ಬೆಂಗಳೂರು : ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದ ಹಿರಿಯ ನಟಿ, ಅಭಿನಯ ಶಾರದೆ ಎಂದು ಪ್ರೀತಿಯಿಂದ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದ ಜಯಂತಿ ನಿಧನರಾಗಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಅವರು ಸೋಮವಾರ ನಸುಕಿನ ಜಾವ ಕೊನೆಯುಸಿರೆಳೆದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಕಳೆದ ಕೆಲ ವರ್ಷಗಳಿಂದ ಅಸ್ತಮಾ, ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯ ನಟಿ ಕಳೆದ ವರ್ಷ ಕೋವಿಡ್-19 ಸಮಯದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ 40 ದಿನಗಳ ಕಾಲ ಇದ್ದು ಚೇತರಿಸಿಕೊಂಡು ಮನೆಗೆ ಹಿಂತಿರುಗಿದ್ದರು. ಆದರೆ ಇಂದು ಕೊನೆಯುಸಿರೆಳೆದಿದ್ದಾರೆ.
ಕನ್ನಡ ಸೇರಿದಂತೆ ಹಲವು ಚಿತ್ರರಂಗದಲ್ಲಿ ನಟಿ ಜಯಂತಿಯವರ ನಟಿಸಿದ್ದರು. ಕನ್ನಡದಲ್ಲಿಯೇ 190 ಚಿತ್ರಗಳಲ್ಲಿ ಅಭಿನಯಿಸಿದ್ದ ಜಯಂತಿಯವರು ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಸೇರಿದಂತೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಜೊತೆ 45 ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಜಯಂತಿಯವರದ್ದು.
1950ರಲ್ಲಿ ಬಳ್ಳಾರಿಯಲ್ಲಿ ಜನಿಸಿದ್ದ ಜಯಂತಿಯವರ ಮೂಲ ಹೆಸರು ಕಮಲಾ ಕುಮಾರಿ. ಚಿತ್ರರಂಗಕ್ಕೆ ಬಂದ ನಂತರ ಜಯಂತಿಯಾದರು. ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರೆ, ತಾಯಿ ಸಂತಾನಲಕ್ಷ್ಮಿ ಗೃಹಿಣಿಯಾಗಿ ಮನೆಯಲ್ಲೇ ಇದ್ದರು.
ಜಯಂತಿಯವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ವೈ ಆರ್ ಪುಟ್ಟಸ್ವಾಮಿಯವರ ‘ಜೇನುಗೂಡು’ ಚಿತ್ರದ ಮೂಲಕ. ಅಲ್ಲಿಂದಲೇ ಕಮಲಾ ಕುಮಾರಿ ಜಯಂತಿಯಾಗಿದ್ದು.
ಕನ್ನಡ ಚಿತ್ರರಂಗದಲ್ಲೆ ಮೊದಲ ಬಾರಿಗೆ ಬಿಕಿನಿ ತೊಟ್ಟು ಸುದ್ದಿಯಾಗಿದ್ದ ನಟಿ ಜಯಂತಿಯವರು ತಾವು ನಿರ್ವಹಿಸುವ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದರು, ಪಾತ್ರ ಬೇಡುವ ರೀತಿಯಲ್ಲಿ ಅಭಿನಯಿಸುತ್ತಿದ್ದರು.
ಚಿತ್ರರಂಗದಲ್ಲಿ ಬಹುಬೇಡಿಕೆಯಲ್ಲಿದ್ದಾಗಲೇ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರದ ಒಂದೇ ಒಂದು ಹಾಡಿನಲ್ಲಿ ಕಾಣಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದರು. ಒನಕೆ ಓಬವ್ವನ ಹಾಡಿನಲ್ಲಿ ಜಯಂತಿಯವರ ಅಭಿನಯ ಇಂದಿಗೂ ಜನಪ್ರಿಯ.
ನಟಿ ಜಯಂತಿ, 6 ಬಾರಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು. 1960 ರಿಂದ 1980ರ ದಶಕದವರೆಗೂ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿದ್ದರು. ಎಡಕಲ್ಲು ಗುಡ್ಡದ ಮೇಲೆ, ಮನಸ್ಸಿನಂತೆ ಮಾಂಗಲ್ಯ, ಧರ್ಮ ದಾರಿ ತಪ್ಪಿತ್ತು, ಮಸಣದ ಹೂವು, ಆನಂದ್, ಟುವಿ ಟುವಿ ಟುವಿ ಚಿತ್ರಗಳಿಗೆ ಜಯಂತಿ ರಾಜ್ಯ ಪ್ರಶಸ್ತಿ ಪಡೆದಿದ್ದ ನಟಿ ಜಯಂತಿ, ‘ಮಿಸ್ ಲೀಲಾವತಿ’ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು.
ಕನ್ನಡದಲ್ಲಿ ಡಾ ರಾಜ್ ಕುಮಾರ್, ವಿಷ್ಣುವರ್ಧನ್, ಉದಯ್ ಕುಮಾರ್, ಕಲ್ಯಾಣ್ ಕುಮಾರ್, ಶ್ರೀನಾಥ್, ಅನಂತ್ ನಾಗ್ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದರು.
ಹಿರಿಯ ನಟಿ ಜಯಂತಿ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ
ಹಿರಿಯ ನಟಿ ಜಯಂತಿ ಅವರ ನಿಧನಕ್ಕೆ ಮುಖ್ಯಮಂತ್ರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಹಲವು ಭಾಷೆಗಳ 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಜಯಂತಿ ಅವರು ಅಭಿನಯ ಶಾರದೆ ಎಂಬ ಬಿರುದಿಗೆ ಅನ್ವರ್ಥವಾಗಿದ್ದರು. ಎಡಕಲ್ಲು ಗುಡ್ಡದ ಮೇಲೆ, ಮಿಸ್ ಲೀಲಾವತಿ, ಜೇನು ಗೂಡು, ಬಹದ್ದೂರ್ ಗಂಡು ಮೊದಲಾದ ಚಿತ್ರಗಳಲ್ಲಿನ ಅವರ ಅಭಿನಯ ಜನಮನ ಸೂರೆ ಗೊಂಡಿತ್ತು. ಎಲ್ಲ ವಿಧವಾದ ಪಾತ್ರಗಳಲ್ಲೂ ಲೀಲಾಜಾಲವಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಅವರ ನಿಧನದಿಂದ ನಾಡು ಅದ್ಭುತ ಕಲಾವಿದೆಯನ್ನು ಕಳೆದುಕೊಂಡಿದೆ.
ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸು ವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಶ್ರೀ ಗೋವಿಂದ ಕಾರಜೋಳ
‘ಅಭಿನಯ ಶಾರದೆ’ ಎಂದೇ ಪ್ರಖ್ಯಾತಿ ಪಡೆದಿದ್ದ ಕನ್ನಡದ ಹೆಮ್ಮೆಯ ಮೇರು ನಟಿ ಶ್ರೀಮತಿ ಜಯಂತಿ ಅವರ ನಿಧನಕ್ಕೆ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಕಾರಜೋಳ ಅವರು ತೀವ್ರಸಂತಾಪ ಸೂಚಿಸಿದ್ದಾರೆ.
ಶ್ರೀಮತಿ ಜಯಂತಿ ನಿಧನರಾದ ಸುದ್ದಿ ಮನಸ್ಸಿಗೆ ಅತ್ಯಂತ ದುಃಖವನ್ನುಂಟು ಮಾಡಿದ್ದು, ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪರಿಮಿತವಾಗಿದೆ. ಮಾನವೀಯ ಮೌಲ್ಯ, ಸರಳತೆ ಸಜ್ಜನಿಕೆಯನ್ನು ಮೈಗೂಡಿಸಿಕೊಂಡು ಮಾದರಿಯಾಗಿದ್ದಾರೆ.
ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಕುಟುಂಬ ವರ್ಗದವರಿಗೆ, ಅವರ ಅಪಾರ ಅಭಿಮಾನಿಗಳಿಗೆ ದುಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಡಿಸಿಎಂ ತಿಳಿಸಿದ್ದಾರೆ.
ಕಣ್ಮರೆಯಾದ ಮೋಹಕ ತಾರೆ, ಜಯಂತಿ ನಿಧನಕ್ಕೆ ಸಚಿವ ಅರವಿಂದ ಲಿಂಬಾವಳಿ ತೀವ್ರ ಶೋಕ
ಭಾರತೀಯ ಚಿತ್ರರಂಗದ ದಿಗ್ಗಜ ಕಲಾವಿದರಲ್ಲಿ ಒಬ್ಬರಾಗಿದ್ದ ಅಭಿನಯ ಶಾರದೆ ಬಿರುದಾಂಕಿತ ಅಭಿನೇತ್ರಿ ಜಯಂತಿ ಅವರ ನಿಧನಕ್ಕೆ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಜಯಂತಿ ಅವರು ಈ ಶತಮಾನ ಕಂಡ ಅತ್ಯಂತ ಜನಪ್ರಿಯ ಮತ್ತು ಮೋಹಕ ನಟಿ ಎಂದು ಹೆಸರು ಮಾಡಿದವರು ,ಅನೇಕ ಮರೆಯಲಾಗದ ಚಲನ ಚಿತ್ರಗಳಲ್ಲಿ ಅಭಿನಯಿಸಿ ಚಿತ್ರಪ್ರೇಮಿಗಳ ಮನಸೂರೆಗೊಂಡಿದ್ದರು.
ಮೂಲತ: ಬಳ್ಳಾರಿ ಜಿಲ್ಲೆಯವರಾದ ಜಯಂತಿ 1963 ರಲ್ಲಿ ಜೇನುಗೂಡು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
ಕಮಲಕುಮಾರಿ ಆಗಿದ್ದ ಅವರು ಜಯಂತಿ ಆಗಿ ಬೆಳೆದು ಕನ್ನಡದ ಚಲನಚಿತ್ರರಂಗದ ಮೇರು ನಟಿಯಾಗಿ ಪರಿವರ್ತನೆಯಾದ ಸಂಗತಿಯೇ ಒಂದು ಅದ್ಭುತ.
ಡಾ.ರಾಜಕುಮಾರ್ ಅವರೊಂದಿಗೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ ಹೆಗ್ಗಳಿಕೆ ಜಯಂತಿ ಅವರದು. ಚಂದವಳ್ಳಿಯ ತೋಟ ದಿಂದ ಬಹದ್ದೂರ್ ಗಂಡು ವರೆಗೆ ಅವರು ರಾಜ್ ಅವರೊಂದಿಗೆ ನಟಿಸಿದ ಚಿತ್ರಗಳು ಸದಾ ಮನದಲ್ಲಿ ಅಚ್ಚಳಿಯದೆ ಉಳಿದಿದೆ.
ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಅವರ ಅಭಿನಯ ಸಾರ್ವಕಾಲಿಕ ಶ್ರೇಷ್ಠ ಎಂದು ಪರಿಗಣಿಸಲ್ಪಟ್ಟಿದೆ.
ಜಯಂತಿ ಅವರ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ಅದ್ಭುತ ಕಲಾವಿದೆಯನ್ನು ಕಳೆದುಕೊಂಡಿದೆ, ಅವರು ಮರೆಯಾದರೂ ಅವರ ಚಿತ್ರಗಳ ಮೂಲಕ ಅವರು ಸದಾ ಚಿತ್ರ ಪ್ರೇಮಿಗಳ ಹೃದಯದಲ್ಲಿ ಅಮರ ರಾಗಿರುತ್ತಾರೆ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English