ಸುರತ್ಕಲ್ : ವಿನಾಯಕ ಫ್ರೆಂಡ್ಸ್ ಕ್ಲಬ್ ಮೂರನೇ ಬ್ಲಾಕ್ ಕಾಟಿಪಳ್ಳ ಮತ್ತು ಗಗ್ಗರ ದೈವೋಲೆನ ಪದಿನಾಜಿ ಕಟ್ಲೆ ಇದರ ಸಹಯೋಗದಲ್ಲಿ ‘ಆಟಿ ಕಳೆಂಜ ನಿಮ್ಮ ಮನೆಗೆ’ ಎಂಬ ಆಟಿಕಳಂಜ ಮನೆ ಮನೆ ಗೆ ಭೇಟಿ ನೀಡುವ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ಆರಂಭಗೊಂಡಿತು.
ದೈವದ ಮಧ್ಯಸ್ಥ ರವಿರಾಜ ಶೆಟ್ಟಿ ಮಾತನಾಡಿ ಅಳಿಯುತ್ತಿರುವ ಆಟಿಕಳಂಜ ಸಂಪ್ರದಾಯದ ಉಳಿಯುವಿಕೆಗಾಗಿ ವಿನಾಯಕ ಫ್ರೆಂಡ್ಸ್ ಕ್ಲಬ್ ಕಾಟಿಪಳ್ಳ ಮತ್ತು ಗಗ್ಗರ ದೈವೋಲೆನ ಪದಿನಾಜಿ ಕಟ್ಲೆ ಇದರ ಪ್ರಯತ್ನ ಶ್ಲಾಘನೀಯ ಎಂದರು.
ಸ್ಥಳೀಯ ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆ ಶುಭ ಕೋರಿದರು. ವಿನಾಯಕ ಪ್ರೆಂಡ್ಸ್ ನ ಸರ್ವ ಸದಸ್ಯರು, ವಿನಾಯಕ ಭಜನಾ ಮಂದಿರ ದ ಅಧ್ಯಕ್ಷರಾದ ಹರೀಶ್ ಬಂಗೇರ,ವಿನಾಯಕ ಪ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ವಿಶ್ವನಾಥ ಮಾನೆ ಗಗ್ಗರ ದೈವೋಲೆನ ಪದಿನಾಜಿ ಕಟ್ಲೆ ಇದರ ಸುನೀಲ್ ಕೃಷ್ಣಾಪುರ ಇದ್ದರು. ನವೀನ್ ಕುತ್ತಾರ್ ಇವರ ತಂಡದ ಆಟಿ ಕಳಂಜ ವನ್ನು ಕಾಟಿಪಳ್ಳದ ನಾಗರಿಕರು ಪ್ರಶಂಸಿಸಿದ್ದಾರೆ.
ಊರಿಗೆ ಬರುವ ಮಾರಿ ಕಳೆವ ‘ಆಟಿ ಕಳೆಂಜ’: ತುಳುನಾಡಿನ ವಿಶಿಷ್ಟ ಆಚರಣೆ
ಊರಿಗೆ ಬಂದ ಮಾರಿ, ಕಷ್ಟಕಾರ್ಪಣ್ಯಗಳನ್ನು ತೊಡೆದು ಹಾಕಲೆಂದು ದ.ಕ.ಜಿಲ್ಲೆಯಲ್ಲಿ ಆಷಾಢ ಮಾಸದಲ್ಲಿ ‘ಆಟಿ ಕಳೆಂಜ’ ಎಂಬ ಜನಪದ ಆಚರಣಾತ್ಮಕ ಕಲಾ ಪ್ರಕಾರವೊಂದು ಮನೆಮನೆಗೆ ಬರುತ್ತದೆ. ಈ ಆಟಿ ಕಳೆಂಜನು ಊರಿಗೆ ಬಂದ ಮಾರಿಯನ್ನು, ಮನುಷ್ಯ, ಸಾಕುಪ್ರಾಣಿಗಳು ಮತ್ತು ಬೆಳೆಗಳಿಗೆ ಬಂದ ರೋಗಗಳನ್ನು ಕಳೆಯುವವನು ಎಂದರ್ಥ.
ಆಟಿ ಕಳೆಂಜ ನನ್ನು ರೋಗ ಕಳೆವ ಮಾಂತ್ರಿಕನ ರೀತಿಯಲ್ಲಿ ಆರಾಧನೆ ಮಾಡಲಾಗುತ್ತದೆ. ಆಷಾಢ ಅಥವಾ ಆಟಿ ಎಂದೆ ಜಡಿ ಮಳೆ ಬರುವ ಕಾಲ. ಈ ಸಮಯದಲ್ಲಿ ಕರಾವಳಿಯಲ್ಲಿ ದೈವಗಳು ಘಟ್ಟ ಹತ್ತುತ್ತವೆ ಎಂಬ ನಂಬಿಕೆಯಿದೆ. ಆದ್ದರಿಂದ ಆಟಿಯ ಒಂದು ತಿಂಗಳ ಕಾಲ ದೈವಸ್ಥಾನಗಳ ಬಾಗಿಲು ಹಾಕಲಾಗುತ್ತದೆ. ಈ ಸಂದರ್ಭದಲ್ಲಿ ಊರಿಗೆ ಬಂದ ಸಂಕಷ್ಟವನ್ನು ಕಳೆಯಲೆಂದೇ ಕಳೆಂಜ ಬರುತ್ತಾನೆ ಎಂಬ ನಂಬಿಕೆಯಿದೆ.
ಈಗೆ ಬಂದ ಆಟಿ ಕಳೆಂಜ ದುಷ್ಟ ಶಕ್ತಿಯನ್ನು ಕುಣಿತ ಹಾಗೂ ನೃತ್ಯದ ಮೂಲಕ ಹೋಗಲಾಡಿಸುತ್ತಾನೆ ಎಂ ಆಶಯವಿದೆ. ಈ ಸಾಂಪ್ರದಾಯಿಕ ನೃತ್ಯವನ್ನು ನಲಿಕೆ (ಭೂತಕೋಲದ ವೇಷ ಹಾಕುವವರು) ಸಮುದಾಯದವರು ಮಾಡುತ್ತಾರೆ. ಅವರು ಆಟಿ ಕಳೆಂಜದ ವೇಷವನ್ನು ಹಾಕಿ ಮನೆ ಮನೆಗೆ ಹೋಗುವುದರಿಂದ ಮನೆಯನ್ನು ಸೇರಿಕೊಂಡಿರುವ ಮಾರಿ ಓಡಿಹೋಗುತ್ತದೆ ಅನ್ನುವ ನಂಬಿಕೆಯಿದೆ. ಕಳೆಂಜದ ವೇಷವು ತೆಂಗಿನ ಎಳೆಯ ಗರಿಗಳಿಂದ ಹೆಣೆದು ಮಾಡಿದ ಉಡುಗೆ, ಕೆಂಪು ಚಲ್ಲಣ, ಅಡಿಕೆ ಮರದ ಹಾಳೆಯಿಂದ ಮಾಡಿದ ಶಿರಸ್ತ್ರಾಣ, ಗೆಜ್ಜೆಯನ್ನು ಧರಿಸುತ್ತಾರೆ. ತೆಂಗಿನ ಗರಿಯಿಂದ ಮಾಡಿದ ತತ್ರ(ಕೊಡೆ) ವನ್ನು ಹಿಡಿದಿರುತ್ತಾರೆ.
ಕಳೆಂಜನು ಆ ಕೊಡೆಯನ್ನು ತಿರುಗಿಸುತ್ತಾ ಮನೆಮನೆಗೆ ತೆರಳಿ ಪಾಡ್ದನ ಹಾಡುವಾತ ಹೇಳುವ ಪಾಡ್ದನ, ತೆಂಬರೆಯ ನಾದಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಿರುತ್ತಾನೆ. ಆತ ತೆಂಬರೆಯನ್ನು ಬಾರಿಸುತ್ತಾ ಕಳೆಂಜ ಭೇಟಿ ನೀಡುವ ಪ್ರತಿ ಮನೆಯವರು ಅಕ್ಕಿ, ಫಲವಸ್ತುಗಳು, ತೆಂಗಿನ ಕಾಯಿ, ಎಲೆ-ಅಡಿಕೆ, ಹಣವನ್ನು ದಾನವಾಗಿ ನೀಡುತ್ತಾರೆ. ಈ ಮೂಲಕ ಮನೆಗೆ ಸೋಕಿದ ದುಷ್ಟ ಶಕ್ತಿಯನ್ನು ಕಳೆಯುತ್ತಾನೆ. ನಂತರ ತೋಟದಲ್ಲಿ ಬೆಳೆದ ಬಾಳೆಗೊನೆ, ತೆಂಗಿನ ಕಾಯಿಯನ್ನು ಹೇಳದೆ ಕೇಳದೆ ಕೊಂಡೊಯ್ಯುವ ಪದ್ಧತಿ ಇದೆ. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ಇದರಿಂದ ಬೆಳೆಗಳಿಗೆ ತಟ್ಟಿದ ರೋಗ ಮಾಯವಾಗುತ್ತದೆ.
ಹೀಗೆ ಮನೆಯ ಅಂಗಳಕ್ಕೆ ಬಂದು ಕುಣಿದ ಆಟಿ ಕಳೆಂಜನಿಗೆ ಗೆರಸೆಯಲ್ಲಿ(ತಡ್ಪೆ) ಭತ್ತ ಅಥವಾ ಅಕ್ಕಿ, ಹುಳಿ, ಮೆಣಸು, ಉಪ್ಪು, ಒಂದು ತುಂಡು ಇದ್ದಲು, ಸ್ವಲ್ಪ ಅಟ್ಟದ ಮಸಿ ಇಟ್ಟುಕೊಡುತ್ತಾರೆ. ಅಲ್ಲದೆ ಆತ ಅಂಗಳ ಇಳಿದು ಹೋಗುವಾಗ ಸುಣ್ಣ ಮಿಶ್ರಿತ ಅರಿಶಿಣದ ನೀರಿನಲ್ಲಿ ಆತನಿಗೆ ಆರತಿ ಎತ್ತಿ ಆ ನೀರನ್ನು ದಾರಿಗಡ್ಡವಾಗಿ ಉದ್ದಕ್ಕೆ ಚೆಲ್ಲುತ್ತಾರೆ. ಹೀಗೆ ಮಾಡಿದರೆ ಮನೆಯ ಅಶುಭ ಕಳೆಯುತ್ತದೆ ಎಂದು ತುಳುನಾಡ ಜನರ ನಂಬಿಕೆಯಿದೆ. ಇಂದು ಈ ಕುಣಿತ ಪ್ರಕಾರವು ಅಳಿವಿನಂಚಿನಲ್ಲಿದ್ದು, ಅಲ್ಲೊಂದು, ಇಲ್ಲೊಂದು ಕಡೆಗಳಲ್ಲಿ ಈ ಕುಣಿತ ಕಾಣಿಸಿಕೊಳ್ಳುತ್ತಿದೆ. ಜನಪದರು ಶ್ರದ್ಧೆಯಿಂದ ಆಚರಿಸಿಕೊಂಡು ಬರುತ್ತಿದ್ದ ಇಂತಹ ಆಚರಣೆಗಳನ್ನು ಉಳಿಸಬೇಕಾಗಿದೆ.
Click this button or press Ctrl+G to toggle between Kannada and English