ಪುಷ್ಪ ಬೆಳೆಗಾರರ ಆದಾಯ ಕಿತ್ತುಕೊಂಡ ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿ ನಿಷೇಧವನ್ನು ಕೂಡಲೇ ಹಿಂಪಡೆಯಿರಿ

1:55 PM, Thursday, August 12th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Flower Marchantಬೆಂಗಳೂರು :  ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಸರಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿಯನ್ನು ಬಳಸಬಾರದು ಎಂದಿರುವುದು ಮೊದಲೇ ಲಾಕ್ ಡೌನ್ ಮತ್ತು ಯಾವುದೇ ಸಮಾರಂಭಗಳಿಲ್ಲದೆ ಆರ್ಥಿಕ ಸಂಕಷ್ಟಕ್ಕೊಳಗಾದ ರಾಜ್ಯದ ಪುಷ್ಪ ಬೆಳೆಗಾರ ರೈತರ ಮೇಲೆ ಮಾಡಿದ ಗಧಾಪ್ರಹಾರ ಎಂದು  ಪುಷ್ಪ ಬೆಳೆಗಾರರು ಹಾಗೂ ಮಾರಾಟಗಾರರ ಸಂಘಟನೆಗಳು ಪ್ರತಿಭಟನೆಗೆ ಇಳಿದಿದೆ.

ಕೆಲ ದಿನಗಳ ಹಿಂದೆ ವಿ.ಸುನಿಲ್ ಕುಮಾರ್ ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯ ನೂತನ ಸಚಿವರು ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿ ವೆಸ್ಟ್, ಅದರ ಬದಲು ಪುಸ್ತಕ ಕೊಡಿ ಎಂದಿದ್ದರು. ಅದನ್ನೇ ಮುಖ್ಯಮಂತ್ರಿಗಳು ಎಲ್ಲಾ ಸರಕಾರಿ ಕಾರ್ಯಕ್ರಮಗಳಲ್ಲಿ ನಿಷೇದಿಸುವುದಾಗಿ ಹೇಳಿದ್ದರು.

ರಾಜ್ಯದ ಲಕ್ಷಾಂತರ ಹೂವಿನ ಕೃಷಿಕರು ತಮ್ಮ ಜೀವನಕ್ಕಾಗಿ ಹೂವಿನ ವ್ಯಾಪಾರವನ್ನೇ ನಂಬಿದ್ದಾರೆ. ಎಕರೆಗಟ್ಟಲೆ ಹೂವಿನ ತೋಟಗಳಲ್ಲಿ ನೂರಾರು ಕಾರ್ಮಿಕರು ದುಡಿಯುತ್ತಿದ್ದಾರೆ. ವೈಜ್ಞಾನಿಕ ಅಥವಾ ಸಂಶೋಧನಾತ್ಮ ಅಂಶಗಳಿಲ್ಲದೆ ನಿಷೇಧಿಸಿರುವುದು ಸರಕಾರ ರೈತರ ಮೇಲೆ ಮಾಡಿರುವ ಗಧಾಪ್ರಹಾರ ಎಂದು ಹೇಳಿದ್ದಾರೆ .

ಕರೋನಾ ಸಂಕಷ್ಟದಿಂದ  ಇನ್ನು ಚೇತರಿಸದ  ರಾಜ್ಯದ ಪುಷ್ಪ ಬೆಳೆಗಾರ ರೈತರ ಮೇಲೆ ಗಧಾಪ್ರಹಾರವನ್ನು ಮಾಡುವಂತಹ ಮುಖ್ಯ ಕಾರ್ಯದರ್ಶಿ ರವಿ ಕುಮಾರ್‌ ಅವರ ಆದೇಶವನ್ನು ಈ ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಇಂದು ನಗರದ ಅಂತರಾಷ್ಟ್ರೀಯ ಪುಷ್ಪ ಮಾರುಕಟ್ಟೆ ಹೆಬ್ಬಾಳದಲ್ಲಿ ಪುಷ್ಪ ಬೆಳೆಗಾರರು ಹಾಗೂ ಮಾರಾಟಗಾರರು ಪ್ರತಿಭಟನೆಯನ್ನು ಮಾಡಿದರು.

Flower Marchantಪ್ರತಿಭಟನೆಯ ನೇತೃತ್ವ ವಹಿಸಿದ್ದ ದಕ್ಷಿಣ ಭಾರತ ಪುಷ್ಪ ಬೆಳೆಗಾರರ ಸಂಘದ ಅಧ್ಯಕ್ಷರಾದ ಟಿ ಎಂ ಅರವಿಂದ್‌ ಮಾತನಾಡಿ, ಸರಕಾರದ ಮುಖ್ಯ ಕಾರ್ಯದರ್ಶಿಗಳಾದ ರವಿಕುಮಾರ್‌ ಅವರು, ಸರಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿಯನ್ನು ನೀಡದಂತೆ ಆದೇಶವನ್ನು ಹೊರಡಿಸಿದ್ದಾರೆ. ಇದು ರಾಜ್ಯದ 7500 ಹೆಕ್ಟೇರ್‌ ಪ್ರದೇಶದಲ್ಲಿ ಪುಷ್ಪ ಕೃಷಿಯಲ್ಲಿ ತೊಡಗಿಕೊಂಡಿರುವ ಸಾವಿರಾರು ಜನ ರೈತರ ಕುಟುಂಬಗಳ ಮೇಲಿನ ಗಧಾಪ್ರಹಾರವಾಗಿದೆ. ಈ ನಿರ್ಧಾರದ ಹಿಂದೆ ಯಾವುದೇ ವೈಜ್ಞಾನಿಕ ಅಥವಾ ಸಂಶೋಧನಾತ್ಮ ಅಂಶಗಳ ಕಂಡು ಬರುತ್ತಿಲ್ಲ. ಈ ನಿಷೇಧದಿಂದಾಗಿ ಕರೋನಾ ಸಂಕಷ್ಟದಿಂದ ತೊಂದರೆಗೀಡಾಗಿರುವ ಪುಷ್ಪ ಬೆಳೆಗಾರರ ಚೇತರಿಕೆ ಮತ್ತಷ್ಟು ನಿಧಾನವಾಗುತ್ತದೆ. ವರ್ಷಗಳಿಂದ ಯಾವುದೇ ಸಭೆ ಸಮಾರಂಭಗಳು ನಡೆಯದೇ ತೊಂದರೆಗೀಡಾಗಿದ್ದ ರೈತರು ಇನ್ನಷ್ಟು ಕಷ್ಟಕ್ಕೆ ಸಿಲುಕಿಕೊಂಡು ಆತ್ಮಹತ್ಯೆಯಂತಹ ದಾರಿಯನ್ನು ಕಂಡುಕೊಳ್ಳುವಂತಾಗಿದೆ. ಕೋಟ್ಯಾಂತರ ರೂಪಾಯಿಗಳ ಹಣವನ್ನು ತೊಡಗಿಸಿ ಪುಷ್ಪ ಕೃಷಿಯಲ್ಲಿ ತೊಡಗಿಕೊಂಡಿರುವರು ಬಹಳಷ್ಟು ಸಂಕಷ್ಟಕ್ಕೆ ಬೀಳುವಂತಾಗಿದೆ ಎಂದು ಹೇಳಿದರು.

ಫ್ಲವರ್‌ ಕೌನ್ಸಿಲ್‌ ಆಫ್‌ ಇಂಡಿಯಾದ ಅಧ್ಯಕ್ಷರಾದ ಶ್ರೀಕಾಂತ್‌ ಬೊಲ್ಲಪಳ್ಳಿ ಮಾತನಾಡಿ, ಪುಷ್ಪ ಕೃಷಿ ಕ್ಷೇತ್ರ ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡುತ್ತಿದೆ. 7500 ಹೆಕ್ಟೇರ್‌ ನಷ್ಟು ಭೂಮಿಯಲ್ಲಿ ಗ್ರೀನ್‌ ಹೌಸ್‌ ಮೂಲಕ ಪುಷ್ಪ ಕೃಷಿಯನ್ನು ನಡೆಸಲಾಗುತ್ತಿದೆ. ಅಲ್ಲದೆ, ಇದನ್ನು ಹೊರಪಡಿಸಿ ಲಕ್ಷಾಂತರ ಎಕರೆಗಳಲ್ಲಿ ಹೂವನ್ನು ಬೆಳೆಯಲಾಗುತ್ತಿದೆ. ಒಂದು ಎಕರೆಯಲ್ಲಿ ಸುಮಾರು ಆರು ಜನ ಒಂದು ಹೆಕ್ಟೇರ್‌ ನಲ್ಲಿ ಸುಮಾರು 15 ಜನರು ಕಾರ್ಯನಿರ್ವಹಿಸುತ್ತಾರೆ. ಬೆಂಗಳೂರು ನಗರ ದೇಶದ ಪುಷ್ಪೋದ್ಯಮದ ಪ್ರಮುಖ ಹಬ್‌ ಆಗಿದ್ದು, ಬೆಂಗಳೂರಿನಿಂದ ದೇಶ ಹಾಗೂ ವಿದೇಶಕ್ಕೆ ಹೂಗಳು ರಫ್ತಾಗುತ್ತವೆ. ವಿದೇಶಿ ವಿನಿಮಯ ಹಾಗೂ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿರುವ ಪುಷ್ಪ ಕೃಷಿಗೆ ಈ ರೀತಿ ನಿಷೇಧ ಹೇರುವ ಮೂಲಕ ಹೊಡೆತ ನೀಡುವುದು ಸರಿಯಲ್ಲ ಎಂದು ಹೇಳಿದರು.

ರಾಜ್ಯದ ಹೂ ಬೆಳೆಗಾರ ರೈತರು ಹಾಗೂ ಪುಷ್ಪೋದ್ಯಮದಲ್ಲಿ ತೊಡಗಿಕೊಂಡಿರುವ ಲಕ್ಷಾಂತರ ಜನರ ಜೀವನ ಆಧಾರ ಉದ್ಯಮಕ್ಕೆ ಈ ರೀತಿ ಕೊಡಲಿ ಪೆಟ್ಟು ನೀಡುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಹೂಗುಚ್ಚ, ಹಾರ, ಹಣ್ಣಿನ ಬುಟ್ಟಿಯನ್ನು ಹಿಡಿದುಕೊಂಡು ವಿನೂತನವಾಗಿ ನಡೆಸಿದ ಪ್ರತಿಭಟನೆಯಲ್ಲಿ, ರಾಜ್ಯದ ಎಲ್ಲಾ ಪುಷ್ಪ ಬೆಳೆಗಾರರು ಹಾಗೂ ಪುಷ್ಪ ಬೆಳೆಗಾರರ ರೈತ ಸಂಘಟನೆಗಳು, ರಾಜ್ಯದ ಎಲ್ಲಾ ಪುಷ್ಪ ಮಾರಾಟಗಾರರು ಮತ್ತು ಪುಷ್ಪ ಮಾರಾಟಗಾರರ ಸಂಘಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English