ಸ್ನೇಹ ಪವಿತ್ರತೆಯ ಸೂಚಕ ರಾಖಿ

9:39 PM, Sunday, August 22nd, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Rakhiಹಬ್ಬಗಳ ತವರೂರಾದ ಭಾರತ ದೇಶದಲ್ಲಿ ಹಬ್ಬ ಹರಿದಿನಗಳಿಂದ ಕೂಡಿದ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವವಿದೆ. ಶ್ರವಣ, ಪೂಜಾ-ಪಾಠಗಳು, ಧ್ಯಾನ-ಧಾರಣೆಗಳು, ಚಿಂತನೆಗಳ ಮಾಸವೇ ಶ್ರಾವಣ. ನಾಗಚೌತಿ, ನಾಗಪಂಚಮಿ, ಶ್ರಾವಣ ಸೋಮವಾರ, ಶ್ರಾವಣ ಶುಕ್ರವಾರ, ಗೋಕುಲಾಷ್ಟಮಿ, ನೂಲಹುಣ್ಣಿಮೆ ಹೀಗೆ ಪ್ರತಿದಿನವು ಹಬ್ಬ. ಈ ಎಲ್ಲ ಹಬ್ಬಗಳಲ್ಲಿ “ನೂಲಹುಣ್ಣಿಮೆ” ಅಥವಾ `ರಕ್ಷಾಬಂಧನ’ಕ್ಕೆ ತನ್ನದೇ ಆದ ಮಹತ್ವವಿದೆ.

ನಾವೆಲ್ಲಾ ಭಾರತೀಯರು ವಿದೇಶಿಯರ ಅನುಕರಣೆಯಿಂದ ನಮ್ಮ ನಿಜವಾದ ಸಂಸ್ಕೃತಿಯನ್ನು ಮರೆತು ಸ್ನೇಹ ಅತ್ಮೀಯತೆಯಿಂದ ದೂರ ಹೋಗುತ್ತಿದ್ದೇವೆ. ಇಂದಿನ ಯುವ ಪೀಳಿಗೆ `ಪ್ರೇಮಿಗಳ ದಿನ’ಕ್ಕೆ ಮಹತ್ವವನ್ನು ನೀಡುತ್ತಿದೆಯೇ ಹೊರತು ಸಹೋದರತ್ವದ ಪವಿತ್ರ ಭಾವನೆಯನ್ನು ಬೆಳೆಸುವ ಸ್ನೇಹದ ಸೂಚಕವಾದ ರಕ್ಷಾಬಂಧನಕ್ಕೆ ಬೆಲೆ ಇಲ್ಲದಂತಾಗಿದೆ. ಮೊಬೈಲ್ನಲ್ಲಿ ಅಶ್ಲೀಲ ಚಿತ್ರ ಹಾಗೂ ಸಂದೇಶಗಳನ್ನು ಕಳುಹಿಸುವ ಪ್ರವೃತ್ತಿ ಮಹಾನಗರಗಳಲ್ಲಿ ಹೆಚ್ಚಾಗುತ್ತಿದೆ. ಕಾಮುಕ ಮನೋವೃತ್ತಿಯಿಂದ ಅನೇಕ ನಾರಿಯರು ಇಂದು ಅತ್ಯಾಚಾರ ಮತ್ತು ಅನ್ಯಾಯಕ್ಕೆ ಬಲಿಯಾಗುತ್ತಿದ್ದಾರೆ. ಆಧುನಿಕತೆಯ ವೇಷದಲ್ಲಿ ಸಮಾಜವು ಅಧೋಗತಿಗೆ ಹೋಗುತ್ತಿದೆ. ಪವಿತ್ರತೆಯ ಆಧಾರದಿಂದ ಈ ಪರಿಸ್ಥಿತಿಯನ್ನು ಬದಲಾಯಿಸಬಹುದು. ಪುರುಷರು ನಾರಿಯರನ್ನು ನೋಡುವ ದೃಷ್ಡಿಯು ಪರಿವರ್ತನೆ ಆಗಬೇಕು. ಅವರನ್ನು ಸಬಲೆಯ ರೂಪದಲ್ಲಿ, ದೇವಿಯ ರೂಪಗಳಾದ ಶಕ್ತಿ, ಮಹಾಕಾಳಿ, ದುರ್ಗಾ ಮುಂತಾದ ರೂಪಗಳಲ್ಲಿ ಕಾಣಬೇಕು. `ಯತ್ರ ನಾರಿಸ್ಯ ಪೂಜ್ಯಂತೆ ರಮಂತೆ ತತ್ರ ದೇವತ:’ ಎಂಬ ಮೌಲ್ಯಯುತ ಮಹಾವಾಕ್ಯವನ್ನು ಸಾಕಾರಗೊಳಿಸಬೇಕಾಗಿದೆ.

ಸಂಕಟದ ಸಮಯದಲ್ಲಿ ಮಾನವರೆಲ್ಲರೂ ನಾನಾ ಪ್ರಕಾರದ ರಕ್ಷಣೆಯನ್ನು ಬಯಸುತ್ತಾರೆ. 1) ತನುವಿನ ರಕ್ಷಣೆ 2) ಮನಸ್ಸಿನ ರಕ್ಷಣೆ 3) ಧನದ ರಕ್ಷಣೆ 4) ಧರ್ಮ ಅಥವಾ ಪವಿತ್ರತೆಯ ಅಥವಾ ಸತೀತ್ವದ ರಕ್ಷಣೆ 5) ಆಪತ್ತುಗಳು ಹಾಗೂ ಸಂಕಟಗಳಿಂದ ರಕ್ಷಣೆ 6) ಕಾಲ ಅಥವಾ ಮೃತ್ಯುವಿನ ಯಮಪಾಶದಿಂದ ರಕ್ಷಣೆ – ಇವು ಮುಖ್ಯವಾದ ರಕ್ಷಣೆಗಳಾಗಿವೆ. ಮೃತ್ಯುವು ಸನ್ನಿಹಿತವಾದಾಗ ನಿಗದಿಯಾಗಿರುವ ಮೃತ್ಯುವಿನಿಂದ ರಕ್ಷಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಮಾಯೆಯ ಬಂಧನಗಳಿಂದ ಅಥವಾ ತಾಮಸಿಕ ವಿಕಾರಗಳಿಂದ ಮುಕ್ತನಾಗಲು ಭಗವಂತನಿಗೆ ಶರಣು ಹೋಗಬೇಕಾಗುತ್ತದೆ. ಆದ್ದರಿಂದಲೇ ವಿಷಯ ವಿಕಾರಗಳನ್ನು ನಾಶಮಾಡು, ಪಾಪವನ್ನು ಹರಿಸು ಎಂದು ಪತಿತಪಾವನ, ಪಾಪಕಟೇಶ್ವರನಾದ ಪರಮಾತ್ಮನಿಗೆ ಪ್ರಾರ್ಥನೆ ಮಾಡುತ್ತಾರೆ. ಧರ್ಮದ, ಪವಿತ್ರತೆಯ ಹಾಗೂ ಸತೀತ್ವದ ರಕ್ಷಣೆಯನ್ನು ಸರ್ವಸಮರ್ಥನಾದ ಭಗವಂತನೊಬ್ಬನೇ ಮಾಡಲು ಸಾಧ್ಯವಿದೆ. ಇದಕ್ಕೆ ದ್ರೌಪದಿಯ ದೃಷ್ಟಾಂತವಿದೆ. ಕಾಲ ಅಥವಾ ಯಮನ ಪಾಶದಿಂದ ಪಾರು ಮಾಡುವವನು ಕಾಲರಕಾಲ ಮಹಾಕಾಲ ಮಹಾಕಾಲೇಶ್ವರನೇ ಆಗಿದ್ದಾನೆ. ಯಾರನ್ನು ಈಶ್ವರನು ರಕ್ಷಣೆ ಮಾಡುತ್ತಾನೆಯೋ ಅವರಿಗೆ ಇಡೀ ಪ್ರಪಂಚವೇ ವೈರಿಯಾದರೂ ಅವರ ಕೂದಲನ್ನೂ ಕೊಂಕಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಭಕ್ತ ಮಾರ್ಕಂಡೇಯನ ದೃಷ್ಟಾಂತವಿದೆ. ಸಾಂಸಾರಿಕ ಆಪತ್ತುಗಳು ಆಥವಾ ಲೌಕಿಕ ಸಂಕಟಗಳಿಂದಲೂ ರಕ್ಷಣೆಯನ್ನು ಈಶ್ವರನ ಹೊರತು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಅದ್ದರಿಂದಲೇ ಅವನಿಗೆ ದುಃಖಹರ, ಸುಖಕರ, ವಿಘ್ನವಿನಾಶಕ ಎಂದು ಕರೆಯುತ್ತಾರೆ. ಪವಿತ್ರತೆಯ ಸಂಕೇತದ ನವಿಲು ಗರಿ ಕೃಷ್ಣನ ಮುಕುಟದಲ್ಲಿ ತೊರಿಸಲಾಗಿದೆ. ಸಿಖ ಧರ್ಮದಲ್ಲಿ ಕಂಕಣ, ಸನಾತನ ಧರ್ಮದಲ್ಲಿ ಜನೆವು, ಶಿವದಾರ ಮುಂತಾದವು ಪವಿತ್ರತೆ ಪ್ರತೀಕವಾಗಿದೆ. ಈ ಸಮಯದಲ್ಲಿ ಪವಿತ್ರವಾಗಿರುವುದು ಮುಖ್ಯವಾಗಿದೆ.
ಭಗವದ್ಗೀತೆಯಲ್ಲಿ ಮನೋವಿಕಾರಗಳ ಬಗ್ಗೆ ಈ ರೀತಿ ಹೇಳಲಾಗಿದೆ :

ತ್ರಿವಿಧಂ ನರಕಸ್ಯೇದಂ ದ್ವಾರಂ ನಾಶನಮಾತ್ಮನ:
ಕಾಮ: ಕ್ರೋಧಸ್ತಥಾ ಲೋಭಸ್ತಸ್ಮಾದೇತತ್ರಯಂ ತ್ಯಜೇತ್ (ಅ-16 ಶ್ಲೋ-21)

ಸಕಲಜೀವರಾಶಿಗಳಿಗೆ ಲೇಸನ್ನು ಬಯಸುವ, ಸಬಕ್ ಮಾಲೀಕ್ ಏಕ್ ಎಂದು ಕರೆಸಿಕೊಳ್ಳುವ ಸರ್ವರ ರಕ್ಷಕ ಭಗವಂತನ ಜೊತೆಗೆ ಸಂಬಂಧದ ಬಂಧನವೇ ರಕ್ಷಾಬಂಧನ. ಅವನನ್ನು ತಿಳಿದು, ಅವನನ್ನೇ ನೆನೆಯುತ್ತಾ, ನಾವೆಲ್ಲರೂ ಅವನ ಮಕ್ಕಳು ಎಂದು ತಿಳಿದು ನಡೆದಾಗ `ವಸುಧೈವ ಕುಟುಂಬಕಂ’ ಎಂಬ ಭಾವನೆ ಸಾಕಾರವಾಗುವುದು. ನಾವೆಲ್ಲರೂ ಭಗವಂತನ ಮಕ್ಕಳು. ಪರಸ್ಪರ ಸಹೋದರ ಸಹೋದರಿಯರು. ನಮ್ಮ ಪವಿತ್ರ ಸ್ನೇಹದ ಸೂಚಕವೇ ರಾಖಿ. ಈ ಹಬ್ಬದಲ್ಲಿ ಸಹೋದರಿ ಸಹೋದರನಿಗೆ ರಾಖಿ ಕಟ್ಟಿ ಮಸ್ತಕದಲ್ಲಿ ತಿಲಕವನ್ನಿಟ್ಟು ಬಾಯಿಯನ್ನು ಸಿಹಿ ಮಾಡುತ್ತಾಳೆ. ಇದರ ಪ್ರತಿಯಾಗಿ ಸಹೋದರನು ಕಾಣಿಕೆಯನ್ನು ಕೊಡುತ್ತಾನೆ. ಮಸ್ತಕದಲ್ಲಿ ಇಡುವ ತಿಲಕ ಅತ್ಮಜ್ಯೋತಿಯ ಪ್ರತೀಕ, ಬಾಯಿ ಸಿಹಿ ಮಾಡುವುದೆಂದರೆ ಮಧುರವಾದ ನುಡಿಗಳನ್ನು ನುಡಿಯುವುದು, ರಾಖಿಯಲ್ಲಿ ಇರುವ ದಾರವು ಪವಿತ್ರತೆ, ಸ್ನೇಹ, ನಿಯಮ ಹಾಗೂ ಸಂಯಮದ ಸೂಚಕ, ದುರ್ಗುಣ, ದುಶ್ಚಟಗಳನ್ನು ಬಿಡುವುದೇ ನಾವು ನೀಡುವ ಅತಿದೊಡ್ಡ ಕಾಣಿಕೆ. ಹಾಗಾದರೆ ಬನ್ನಿ ನಾವೆಲ್ಲರೂ ಶ್ರೀರಕ್ಷೆಯಲ್ಲಿ ಬಂಧಿತರಾಗಿ ಇತರ ಅನೇಕ ಬಂಧನಗಳನ್ನು ಸ್ನೇಹದ ಸಂಬಂಧದಲ್ಲಿ ಪರಿವರ್ತಿಸಿ, ಜಾತಿ, ಮತ, ಭಾಷಾ-ಭೇದಗಳನ್ನು ಮರೆತು, ಸಹೋದರತ್ವದ ಭಾವನೆಯಿಂದ ಜೀವನದಲ್ಲಿ ಸುಖ-ಶಾಂತಿಯನ್ನು ಪಡೆಯೋಣ.

ಅನೇಕ ಪ್ರಕಾರದ ರಕ್ಷಣೆ ಪಡೆಯಲು ದಿನನಿತ್ಯ 3-4 ಬಾರಿ ಮನಸ್ಸಿನಲ್ಲಿ ಈ ಶ್ರೇಷ್ಠ ವಿಚಾರಗಳನ್ನು ಮಾಡಿದರೆ ನಮ್ಮ ರಕ್ಷಣೆಯೊಂದಿಗೆ ವಿಶ್ವದ ರಕ್ಷಣೆಯೂ ಸಹ ಆಗುವುದು.
ನಾನು ಆರೋಗ್ಯವಂತನಾಗಿದ್ದೇನೆೆ, ನನ್ನ ಪರಿವಾರ ಆರೋಗ್ಯವಾಗಿದೆ, ನನ್ನ ಮನೆ ನಿರೋಗಿಯಾಗಿದೆ, ನನ್ನ ಓಣಿ, ಊರು, ಜಿಲ್ಲೆ, ರಾಜ್ಯ, ದೇಶ, ಜಗತ್ತು ಸದೃಢವಾಗಿದೆ. ಪರಮಾತ್ಮನ ರಕ್ಷಾ-ಕವಚದಲ್ಲಿ ನಾವುಗಳು ನಿರ್ಭಯ, ಸುಖಿ, ಆರೋಗ್ಯವಂತರಾಗಿದ್ದೇವೆ.
ಸರ್ವೇ ಜನ: ಸುಖಿನೋಭವಂತು

–ವಿಶ್ವಾಸ. ಸೋಹೋನಿ.
ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್,

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English