಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.

ಕಂಕನಾಡಿಯ ಆಸ್ಪತ್ರೆಯೊಂದಕ್ಕೆ ದಾಖಲಾದ ಈಕೆ ಅಲ್ಲಿ ಮೂರು ದಿನಗಳವರೆಗೆ ತುರ್ತು ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆದು ಬಳಿಕ ಕುಟುಂಬ ಸದಸ್ಯರ ?ಮನವಿ?ಯ ಮೇರೆಗೆ ?ಮಾನಸಿಕ ಅಸ್ವಸ್ಥೆ?ಯ ಹೆಸರಿನಲ್ಲಿ ಅದೇ ಆಸ್ಪತ್ರೆಯ ಮನೋಚಿಕಿತ್ಸಾ ವಾರ್ಡ್ ವರ್ಗಾಯಿಸಲ್ಪಟ್ಟಿದ್ದರೆಂದು ಆಪ್ತ ಮೂಲಗಳು ಹೇಳುತ್ತಿವೆ. ಜೆಸಿಂತಾ ಸಲ್ದಾನಾರ ಈ ನಿರ್ಧಾರ ಗಳಿಗೆ ಆಕೆ ತನ್ನ ತವರಿನ ನಿಕಟ ಸಂಬಂಧಿಯೋರ್ವರೊಂದಿಗೆ ಹೊಂದಿದ್ದ ಮನಸ್ತಾಪವೇ ಕಾರಣವಾದಂತಿತ್ತು ಎಂದು ಅವರು ಸಂದೇಹ ವ್ಯಕ್ತಪಡಿಸಿದ್ದಾರೆ.

ಇದೊಂದು ತೆರನಾದರೆ ಇನ್ನೊಂದು ಬಗೆಯಲ್ಲಿ ಉನ್ನತಮಟ್ಟದಲ್ಲಿ ಹರಿದಾಡುತ್ತಿರುವ ವದಂತಿಯೊಂದರ ಪ್ರಕಾರ, ಜೆಸಿಂತಾ ಸಾವಿನ ಹಿಂದೆ ಅಂತಾರಾಷ್ಟ್ರೀಯ ಬೇಹುಗಾರಿಕೆಯ ಕೊಂಡಿಗಳು ಕೆಲಸ ಮಾಡಿದ್ದಿರಬಹುದೇ? ಎಂಬ ಸಂದೇಹವನ್ನು ಹುಟ್ಟುಹಾಕಿವೆ. ಬ್ರಿಟನ್ ಅರಸೊತ್ತಿಗೆಯ ಆಗುಹೋಗುಗಳನ್ನು ಸಂಗ್ರಹಿಸಲು ಅಮಾಯಕ ಜೆಸಿಂತಾರನ್ನು ಆಕೆಗೆ ಅರಿವಿಲ್ಲದಂತೆಯೇ ಅನ್ಯರಾಷ್ಟ್ರಗಳ ಬೇಹುಗಾರಿಕೆ ಬಳಸಿಕೊಂಡಿರಬಹುದೇ ಮತ್ತು ?ಒಂದು ಹಂತ? ತಲುಪಿದ ಬಳಿಕ ಜೆಸಿಂತಾ ಸಾವಿನೊಂದಿಗೆ ಅದು ಸಮಾಪ್ತಿಯಾಗಿರ ಬಹುದೇ? ಎಂಬುದು ಪ್ರಶ್ನೆಯಾಗಿದೆ.

ಅತ್ತ ನೆರೆಯ ಬ್ರಿಟನ್ ಸನಿಹದ ಅಯರ್ ಲ್ಯಾಂಡ್ ನಲ್ಲಿ ಕ್ರಿಶ್ಚಿಯನ್ ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದಂತೆ ಅಬಾರ್ಷನ್ ನಿರಾಕರಿಸಲ್ಪಟ್ಟ ಉತ್ತರಕರ್ನಾಟಕ ಮೂಲದ ಅಮಾಯಕ ದಂತ ವೈದ್ಯೆಯೋರ್ವಳು ಅಮಾನುಷವಾಗಿ ಸಾವನ್ನಪ್ಪಿದ್ದು ಒಂದೆರಡು ದಿನದ ಸುದ್ದಿಯಾದ ಈ ಪ್ರಪಂಚದಲ್ಲಿ, ಆತ್ಮಹತ್ಯೆಗೈದುಕೊಂಡರೆನ್ನಲಾದ ಜೆಸಿಂತಾ ಎಂಬ ಹೆಣ್ಣುಮಗಳ ಸಾವು ಅದೇಗೆ ಬ್ರಿಟನ್, ಆಸ್ಟ್ರೇಲಿಯಾ ಸಹಿತ ಹಲವಾರು ದೇಶಗಳ ಮುಖ್ಯಸ್ಥರ ನಿದ್ದೆಗೆಡಿಸಲು ಕಾರಣವಾಯಿತೆಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಸತ್ಯ ಹೊರಬರಲು ಸರಕಾರ ಮತ್ತು ಜೆಸಿಂತಾ ಕುಟುಂಬ ಜತೆಯಾಗಿಯೇ ಬಾಯಿ ಬಿಡಬೇಕಾದೀತೇನೋ?

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English