ಉಡುಪಿ : ಸೌದಿ ಅರೇಬಿಯಾದ ದೊರೆ ಹಾಗೂ ಧರ್ಮದ ಬಗ್ಗೆ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಗಳನ್ನು ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಹಾಕಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಈ ಸಂಬಂಧ ಸೌದಿಯಲ್ಲಿ ಬಂಧಿತರಾಗಿರುವ ಕುಂದಾಪುರ ತಾಲೂಕಿನ ಹರೀಶ್ ಬಂಗೇರ ಅವರು ಆ.18ರಂದು ಬಿಡುಗಡೆಗೊಂಡು ಬೆಂಗಳೂರು ತಲುಪಲಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಹರೀಶ್ ಬಂಗೇರ ತಾಯ್ನಾಡಿಗೆ ಮರಳಲು ಪೂರೈಸಬೇಕಾಗಿದ್ದ ಕೆಲಸಗಳು ಪೂರ್ಣಗೊಂಡಿದ್ದು ಆ.17ರಂದು ಸೌದಿ ಅರೇಬಿಯಾದ ದಮ್ಮಾಮ್ ವಿಮಾನ ನಿಲ್ದಾಣದಿಂದ ದೋಹಾ ಹೊರಟು ಆ.18 ರಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ ಎಂದು ಸೌದಿ ಅರೇಬಿಯಾದ ರಿಯಾದ್ ನಲ್ಲಿರುವ ಭಾರತೀಯ ದೂತವಾಸದಿಂದ ತನಗೆ ಅಧಿಕೃತ ಮಾಹಿತಿ ಬಂದಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಫೇಸ್ ಬುಕ್ ನಲ್ಲಿ ಸೌದಿ ದೊರೆ ಹಾಗೂ ಮಕ್ಕಾದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಹರೀಶ್ ಬಂಗೇರರನ್ನು ಸೌದಿ ಪೊಲೀಸರು 2019ರ ಡಿಸೆಂಬರ್ ನಲ್ಲಿ ಬಂಧಿಸಿದ್ದರು. ಈ ನಡುವೆ ಹರೀಶ್ ಬಂಗೇರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಸೌದಿ ದೊರೆ ಹಾಗೂ ಮಕ್ಕಾದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿರುವ ಬಗ್ಗೆ ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Click this button or press Ctrl+G to toggle between Kannada and English